ನೀರಿಲ್ಲದೆ ಬಣಗುತ್ತಿರುವ ಭರಚುಕ್ಕಿ ಜಲಪಾತ. 
ಚಾಮರಾಜನಗರ

ಕಳೆಗುಂದಿದ ಭರಚುಕ್ಕಿ ಜಲಪಾತ

ಅಭಿನಯ್ ಎಚ್.ಎಂ

ಪ್ರಮುಖ ಮುಖ್ಯಾಂಶಗಳು

  • ಸುಪ್ರಸಿದ್ಧ ಭರಚುಕ್ಕಿ ಜಲಪಾತ
  • ಬೇಸಿಗೆ ಆರಂಭದಲ್ಲಿಯೇ ನೀರಿಲ್ಲದೆ ಕಳೆಗುಂದಿದೆ
ಕೊಳ್ಳೇಗಾಲ: ಸುಪ್ರಸಿದ್ಧ ಭರಚುಕ್ಕಿ ಜಲಪಾತ ಬೇಸಿಗೆ ಆರಂಭದಲ್ಲಿಯೇ ನೀರಿಲ್ಲದೆ ಕಳೆಗುಂದಿದೆ. ಪರಿಣಾಮ ಪ್ರವಾಸಿಗರ ಸಂಖ್ಯೆ ಇಳಿಮುಖವಾಗುವುದರ ಜತೆಗೆ ಪ್ರವಾಸಿಗರನ್ನೇ ನಂಬಿ ಜೀವನ ನಡೆಸುತ್ತಿದ್ದವರಿಗೆ ಆರ್ಥಿಕವಾಗಿ ಪೆಟ್ಟು ಬಿದ್ದಿದೆ.
ವರ್ಷದ ಪ್ರಾರಂಭದಲ್ಲಿಯೇ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ಕುಸಿದಿತ್ತು. ದೇಶ-ವಿದೇಶ ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದ ವರ್ಷವಿಡೀ ಲಕ್ಷಾಂತರ ಜನರು ಜಲಪಾತ ನೋಡಲು ಆಗಮಿಸುತ್ತಾರೆ. ಮಳೆಗಾಲದಲ್ಲಿ ಜಲಪಾತ ಭೋರ್ಗರೆದು ಬೀಳುವ ರೌದ್ರರಮಣೀಯ ದೃಶ್ಯ ನೋಡಲು ಎರಡು ಕಣ್ಣು ಸಾಲದು. ಆದರೀಗ ಕಾವೇರಿ ನದಿಯಲ್ಲಿ ನೀರು ಕಡಿಮೆಯಾಗಿದೆ. ಇದರಿಂದ ಭರಚುಕ್ಕಿ ವೈಭವ ಸೊರಗಿದೆ. ಈ ನಡುವೆ ಐತಿಹಾಸಿಕ ಧಾರ್ಮಿಕ ಸ್ಥಳವಾದ ಶಿವನಸಮುದ್ರ ಸಮೂಹ ದೇವಾಲಯಗಳಾದ ಆದಿಶಕ್ತಿ ಶಿಂಷಾ ಮಾರಮ್ಮ, ಶ್ರೀಮಧ್ಯರಂಗನಾಥಸ್ವಾಮಿ, ಶ್ರೀಚಕ್ರ ಸಮೇತ ಮೀನಾಕ್ಷಿ ದೇವಾಲಯ ಹಾಗೂ ದರ್ಗಾಕ್ಕೆ ವಿಕೆಂಡ್‌ನಲ್ಲಿ ಹೆಚ್ಚು ಜನರು ಆಗಮಿಸುತ್ತಾರೆ. ಈ ವೇಳೆ ಪಕ್ಕದಲ್ಲಿಯೇ ಇರುವ ಭರಚುಕ್ಕಿ ಫಾಲ್ಸ್‌ಗೂ ತೆರಳುತ್ತಿದ್ದು ನೀರಿಲ್ಲದೆ ಕಲ್ಲು ಬಂಡೆಗಳ ದರ್ಶನ ಮಾಡಿ ಬೇಸರದಿಂದ ಹಿಂದಿರುಗುತ್ತಿದ್ದಾರೆ.
