ಚಾಮರಾಜನಗರ ತಾಲೂಕಿನ ಹೊನ್ನೂರು ಗ್ರಾಮದಲ್ಲಿ ರೈತ ಮುಖಂಡ ಬಸವಣ್ಣ ಅವರ ಜಮೀನಿನಲ್ಲಿ ಹೂ ಕೋಸನ್ನು ಉಳುಮೆ ಮಾಡುತ್ತಿರುವುದು. 
ಚಾಮರಾಜನಗರ

ರೈತರ ಜಮೀನಿನವರೆಗೆ ಬಂದ ನಿಂತ ಯುದ್ಧ

ಪ್ರಮುಖ ಮುಖ್ಯಾಂಶಗಳು

  • ಗ್ಯಾಸ್ ಸಿಗದೆ ಹೋಟೆಲ್‌ಗಳ ಪರದಾಟ
  • ಖರೀದಿಯಾಗದ ತರಕಾರಿ ಅನ್ನದಾತರಿಗೆ ನಷ್ಟ
ಚಾಮರಾಜನಗರ: ಅಮೆರಿಕಾ ಮತ್ತು ಇಸ್ರೇಲ್-ಇರಾನ್ ನಡುವಿನ ಯುದ್ಧ ರೈತರ ಜಮೀನಿನವರೆಗೂ ಬಂದು ನಿಂತಿದೆ. ವಾಣಿಜ್ಯ ಸಿಲಿಂಡರ್ ಸಮರ್ಪಕವಾಗಿ ಸಿಗದೆ ಹೋಟೇಲ್‌ಗಳು ತೊಂದರೆ ಅನುಭವಿಸುತ್ತಿರುವುದರಿಂದ ನಾವು ಬೆಳೆದ ಬೆಳೆಗಳನ್ನು ಖರೀದಿ ಮಾಡುವವರೇ ಇಲ್ಲದಂತಾಗಿದ್ದಾರೆ ಎಂದು ರೈತರು ಹೇಳುತ್ತಿದ್ದಾರೆ.
ಜಿಲ್ಲೆಯಲ್ಲಿ ತರಕಾರಿ ಬೆಳೆದಿರುವ ರೈತರು ಸದ್ಯಕ್ಕೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಧ್ಯಪ್ರಾಚ್ಯದ ಯುದ್ಧದ ಪ್ರಭಾವ ಕೃಷಿಯ ಮೇಲೂ ಪ್ರಭಾವ ಬೀರಿದೆ. ಹೋಟೇಲ್‌ಗಳಿಗೆ ಅಗತ್ಯವಿರುವ ವಾಣಿಜ್ಯ ಸಿಲಿಂಡರ್‌ಗಳು ಸಕಾಲಕ್ಕೆ ದೊರೆಯುತ್ತಿಲ್ಲ. ಇದರಿಂದಾಗಿ ಆಹಾರ ತಯಾರಿಕೆಗೆ ತೊಂದರೆಯಾಗುತ್ತಿದೆ. ಕೆಲವು ಹೋಟೇಲ್‌ಗಳು ಇಂಡಕ್ಷನ್ ಸ್ಟೌ, ಸೌದೆ ಒಲೆಯ ಮೊರೆ ಹೋಗಿವೆ. ಇನ್ನುಳಿದವು ವಾಣಿಜ್ಯ ಸಿಲಿಂಡರ್ ಮೇಲೆ ಆಧಾರವಾಗಿವೆ. ಅಗತ್ಯವಿರುವಷ್ಟು ಸಿಲಿಂಡರ್ ಸಿಗದೆ ಇದ್ದಾಗ ಹೋಟೇಲ್ ನಡೆಸುವುದು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿ ಮಾಡುವುದು ಕಡಿಮೆಯಾಗುತ್ತದೆ. ಈ ರೀತಿಯ ಪರಿಣಾಮದಿಂದಲೇ ತರಕಾರಿ ಬೆಳೆದಿರುವ ರೈತರಿಗೆ ಖರೀದಿದಾರರು ಸಿಗದೆ ಸಮಸ್ಯೆಯುಂಟಾಗಿದೆ. ಕೆಲವರು ಬೆಳೆಗಳನ್ನು ಕಟಾವು ಮಾಡದೆ ಜಮೀನಿನಲ್ಲೇ ಬಿಟ್ಟಿದ್ದಾರೆ. ಇನ್ನು ಕೆಲವರು ಉಳುಮೆ ಮಾಡಿಬಿಡಲು ನಿರ್ಧರಿಸಿದ್ದಾರೆ.
ಕೊಳ್ಳುವವರಿಲ್ಲದೆ ಹೂ ಕೋಸು ಮಣ್ಣುಪಾಲು:
ಚಾಮರಾಜನಗರ: ಹೊಟೇಲ್‌ಗಳಿಗೆ ವಾಣಿಜ್ಯ ಸಿಲಿಂಡರ್ ಸಿಗದೆ ಸಮಸ್ಯೆಯುಂಟಾಗಿದ್ದು, ಇದರಿಂದ ಹೂ ಕೋಸು ಖರೀದಿಯಾಗದ ಕಾರಣ ರೈತರೊಬ್ಬರು ಜಮೀನಿನಲ್ಲೇ ಉಳುಮೆ ಮಾಡಿದರು. ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದ ರೈತ ಮುಖಂಡ ಬಸವಣ್ಣ ಅವರ 4 ಎಕರೆ ಜಮೀನಿನಲ್ಲ ಹೂ ಕೋಸು ಬೆಳೆದಿದ್ದರು. ಇದನ್ನು ಖರೀದಿ ಮಾಡಲು ಯಾರೂ ಬಾರದೆ ನಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಟ್ರ್ಯಾಕ್ಟರ್‌ನಲ್ಲಿ ಹೂ ಕೋಸನ್ನು ಉಳುಮೆ ಮಾಡಿದರು.