ಚಾಮರಾಜನಗರದ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರಿನ ಶ್ರೀರಾಮಕೃಷ್ಣಾಶ್ರಮ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್ ಅವರು ‘ಯತೀಂದ್ರ ಶ್ರೀ’ ಪ್ರಶಸ್ತಿ ಸ್ವೀಕರಿಸಿದರು. ಶ್ರೀಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ, ಡಾ.ಎಂ.ಆರ್.ಜಯರಾಮ್, ಡಾ.ಎಚ್.ಎ.ವೆಂಕಟೇಶ್, ಪ್ರೊ.ಎಂ.ಆರ್.ಗಂಗಾಧರ್, ಎಂ.ಮುತ್ತುರಾಜು, ಎಂ.ಜಿ.ಸುದೀಪ್ ಇನ್ನಿತರರಿದ್ದರು.  
ಚಾಮರಾಜನಗರ

ನಾರೇಯಣಯೋಗಿ ನಾಡುಕಂಡ ಸಿದ್ಧಪುರುಷರು

ಪ್ರಮುಖ ಮುಖ್ಯಾಂಶಗಳು

  • ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಬಣ್ಣನೆ
  • ಶ್ರೀಕೈವಾರ ನಾರೇಯಣ ಪ್ರಶಸ್ತಿ ಪ್ರಧಾನ ಸಮಾರಂಭ
ಚಾಮರಾಜನಗರ: ಕೈವಾರ ತಾತಯ್ಯ ಎಂದೇ ಜನಜನಿತರಾಗಿರುವ ಕೈವಾರ ಸದ್ಗುರು ಶ್ರೀಯೋಗಿ ನಾರೇಯಣ ಅವರು ನಾಡುಕಂಡ ಅಪರೂಪದ ತಪಸ್ವಿ ಹಾಗೂ ಸಿದ್ಧಪುರಷರಾಗಿದ್ದರು ಎಂದು ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಬಣ್ಣಿಸಿದರು.
ನಗರದ ವರನಟ ಡಾ.ರಾಜ್ ಕುಮಾರ್ ರಂಗಮಂದಿರದಲ್ಲಿ ಚಾಮರಾಜನಗರ ವಿಶ್ವವಿದ್ಯಾಲಯ ಹಾಗೂ ಮೈಸೂರಿನ ಶ್ರೀಯೋಗಿನಾರೇಯಣ ಯತೀಂದ್ರರ ಪ್ರಚಾರ ಸಭಾ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಕೈವಾರ ಸದ್ಗುರು ನಾರೇಯಣ ಯೋಗಿಗಳ ಪರಿಚಯ, ಆತ್ಮ ಬೋಧನೆ ಕುರಿತು ವಿಚಾರ ಸಂಕಿರಣ ಮತ್ತು ಕೈವಾರ ನಾರೇಯಣ ಪ್ರಶಸ್ತಿ ಪ್ರಧಾನ ಸಮಾರಂಭದ ಸಾನಿಧ್ಯವನ್ನು ವಹಿಸಿ ಮಾತನಾಡಿದರು.
ತೇತ್ರಾಯುಗದಿಂದಲೂ ಕೈವಾರ ಕ್ಷೇತ್ರದ ಕುರಿತು ಉಲ್ಲೇಖಗಳು ಇತ್ತು ಎಂದು ಹೇಳಲಾಗುತ್ತದೆ. ಅಂತಹ ಕ್ಷೇತ್ರದಲ್ಲಿ ನೆಲೆಸಿದ ಶ್ರೀಯೋಗಿ ನಾರೇಯಣ ಅವರು ನಾಡುಕಂಡ ಅಪರೂಪದ ಯೋಗಿಯಾಗಿ, ಸಿದ್ಧಪುರುಷರಾಗಿ ಹಾಗೂ ತಪಸ್ವಿಯಾಗಿ ಸಮಾಜದಲ್ಲಿ ಹೆಸರುವಾಸಿಯಾಗಿದ್ದಾರೆ. ಆ ಕಾಲದಲ್ಲಿ ಬಳೆಗಾರರು ಎಂದರೆ ಪವಿತ್ರವಾದ ಕಾರ್ಯ ಎಂದು ಭಾವಿಸಲಾಗಿತ್ತು. ಅಂತಹ ಬಳೆಗಾರ ವ್ಯಾಪಾರ ಮಾಡುತ್ತಿದ್ದ ನಾರೇಯಣ ಅವರು ಅದನ್ನು ವ್ಯಾವಹಾರಿಕ ದೃಷ್ಟಿಯಿಂದ ನೋಡದೇ, ಧಾರ್ಮಿಕ ಮತ್ತು ಆಧ್ಯಾತ್ಮಿಕವಾದ ಮಾನ್ಯತೆಯನ್ನು ನೀಡಿದರು. ಈ ಕಾರಣಕ್ಕೆ ನಮ್ಮ ಜಾನಪದರು ಬಳೆಗಾರರನ್ನು ಮುತ್ತೈದೆ ಭಾಗ್ಯ ನೀಡುವವನು ಎಂದಿದ್ದಾರೆ. ಈ ನಿಟ್ಟಿನಲ್ಲಿ ತಾತಯ್ಯನವರ ಸೇವೆ ಅನುಕರಣೀಯ ಎಂದರು.