ಇನ್ನು ನೀರಿಲ್ಲದೆ ಪ್ರವಾಸಿಗರ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ಪ್ರವಾಸೋದ್ಯಮಕ್ಕೂ ಪೆಟ್ಟು ಬಿದ್ದಿದೆ. ಸತ್ತೇಗಾಲ ಹ್ಯಾಂಡ್‌ಪೋಸ್ಟ್‌ನಿಂದ ಭರಚುಕ್ಕಿ ಜಲಪಾತದವರೆಗೆ ಪ್ರವಾಸಿಗರನ್ನೇ ನಂಬಿ ಜೀವನ ಸಾಗಿಸುವ ವ್ಯಾಪಾರಿಗಳಿದ್ದಾರೆ. ಕಿರಾಣಿ ಅಂಗಡಿಯಿಂದ ಹಿಡಿದು ಹೋಟೆಲ್ ಉದ್ಯಮ ಇದರಿಂದಾಗಿ ಕಷ್ಟಕರವಾಗಿದೆ.
ವ್ಯಾಪಾರಕ್ಕೆ ಹಿಡಿದ ಗ್ರಹಣ: ಶಿವನಸಮುದ್ರ ಗ್ರಾಮದ ಭರಚುಕ್ಕಿ ಜಲಪಾತ, ಸತ್ತೇಗಾಲದಲ್ಲಿರುವ ಸಮೂಹ ದೇವಾಲಯಗಳು ಹ್ಯಾಂಡ್‌ಪೋಸ್ಟ್ ಹಾಗೂ ಶಿವನಸಮುದ್ರದ ಜನರಿಗೆ ವರದಾನವಾಗಿದೆ. ಮಳೆಗಾಲ ವ್ಯಾಪಾರಿಗಳಿಗೆ ಆರ್ಥಿಕ ಹಬ್ಬದಂತಿರುತ್ತದೆ. ಸಸ್ಯಾಹಾರಿ, ಮಾಂಸಾಹಾರಿ ಹೋಟೆಲ್‌ಗಳು, ಮೀನಿನ ಅಂಗಡಿ, ಹಣ್ಣುಗಳ ಅಂಗಡಿ, ಐಸ್‌ಕ್ರೀಂ ಅಂಗಡಿಯಲ್ಲಿ ಜನವೋ ಜನ. ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಗುತ್ತದೆ. ಆದರೆ ಕಳೆದ 2 ತಿಂಗಳನಿಂದ ನೀರಲ್ಲದ ಕಾರಣ ಫಾಲ್ಸ್ ವೀಕ್ಷಣೆಗೆ ಜನರು ಬರುತ್ತಿಲ್ಲ. ಇದರಿಂದ ವ್ಯಾಪಾರಿಗಳಿಗೆ ಗ್ರಹಣ ಹಿಡಿದಂತಾಗಿದೆ.
