ಹೊಮ್ಮ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಚಿರತೆ ಕಳೇಬರ 
ಚಾಮರಾಜನಗರ

‘ದ್ವೇಷದ ನಂಜಿಗೆ’ ಮುಂದುವರೆದ ’ಬಲಿ’

ಪ್ರಮುಖ ಮುಖ್ಯಾಂಶಗಳು

  • ವಿಷ ಪ್ರಾಶನಕ್ಕೆ ಜೀವತೆತ್ತ 6 ಹುಲಿಗಳು, 2 ಚಿರತೆಗಳು
  • ಬೇಟೆಗಾರಿಕೆ ಬದಲು ಹೆಚ್ಚಾಗುತ್ತಿರುವ ಪ್ರತೀಕಾರದ ಹತ್ಯೆ
  • ಕೃತ್ಯ ತಡೆಗೆ ಇಲ್ಲವೇ ಪರಿಹಾರ?
ಚಾಮರಾಜನಗರ: ಮಾನವ-ವನ್ಯಜೀವಿ ಸಹಬಾಳ್ವೆಯ ಬೀಡಾಗಿದ್ದ ಗಡಿನಾಡಿನಲ್ಲಿ ದ್ವೇಷದ ನಂಜು ಹುಲಿ, ಚಿರತೆಗಳ ಬಲಿಯನ್ನು ಮುಂದುವರೆಸಿದೆ.
ಚಾಮರಾಜನಗರ ಜಿಲ್ಲೆ ಭಾಗಶಃ ಅರಣ್ಯ ಪ್ರದೇಶದಿಂದ ಕೂಡಿದೆ. ಮಾನವ-ವನ್ಯಜೀವಿ ಸಂಘರ್ಷ ಎಷ್ಟಿದ್ದರೂ ಕೊಲ್ಲುವ ಹಂತ ತಲುಪಿರಲಿಲ್ಲ. ಬೇಟೆಗಾರಿಕೆ ಪ್ರಕರಣಗಳು ವರದಿಯಾಗುವುದರ ನಡುವೆ ಇತ್ತೀಚಿನ ದಿನಗಳಲ್ಲಿ ಸಾಕುಪ್ರಾಣಿಗಳ ಮೇಲೆ ಹುಲಿ, ಚಿರತೆ ದಾಳಿ ಮಾಡಿದ ಕೋಪಕ್ಕೆ
ಮಾಂಸದಲ್ಲಿ ವಿಷ ಹಾಕಿ ಪ್ರತೀಕಾರದ ಹತ್ಯೆ ಮುಂದುವರೆದಿದ್ದು, ಬೇಟೆಯಾಡಿ ಹಸಿವು ತಣಿಸಿಕೊಳ್ಳುವ ತುತ್ತೇ ಹುಲಿ, ಚಿರತೆಗಳ ಪಾಲಿಗೆ ವಿಷವಾಗುತ್ತಿದೆ.
ಹುಲಿ, ಚಿರತೆಗಳ ಜೀವಕ್ಕೆ ಆಪತ್ತು: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಐದು ಹುಲಿಗಳ ಸಾವಿನ ಪ್ರಕರಣದ ಹಿಂದೆ ಇದ್ದ ಕಾರಣ ಪ್ರತೀಕಾರ. ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ಹನೂರು ತಾಲೂಕಿನ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ಹಸು ಬೇಟೆಯಾಡಿದ ದ್ವೇಷಕ್ಕೆ ಕಳೇಬರಕ್ಕೆ ವಿಷ ಹಾಕಲಾಯಿತು. ಇದನ್ನು ತಿಂದ ತಾಯಿ ಹುಲಿ ಮತ್ತು ನಾಲ್ಕು ಮರಿ ಹುಲಿಗಳು ಮೃತಪಟ್ಟವು. ಈ ಘಟನೆ ಮಾಸುವ ಮುನ್ನವೇ ಇದೇ ವನ್ಯಜೀವಿಧಾಮದ ಪಚ್ಚೆದೊಡ್ಡಿಯಲ್ಲಿ ಹುಲಿ ಬೇಟೆಯಾಡಿದ ಕೋಪಕ್ಕೆ ಹಸುವಿಗೆ ವಿಷ ಹಾಕಲಾಯಿತು. ಮಾಂಸ ತಿಂದ ಬೃಹತ್ ಗಾತ್ರದ ಹುಲಿ ಸತ್ತು ಹೋಯಿತು. ಪ್ರಕರಣವನ್ನು ಮುಚ್ಚಿ ಹಾಕಲು ಹುಲಿಯ ದೇಹವನ್ನು ತುಂಡು ತುಂಡು ಮಾಡಿ ಎಸೆಯಲಾಗಿತ್ತು. ದ್ವೇಷದ ನಂಜು ಹುಲಿ ಮೇಲೆ ಮಾತ್ರವಲ್ಲದೆ ಕೋತಿಗಳ ಮಾರಣಹೋಮವನ್ನೂ ನಡೆಸಿಕೊಟ್ಟಿತು. ಎಲ್ಲೋ ಹಾವಳಿ ಇಡುತ್ತಿದ್ದ ಕೋತಿಗಳಿಗೆ ವಿಷ ಹಾಕಿ ಕೊಂದು ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ ಸಮೀಪದ ರಸ್ತೆಯಲ್ಲಿ ಎಸೆದು ಹೋಗಿದ್ದ ಘಟನೆಯನ್ನು ಮರೆಯಾಗಿಲ್ಲ.