ಯೋಗಿ ನಾರೇಯಣ ಅವರು ಪವಾಡ ಸದೃಶವಾಗಿ ಜೀವನ ನಡೆಸಿದ್ದರು. ಪವಾಡ ಪುರುಷರಾಗಿದ್ದ ಅವರು, ನುಡಿದ ಕಾಲಜ್ಞಾನ ಇಂದಿಗೂ ನಿಜವಾಗಿದೆ. ಅವರು ಅನೇಕ ಯೋಗ ಮಾರ್ಗಗಳಲ್ಲಿ ಸಿದ್ಧಿಯನ್ನು ಪಡೆದುಕೊಂಡು, ಕಾಲಜ್ಞಾನ, ವಚನ, ಭಜನೆ, ತತ್ವಪದಗಳನ್ನು ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ರಚಿಸಿದರು. ಕೈವಾರ ಕ್ಷೇತ್ರ ಪ್ರಸ್ತುತ ಸಂದರ್ಭದಲ್ಲಿ ಅತ್ಯಂತ ಅಭಿವೃದ್ಧಿಗೊಂಡಿದೆ. ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿ ತನ್ನದೇಯಾದ ಛಾಪುಮೂಡಿಸುತ್ತಿದೆ ಎಂದು ಹೇಳಿದರು.
ಶ್ರೀಕ್ಷೇತ್ರ ಕೈವಾರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಮಾತನಾಡಿ, ತಾತಯ್ಯನವರ ಮಾನವ ಚಿಂತನೆಯೇ ಆತ್ಮ ಚಿಂತನೆಯಾಗಿದೆ. ಅದನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಎಲ್ಲಾ ಸೇವೆಯನ್ನು ಪರಮಾತ್ಮನ ಸೇವೆ ಎಂದು ಭಾವಿಸಬೇಕು. ಒಳ್ಳೆಯ ಕೆಲಸವನ್ನು ಮಾಡುವವರು ಯಾರಾದರೂ ಅವರನ್ನು ನಾವು ಒಪ್ಪಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಚಾಮರಾಜನಗರ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜು, ರೈಟ್ ಸಂಸ್ಥೆಯ ಮುಖ್ಯಸ್ಥ ಎಂ.ಜಿ.ಸುದೀಪ್, ಹಿರಿಯ ಲೆಕ್ಕ ಪರಿಶೋಧಕ ಸುರೇಂದ್ರ ಹೆಗ್ಗಡೆ, ನಗರಸಭೆ ಮಾಜಿ ಸದಸ್ಯ ಚಂದ್ರಶೇಖರ್, ಮುಖಂಡರಾದ ಡಾ.ಶ್ರೀನಿವಾಸ್‌ರಾವ್, ಆರ್.ಶಿವಕುಮಾರ್, ಮೋಹನ್ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.