4 ತಿಂಗಳು ಕಳೆ: ಈಗಾಗಲೇ ಕಳೆದ 2 ತಿಂಗಳಿನಿಂದ ವ್ಯಾಪಾರ ಸಂಕಷ್ಟಕ್ಕೆ ಪ್ರವಾಸೋದ್ಯಮ ಸಿಲುಕಿದೆ. ಅರಣ್ಯ ಇಲಾಖೆ ಭರಚುಕ್ಕಿ ಜಲಪಾತ ಪ್ರವೇಶಕ್ಕೆ ನಿಗದಿಪಡಿಸಿದ ದರ ಸಂಗ್ರಹಣೆ ಪಾತಾಳಕ್ಕೆ ಇಳಿದಿದೆ. ಅರಣ್ಯ ಇಲಾಖೆ ಮಾಹಿಯಂತೆ ದಿನದಲ್ಲಿ 100-120 ಜನರು ಬಂದರೂ ಹೆಚ್ಚು. ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್‌ನ ವಾರದ ದಿನಗಳಲ್ಲಿ 800 ರಿಂದ 1000, ವಾರಾಂತ್ಯ ದಿನದಲ್ಲಿ 1000 ರಿಂದ 1200 ಪ್ರವಾಸಿಗರು ಭೇಟಿ ನೀಡುತ್ತಾರೆ. ಮಳೆ ಬಿದ್ದು ಕಾವೇರಿ ಮೈದುಂಬಿ ಹರಿದರೆ ಕಾನನದ ನಡುವೆ ಭೋರ್ಗರೆದು ಹಾಲ್ನೊರೆಯಂತೆ ಬೀಳುವ ಜಲಪಾತ ಪ್ರವಾಸಿಗರಿಗೆ ಸಿಗಲಿದೆ. ಅಲ್ಲಿಯವರೆಗೂ ವ್ಯಾಪಾರಗಳಿಗೆ ಸಂಕಷ್ಟ ತಪ್ಪಿದ್ದಲ್ಲ. ಹೀಗಾಗಿ ಅಂಗಡಿ ಮಾಲೀಕರು ಕೆಲ ದಿನಗಳ ಕಾಲ ಪರ್ಯಾಯ ಕೆಲಸ ಮಾಡಿ ಜೀವನ ಸಾಗಿಸುತ್ತಾರೆ.
ನನೆಗುದಿಗೆ ಬಿದ್ದ ಬಯೋಡೈವರ್ಸಿಟಿ ಪಾರ್ಕ್ : ಭರಚುಕ್ಕಿ ಜಲಪಾತ ನಾಡಿನ ಪ್ರೇಕ್ಷಣೀಯ ಸ್ಥಳದಲ್ಲೊಂದಾಗಿದೆ. ಉತ್ತಮ ಮಳೆಯಾದರೆ ಜಿಲ್ಲಾಡಳಿತ ಆಯೋಜಿಸುವ ಭರಚುಕ್ಕಿ ಜಲಪಾತೋತ್ಸವ ನೋಡಲು ಪ್ರವಾಸಿಗರು ತುದಿಗಾಲಲ್ಲಿ ನಿಲ್ಲುತ್ತಾರೆ. ಪ್ರವಾಸಿಗರನ್ನು ಸೆಳೆಯಲೂ 2019ರಲ್ಲಿ ಅರಣ್ಯ ಮತ್ತು ಪ್ರವಾಸೋದ್ಯಮ ಇಲಾಖೆ ಭರಚುಕ್ಕಿ ಅಂಗಳದಲ್ಲಿ ಸುಮಾರು 155 ಎಕರೆ ಪ್ರದೇಶದಲ್ಲಿ ಸುಮಾರು 100 ಕೋಟಿ ರೂ. ವೆಚ್ಚದ ಬಯೋಡೈವರ್ಸಿಟಿ ಪಾರ್ಕ್ ನಿರ್ಮಾಣಕ್ಕೆ ಚಿಂತನೆ ನಡೆಸಿತ್ತು. ಅರಣ್ಯ ಇಲಾಖೆ ಅಗತ್ಯ ಕ್ರಿಯಾಯೋಜನೆ ತಯಾರಿಸಿ ರಾಜ್ಯ ಸರ್ಕಾರದ ಅನುಮೋದನೆಗೆ ಸಲ್ಲಿಸಿತ್ತು. ಈ ಯೋಜನೆಗೆ ಸರ್ಕಾರ ಒತ್ತು ನೀಡದಿದ್ದರಿಂದ ಯೋಜನೆ ನನೆಗುದಿಗೆ ಬಿದ್ದಿದೆ. ಬಯೋಡೈವರ್ಸಿಟಿ ಪಾರ್ಕ್ ನಿರ್ಮಾಣವಾದರೆ ಸದಾ ಗಿಜುಗುಡುವ ರಾಜ್ಯದ ಉತ್ತಮ ಪ್ರವಾಸಿ ತಾಣವಾಗಿ ಭರಚುಕ್ಕಿ ಫಾಲ್ಸ್ ಹೊರಹೊಮ್ಮಲಿದೆ. ಸರ್ಕಾರ ಈ ಬಗ್ಗೆ ಕ್ರಮವಹಿಸಬೇಕೆಂಬುದು ಸಾರ್ವಜನಿಕರ ಒತ್ತಾಯ.