ಇನ್ನು ಚಿರತೆಗಳ ವಿಚಾರದಲ್ಲಿ ಕೊತ್ತಲವಾಡಿಯಲ್ಲಿ ಕರು ಬೇಟೆಯಾಡಿದ್ದಕ್ಕೆ ಕಳೇಬರಕ್ಕೆ ವಿಷ ಪ್ರಾಶನ ಮಾಡಲಾಗಿತ್ತು. ಬೇಟೆ ಮಾಂಸವನ್ನು ತಿಂದ ಚಿರತೆ ಮೃತಪಟ್ಟಿತು. ಈ ರೀತಿ ಸಾಯುತ್ತಿರುವ ವನ್ಯಮೃಗಗಳ ಸಾಲಿಗೆ ಇದೀಗ ಹೊಮ್ಮ ಗ್ರಾಮದಲ್ಲಿ ಸತ್ತ ಚಿರತೆ ಹೊಸ ಸೇರ್ಪಡೆಯಾಗಿದೆ. ಮೇಲ್ನೋಟಕ್ಕೆ ಚಿರತೆ ಸಾವಿಗೆ ವಿಷ ಪ್ರಾಶನ ಕಾರಣವೆಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಬೇಟೆ ಬದಲು ಪ್ರತೀಕಾರದ ಹತ್ಯೆ:
ಜಿಲ್ಲೆಯಲ್ಲಿ ಬಂಡೀಪುರ ಮತ್ತು ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ, ಕಾವೇರಿ ಮತ್ತು ಮಲೆ ಮಹದೇಶ್ವರ ವನ್ಯಜೀವಿಧಾಮಗಳಿವೆ. ಭಾಗಶಃ ಕಾಡು ಇರುವುದರಿಂದ ಅರಣ್ಯ ಅಪರಾಧಗಳು ಹೆಚ್ಚಾಗಿ ನಡೆಯುತ್ತವೆ. ವನ್ಯಜೀವಿಗಳ ಬೇಟೆ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಉಗುರು, ಚರ್ಮ, ಕೊಂಬು, ಮಾಂಸ ಇನ್ನಿತರೆ ಕಾರಣಗಳಿಗೆ ವನ್ಯಜೀವಿಗಳನ್ನು ಬೇಟೆಯಾಡಲಾಗುತ್ತದೆ. ಆದರೆ ಇಂತಹ ಪ್ರಕರಣಗಳಿಗಿಂತ ಇತ್ತೀಚಿನ ದಿನಗಳಲ್ಲಿ ಪ್ರತೀಕಾರದ ಹತ್ಯೆಗಳೇ ಹೆಚ್ಚಾಗಿವೆ. ಸಾಕು ಪ್ರಾಣಿಗಳ ಮೇಲೆ ವನ್ಯಮೃಗಗಳು ದಾಳಿ ಮಾಡಿದ ಕೋಪಕ್ಕೆ ಕಳೇಬರಕ್ಕೆ ವಿಷ ಹಾಕಿ ಕೊಲ್ಲಲಾಗುತ್ತಿದೆ.