ವಿಪತ್ತುಗಳಿಗೆ ನಾರೇಯಣರ ತತ್ವಗಳು ಮದ್ದು:
ಪ್ರಸ್ತುತ ಸಂದರ್ಭದಲ್ಲಿ ಜಗತ್ತು ಯುದ್ಧದ ಉನ್ಮಾದದಲ್ಲಿ ಇದ್ದು, ಜಗತ್ತಿನ ಅನೇಕ ವಿಪತ್ತುಗಳಿಗೆ ಹಾಗೂ ಲೋಕದ ಶಾಂತಿಗೆ ಕೈವಾರ ಸದ್ಗುರು ಶ್ರೀಯೋಗಿ ನಾರೇಯಣ ಅವರ ವಚನಗಳು ಮತ್ತು ತತ್ವಗಳು ಮದ್ದಾಗಿದೆ ಎಂದು ಕಬ್ಬಹಳ್ಳಿ ಶ್ರೀಮದ್ದಾನೇಶ್ವರ ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲೆ ಡಾ.ಎಂ.ಎನ್.ಕವಿತಾ ಹೇಳಿದರು. ಇಂದು ನೈತಿಕ ಅಧಃಪತನದ ಕಾಲದಲ್ಲಿ ನಾವಿದ್ದೇವೆ. ಅಧಿಕಾರದ ದಾಹದಿಂದ ನರಳುತ್ತಿರುವವರು ಜಗತ್ತನ್ನು ಯುದ್ಧಕ್ಕೆ ಗುರಿ ಮಾಡುತ್ತಿದ್ದು, ಇಂತಹ ಸಂದರ್ಭದಲ್ಲಿ ಕೈವಾರ ತಾತಯ್ಯ ಅವರ ಚಿಂತನೆಗಳ ಅನುಸರಣೆ ಅಗತ್ಯವಾಗಿದೆ. ಲೌಕಿಕ ಬದುಕನ್ನು ತ್ಯಜಿಸಿ ಅಲೌಕಿಕ ಬದುಕಿನ ಕಡೆಗೆ ಮುಖ ಮಾಡಿದ ಕೈವಾರ ನಾರೇಯಣರು ಸಾಮಾಜಿಕ ಮತ್ತು ಸಾಹಿತ್ಯ ಬದುಕಿನಲ್ಲಿ ನಿರ್ವಹಿಸಿದ ಪಾತ್ರ ತುಂಬಾ ಮಹತ್ವವಾಗಿದೆ. ಜಾತಿ, ಮತ, ಪಂಥ ಭೇದವನ್ನು ವಿರೋಧಿಸುತ್ತಿದ್ದ ಕೈವಾರ ತಾತಯ್ಯನವರ ತತ್ವಪದಗಳು ತುಂಬಾ ಸರಳವಾಗಿದ್ದವು. ಯುವ ಜನತೆ ಕೈವಾರ ತಾತಯ್ಯ ಅವರ ಚಿಂತನೆಗಳನ್ನು ಹೆಚ್ಚಾಗಿ ಅಧ್ಯಯನ ಮಾಡಬೇಕಿದೆ ಎಂದರು.
‘ಯತೀಂದ್ರ ಶ್ರೀ’ ಪ್ರಶಸ್ತಿ ಪ್ರಧಾನ:
ಶ್ರೀಯೋಗಿ ನಾರೇಯಣ ಯತೀಂದ್ರ ಪ್ರಚಾರ ಸಭಾ ವತಿಯಿಂದ ಕೊಡಮಾಡುವ 2026ನೇ ಸಾಲಿನ ‘ಯತೀಂದ್ರ ಶ್ರೀ’ ಪ್ರಶಸ್ತಿಯನ್ನು ಮೈಸೂರಿನ ಶ್ರೀರಾಮಕೃಷ್ಣ ಆಶ್ರಮಕ್ಕೆ ನೀಡಲಾಯಿತು. ಮೈಸೂರಿನ ಶ್ರೀರಾಮಕೃಷ್ಣಾಶ್ರಮ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಆಶ್ರಮದ ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸೇವೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಯಿತು.
"

ಪ್ರಸ್ತುತ ಸಂದರ್ಭದಲ್ಲಿ ಚಿಕ್ಕಮಕ್ಕಳು ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಆಧ್ಯಾತ್ಮಿಕ ಚಿಂತನೆಗಳನ್ನು ಮಕ್ಕಳಿಗೆ ಮೈಗೂಡಿಸಬೇಕಿದೆ. ಈ ನಿಟ್ಟಿನಲ್ಲಿ ಕೈವಾರ ಕ್ಷೇತ್ರ ಮಹತ್ತರವಾದ ಕಾರ್ಯಗಳನ್ನು ಮಾಡುತ್ತಿದೆ. ಮೈಸೂರಿನ ರಾಮಕೃಷ್ಣಾಶ್ರಮದ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಈ ಬಾರಿಯ ‘ಯತೀಂದ್ರ ಶ್ರೀ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.