ಭರಚುಕ್ಕಿ ಜಲಪಾತಕ್ಕೆ ಪ್ರವಾಸಿಗರು ಆಗಮಿಸಿದರೆ ನಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಇಲ್ಲವಾದರೆ ಸಂಕಷ್ಟಕ್ಕೀಡಾಗುತ್ತೇವೆ. ಕಳೆದ 2 ತಿಂಗಳಿನಿಂದ ನೀರಿಲ್ಲದೆ ಭರಚುಕ್ಕಿ ಫಾಲ್ಸ್ ನೋಡಲು ಜನರೇ ಬರುತ್ತಿಲ್ಲ. ಇದರಿಂದ ನಮಗೆ ಕೆಲಸವಿಲ್ಲ. ಬೇಸಿಗೆ ಬಂದರೆ ವ್ಯವಸಾಯ ಮಾಡುತ್ತೇನೆ. ನನ್ನಂತೆ ಉಳಿದವರು ದಿನದ ಜೀವನ ನಿರ್ವಹಣೆಗೆ ವ್ಯವಸಾಯ, ಅಡುಗೆ ಕೆಲಸಗಳಿಗೆ ತೆರಳುತ್ತಾರೆ. ಸರ್ಕಾರ ಭರಚುಕ್ಕಿ ಅಭಿವೃದ್ಧಿಗೆ ವರ್ಷವಿಡೀ ಜನರು ಆಗಮಿಸುವ ರೀತಿಯಲ್ಲಿ ಒತ್ತು ನೀಡಬೇಕು.
ಮಧು ಆಟೋ ಚಾಲಕ
ಫಾಲ್ಸ್‌ನಲ್ಲಿ ನೀರಿಲ್ಲದೆ ಪ್ರವಾಸಿಗರು ಬರುತ್ತಿಲ್ಲ. ಸ್ಥಳೀಯ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ನನೆಗುದಿಗೆ ಬಿದ್ದಿರುವ ಬಯೋಡೈವರ್ಸಿಟಿ ಪಾರ್ಕ್ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು. ಈ ಯೋಜನೆ ನಡೆಸಿದರೆ ವರ್ಷವಿಡಿ ಫಾಲ್ಸ್‌ಗೆ ಪ್ರವಾಸಿಗರು ಬರುತ್ತಾರೆ. ಇದರಿಂದ ಜಿಲ್ಲೆಯ ಪ್ರವಾಸೋದ್ಯಮ ಚೇತರಿಸಿ ಕೊಳ್ಳಲಿದೆ.
ಮಲ್ಲೇಶ್ ನಗರಸಭೆ ಮಾಜಿ ಸದಸ್ಯ
ಬೇಸಿಗೆ ಹಿನ್ನೆಲೆಯಲ್ಲಿ ಭರಚುಕ್ಕಿ ಫಾಲ್ಸ್‌ನಲ್ಲಿ ನೀರಿಲ್ಲ. ಇದರಿಂದ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿದೆ. ಜುಲೈ, ಆಗಸ್ಟ್ ತಿಂಗಳಲ್ಲಿ ಪ್ರವಾಸಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.
ರವಿಕುಮಾರ್ ಆರ್‌ಎಫ್‌ಒ ಕೊಳ್ಳೇಗಾಲ ಬಫರ್ ವಲಯ