ದ್ವೇಷದ ಹತ್ಯೆ ತಡೆಯುವುದು ಹೇಗೆ?:
ಸಾಕುಪ್ರಾಣಿಗಳ ಮೇಲೆ ದಾಳಿ ಮಾಡುವ ವನ್ಯಮೃಗಗಳನ್ನು ದ್ವೇಷಕ್ಕಾಗಿ ವಿಷ ಹಾಕಿ ಕೊಲ್ಲುವುದನ್ನು ತಡೆಗಟ್ಟಲು ಅರಣ್ಯ ಇಲಾಖೆ ಕಾರ್ಯಪ್ರವೃತ್ತರಾಗಬೇಕಾಗಿದೆ. ಈ ನಿಟ್ಟಿನಲ್ಲಿ ಅರಣ್ಯ ಕಾನೂನಿನ ಅರಿವು, ಅಪರಾಧಗಳಿಗೆ ವಿಧಿಸುವ ಶಿಕ್ಷೆಯ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಕಾಡಿನಿಂದ ನಾಡಿಗೆ ವನ್ಯಜೀವಿಗಳು ಬರುವುದನ್ನು ತಡೆಗಟ್ಟಲು ಶಾಶ್ವತ ಪರಿಹಾರ ಕಂಡುಕೊಳ್ಳುವುದು ಮುಖ್ಯವಾಗಿದೆ. ಒಂದು ವೇಳೆ ವನ್ಯಜೀವಿಗಳು ನಾಡಿಗೆ ಬಂದು ಜಾನುವಾರುಗಳ ಮೇಲೆ ದಾಳಿ, ಬೆಳೆ ನಷ್ಟವನ್ನುಂಟು ಮಾಡಿದರೆ ತಕ್ಷಣ ಪರಿಹಾರ ನೀಡುವ ಸ್ಪಂದನೆ, ಸತ್ತ ಜಾನುವಾರಿಗೆ ವೈಜ್ಞಾನಿಕ ಪರಿಹಾರವನ್ನು ನೀಡಬೇಕಾಗಿದೆ. ಅನೇಕ ವರ್ಷಗಳ ಹಿಂದೆ ಬಂಡೀಪುರದಲ್ಲಿ ಜಾನುವಾರುಗಳು ಮೇವಿಗಾಗಿ ಅರಣ್ಯವನ್ನು ಅವಲಂಬಿಸಿದ್ದವು. ಇಂತಹ ಸಂದರ್ಭದಲ್ಲಿ ಹುಲಿ, ಚಿರತೆಗೆ ಜಾನುವಾರುಗಳ ಬಲಿಯಾದರೆ ಶ್ರೀಮಾರಿಯಮ್ಮ ಚಾರಿಟಬಲ್ ಟ್ರಸ್ಟ್‌ನ ಸುನೀತಾ ಪರಿಹಾರ ನೀಡಿ ರೈತರಿಗೆ ನೆರವಾಗುತ್ತಿದ್ದರು. ದ್ವೇಷದ ಹತ್ಯೆಗಳನ್ನು ತಡೆಯಲು ಅರಣ್ಯ ಇಲಾಖೆಯ ಶೀಘ್ರ ಸ್ಪಂದನೆಯೇ ಮೊದಲ ಪ್ರಯತ್ನವಾಗುತ್ತದೆ. ಜೀವನ ನಿರ್ವಹಣೆ ಮಾಡಲು ಆಧಾರವಾಗಿರುವ ಅಥವಾ ಸಾಲ ಮಾಡಿ ಖರೀದಿಸಿರುವ ಜಾನುವಾರು ಕಳೆದುಕೊಂಡ ರೈತನ ಕಷ್ಟವನ್ನೇ ಕೇಳದೆ ಇಲಾಖೆಯಿಂದ ನೀಡುವ ಪರಿಹಾರ ಕೊಟ್ಟು ಸುಮ್ಮನಾಗುವುದು ತಮ್ಮ ಪಾಲಿನ ಕರ್ತವ್ಯವನ್ನು ಮುಗಿಸಬಹುದಷ್ಟೆ. ಆದರೆ ಮುಂದಾಗುವ ಅನಾಹುತಗಳಿಗೆ ಮೂಲ ಕಾರಣವಾಗಬಹುದು.
