ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಸಮೀಪ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಸೆರೆಹಿಡಿದ ಹುಲಿ.
ಬೊಮ್ಮಲಾಪುರದಲ್ಲಿ ಬೀಡುಬಿಟ್ಟು ಉಪಟಳ ನೀಡುತ್ತಿದ್ದ ವ್ಯಾಘ್ರ
ಗುಂಡ್ಲುಪೇಟೆ: ಅರಣ್ಯ ಇಲಾಖೆಯ ಭರ್ಜರಿ ಕಾರ್ಯಾಚರಣೆ ನಡೆಸಿ ತಾಲೂಕಿನ ಬೊಮ್ಮಲಾಪುರ ಸಮೀಪ ನೆಲೆಸಿದ್ದ ಹುಲಿಯನ್ನು ಯಶಸ್ವಿಯಾಗಿ ಸೆರೆ ಹಿಡಿದಿದೆ.
ನಾಲ್ಕು ವರ್ಷದ ಗಂಡು ಹುಲಿಯನ್ನು ಸೆರೆ ಹಿಡಿಯುವ ಮೂಲಕ ಅರಣ್ಯ ಇಲಾಖೆ ನಿಟ್ಟುಸಿರು ಬಿಟ್ಟಿದ್ದರೆ ಸುತ್ತಮುತ್ತಲಿನ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.
ಕಳೆದ ಒಂದು ವರ್ಷದಿಂದ ಗ್ರಾಮದ ಸುತ್ತಲೇ ಸಂಚರಿಸುತ್ತಾ ರೈತರ ಜಮೀನುಗಳಲ್ಲಿ ಮೇಯುತ್ತಿದ್ದ ಜಾನುವಾರುಗಳನ್ನು ಕೊಂದು ಹಾಕುತ್ತಿತ್ತು. ಇದರ ಸೆರೆಗೆ ಅರಣ್ಯ ಇಲಾಖೆ ಬೋನು ಅಳವಡಿಸಿದ್ದರೂ ಚಾಲಾಕಿ ಹುಲಿ ಅತ್ತ ಸುಳಿಯುತ್ತಿರಲಿಲ್ಲ. ಹುಲಿ ಸೆರೆಗೆ ಒತ್ತಾಯಿಸಿ ಗ್ರಾಮಸ್ಥರು ಅರಣ್ಯ ಸಿಬ್ಬಂದಿಯನ್ನು ಬೋನಿನೊಳಗೆ ಕೂಡಿಹಾಕಿದ್ದು ರಾಜ್ಯಾದ್ಯಂತ ಸುದ್ದಿ ಆಗಿತ್ತು.
ರೋಚಕ ಕಾರ್ಯಾಚರಣೆ: ಬಫರ್ ವಲಯದಲ್ಲಿ ಸಂಘರ್ಷಕ್ಕೆ ಕಾರಣವಾಗಿದ್ದ ಈ ಹುಲಿ ಅರಣ್ಯ ಇಲಾಖೆ ಅಳವಡಿಸಿದ್ದ ಹಾಗೂ ಯಾವ ಕ್ಯಾಮರಾಗಳಲ್ಲಿಯೂ ದಾಖಲಾಗಿರಲಿಲ್ಲ. ಆದರೆ ಮೂರು ದಿನಗಳ ಹಿಂದೆ ಸತ್ತ ಜಾನುವಾರಿನ ಕಳೇಬರ ಎಳೆದೊಯ್ಯಲು ಬಂದಿದ್ದಾಗ ಅದರ ಚಿತ್ರಗಳನ್ನು ಸೆರೆಹಿಡಿದ ಅರಣ್ಯ ಇಲಾಖೆ ಸೆರೆ ಕಾರ್ಯಾಚರಣೆಗೆ ಮುಂದಾಗಿತ್ತು.
ಬುಧವಾರ ಸಂಜೆ ಥರ್ಮಲ್ ಡ್ರೋನ್ ಕ್ಯಾಮರಾ ಹಾರಿಸುವ ಮೂಲಕ ಗ್ರಾಮದ ಸಮಾಧಿ ಮಾಳದ ಬಳಿ ಪೊದೆಯಲ್ಲಿ ಅಡಗಿದ್ದ ಹುಲಿಯ ಇರುವಿಕೆಯನ್ನು ಪತ್ತೆಹಚ್ಚಿ ದುಬಾರೆ ಶಿಬಿರದಿಂದ ಕೂಂಬಿಂಗ್ ಸ್ಪೆಷೆಲಿಸ್ಟ್‌ಗಳಾದ ಮಾಸ್ತಿ, ಕಂಜನ್, ಪ್ರಶಾಂತ್, ಸಾಕಾನೆಗಳನ್ನು ತರಿಸಿ ರಾತ್ರಿ 11 ಗಂಟೆಗೆ ಕೂಂಬಿಂಗ್ ಆರಂಭಿಸಲಾಯಿತು.
ವಾಹನಗಳು ಹಾಗೂ ಆನೆಗಳ ಚಲನೆಯಿಂದ ಎಚ್ಚತ್ತ ಹುಲಿ ಅತ್ತಿತ್ತ ಹೋಗದಂತೆ ಸಿಬ್ಬಂದಿ ಪಟಾಕಿ ಸಿಡಿಸಿ ಮೂರು ದಿಕ್ಕುಗಳಿಂದ ಆನೆಗಳಿಂದ ಸುತ್ತುವರೆಯಲಾಯಿತು. ಪಶುವೈದ್ಯರಾದ ಡಾ.ರಮೇಶ್, ಡಾ. ಮಿರ್ಜಾವಾಸಿಂ ಅವರ ನಿರ್ದೇಶನದ ಮೇರೆಗೆ ಶಾರ್ಪ್ ಶೂಟರ್‌ಗಳು ಹಾರಿಸಿದ ಅರಿವಳಿಕೆಯಿಂದ ಪ್ರಜ್ನೆತಪ್ಪಿದ ಹುಲಿಯನ್ನು ಸಿಬ್ಬಂದಿ ಬೋನಿಗೆ ಸ್ಥಳಾಂತರಿಸಿದರು.