ಕಾರ್ಯಾಚರಣೆಯೂ ಮುಖ್ಯ:
ಪ್ರತೀಕಾರದ ಹತ್ಯೆಗಳನ್ನು ನಿಲ್ಲಿಸಲು ಸಕಾಲದಲ್ಲಿ ನಡೆಸುವ ವನ್ಯಜೀವಿಗಳ ಸೆರೆ ಕಾರ್ಯಾಚರಣೆಯೂ ಪ್ರಮುಖ ಪಾತ್ರವಹಿಸುತ್ತದೆ. ಎಲ್ಲಾದರೂ ಹುಲಿ ಅಥವಾ ಚಿರತೆ, ಆನೆ ಕಾಣಿಸಿಕೊಂಡಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದರೆ ಸೆರೆ ಹಿಡಿಯುವ ಅಥವಾ ಕಾಡಿಗೆ ಓಡಿಸುವ ಕೂಂಬಿಂಗ್ ಅನ್ನು ಶುರು ಮಾಡಿದರೆ ಸಾಕುಪ್ರಾಣಿಗಳ ಮೇಲಿನ ದಾಳಿಗಳು ಕಡಿಮೆಯಾಗುತ್ತವೆ. ದ್ವೇಷದ ಕೃತ್ಯಗಳಿಗೆ ಕಡಿವಾಣ ಬೀಳುತ್ತದೆ.
ವಾಸಸ್ಥಳದ ವಿಸ್ತಾರ ಮತ್ತು ಆಹಾರ :
ಕಾಡಿನಲ್ಲಿ ವನ್ಯಪ್ರಾಣಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಕಾಡು ಮಾತ್ರ ವಿಸ್ತಾರಗೊಳ್ಳುತ್ತಿಲ್ಲ. ಈ ಕಾರಣದಿಂದಲೂ ವನ್ಯಜೀವಿಗಳು ನಾಡಿನತ್ತ ಬರುತ್ತಿವೆ. ಅರಣ್ಯದಲ್ಲಿ ವನ್ಯಜೀವಿಗಳಿಗೆ ಸಿಗಬೇಕಾದ ಆಹಾರ ಸಿಕ್ಕರೆ ಅವುಗಳು ನಾಡಿನತ್ತ ಲಗ್ಗೆ ಇಡುವುದಿಲ್ಲ. ಈ ನಿಟ್ಟಿನಲ್ಲಿ ಅರಣ್ಯ ಒತ್ತುವರಿಯನ್ನು ತೆರವುಗೊಳಿಸಿ ವಿಸ್ತಾರಗೊಳಿಸುವ ಕಾರ್ಯವಾಗಬೇಕಾಗಿದೆ. ಜತೆಗೆ ಹುಲ್ಲುಗಾವಲು ಬೆಳೆಸಿ ಸಸ್ಯಾಹಾರಿ ಪ್ರಾಣಿಗಳ ಸಂತತಿ ಹೆಚ್ಚಿಸುವುದರಿಂದ ಮಾಂಸಾಹಾರಿ ಪ್ರಾಣಿಗಳ ಬೇಟೆ ಸಿಗುವಂತೆ ಮಾಡಬೇಕಾಗಿದೆ.
ಸಿಡಿಮದ್ದು ಸ್ಪೋಟವೂ ನಿಂತಿಲ್ಲ..
ಜಿಲ್ಲೆಯ ಎಲ್ಲೆಡೆ ಕಾಡುಹಂದಿಗಳ ಉಪಟಳ ಅಧಿಕವಾಗಿದೆ. ಇವುಗಳನ್ನು ಮಾಂಸಕ್ಕಾಗಿ ಬೇಟೆಯಾಡುವ ದುರುಳರೂ ಇದ್ದಾರೆ. ಬೇಟೆಗಾಗಿ ಸಿಡಿಮದ್ದು ತಯಾರಿಸಿ ಆಹಾರದಲ್ಲಿ ಅಡಗಿಸಿ ಇಡುತ್ತಿದ್ದಾರೆ. ಇದನ್ನು ಕಾಡುಹಂದಿಗಳು ತಿನ್ನುವುದಕ್ಕಿಂತ ಮೇವು ಮೇಯುವ ಹಸು,ದನ ಕರುಗಳೇ ತಿಂದು ಬಾಯಿ ಛಿದ್ರಗೊಂಡು ಸಾಯುತ್ತಿವೆ. ಈ ಪ್ರಕರಣಕ್ಕೂ ಕಡಿವಾಣ ಬೀಳುತ್ತಿಲ್ಲ.
ಹೊಮ್ಮ ಗ್ರಾಮದಲ್ಲಿ ಚಿರತೆ ಸಾವಿಗೆ ವಿಷ ಪ್ರಾಶನ ಕಾರಣವೆಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಈ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆ ಮುಂದುವರೆದಿದೆ.
-ಭಾಸ್ಕರ್, ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಪ್ರಭಾರ ನಿರ್ದೇಶಕ