ಗುಂಡ್ಲುಪೇಟೆ ಪಟ್ಟಣದ ಜೆಎಸ್‌ಎಸ್ ಅನುಭವ ಮಂಟಪದಲ್ಲಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಹಾಗೂ ನಾನಾ ಸಂಘಟನೆಗಳ ವತಿಯಿಂದ ಆಯೋಜಿಸಿದ್ದ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯ 111ನೇ ಜಯಂತಿ ಕಾರ್ಯಕ್ರಮದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀ ಸಿದ್ದಮಲ್ಲ ಸ್ವಾಮೀಜಿ, ಶ್ರೀ ಚನ್ನವೀರ ಸ್ವಾಮೀಜಿ, ಗಣೇಶ್ ಪ್ರಸಾದ್, ನಿರಂಜನಕುಮಾರ್, ಶಿವಪ್ರಸಾದ್ ಇದ್ದರು. ಗುಂಡ್ಲುಪೇಟೆ
ಚಾಮರಾಜನಗರ

ಡಾ. ಶಿವರಾತ್ರಿ ರಾಜೇಂದ್ರ ಶ್ರೀಗಳ ಸೇವೆ ಸ್ಮರಣೀಯ

ಗುಂಡ್ಲುಪೇಟೆಯಲ್ಲಿ 111ನೇ ಜಯಂತ್ಯುತ್ಸವ

ಗುಂಡ್ಲುಪೇಟೆ: ಜಗದ್ಗುರು ಡಾ. ಶ್ರೀ ಶಿವರಾತ್ರಿರಾಜೇಂದ್ರ ಸ್ವಾಮೀಜಿಯ ತ್ಯಾಗಮಯ ಬದುಕು, ದೂರದೃಷ್ಟಿ ಹಾಗೂ ಸಮಾಜಸೇವೆಯ ಸಂಕಲ್ಪ ಇಂದಿನ ಪೀಳಿಗೆಗೆ ಆದರ್ಶವಾಗಿದೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದ ಜೆಎಸ್‌ಎಸ್ ಅನುಭವ ಮಂಟಪದಲ್ಲಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಯುವ ಘಟಕ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕ, ವೀರಶೈವ-ಲಿಂಗಾಯತ ಸಂಘ, ಸಂಸ್ಥೆಗಳು ಹಾಗೂ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ 111ನೇ ಜಯಂತಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ರಾಜೇಂದ್ರ ಶ್ರೀಗಳು ತಮ್ಮ ಇಡೀ ಬದುಕನ್ನು ನಾಡಿನ ಕಲ್ಯಾಣಕ್ಕಾಗಿ ಮುಡಿಪಾಗಿಟ್ಟಿದ್ದರು. ನಾಡಿನ ಜನರ ಸುಖಕ್ಕಾಗಿ ಅನೇಕ ಶಿಕ್ಷಣ ಹಾಗೂ ಸೇವಾ ಸಂಸ್ಥೆಗಳನ್ನು ಸ್ಥಾಪಿಸಿದರು. ಅವರ ಸಾಧನೆಯ ಹಿಂದೆ ಅಪಾರ ತ್ಯಾಗ ಮತ್ತು ಸಂಕಲ್ಪಶಕ್ತಿ ಅಡಗಿದೆ. ಆಧ್ಯಾತ್ಮಿಕ ವಿಚಾರಗಳಲ್ಲಿಯೂ ಅವರು ವಿಶೇಷ ಆಸಕ್ತಿ ಹೊಂದಿದ್ದರು. ಶಿವಪೂಜೆ ಹಾಗೂ ಲಿಂಗಪೂಜೆಯ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುತ್ತಿರಲಿಲ್ಲ. ಅವರಲ್ಲಿದ್ದ ಆಧ್ಯಾತ್ಮಿಕ ಶಕ್ತಿ ಹಾಗೂ ವ್ಯಕ್ತಿತ್ವದ ವಿಶೇಷ ಆಕರ್ಷಣೆ ಎಲ್ಲರ ಗಮನ ಸೆಳೆದಿತ್ತು. ಅವರ ಸಾನ್ನಿಧ್ಯಕ್ಕೆ ಬಂದ ಪ್ರತಿಯೊಬ್ಬರೂ ಒಂದು ವಿಶಿಷ್ಟ ಅನುಭವ ಪಡೆದು ಹಿಂದಿರುಗುತ್ತಿದ್ದರು. ಅಂಥ ಅದ್ಭುತ ವ್ಯಕ್ತಿತ್ವ ರಾಜೇಂದ್ರ ಶ್ರೀಗಳದ್ದಾಗಿತ್ತು ಎಂದು ಸ್ಮರಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಚ್.ಎಂ. ಗಣೇಶಪ್ರಸಾದ್ ಮಾತನಾಡಿ, ರಾಜೇಂದ್ರ ಸ್ವಾಮೀಜಿ ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ ಅವರು ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿದ್ದಾರೆ. ಜೆಎಸ್‌ಎಸ್ ಸಂಸ್ಥೆಗಳಲ್ಲಿ ದೊರೆಯುವ ಕೆಲವು ವಿಶೇಷ ಕೋರ್ಸ್‌ಗಳು ಬೇರೆಡೆ ಲಭ್ಯವಿಲ್ಲ. ಆರೋಗ್ಯ ಕ್ಷೇತ್ರದಲ್ಲಿಯೂ ವಿಶೇಷ ಘಟಕಗಳನ್ನು ಸ್ಥಾಪಿಸುವ ಮೂಲಕ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಿದ್ದಾರೆ ಎಂದರು.

ಮಾಜಿ ಶಾಸಕ ನಿರಂಜನ್ ಕುಮಾರ್ ಮಾತನಾಡಿ, ಶ್ರೀ ರಾಜೇಂದ್ರ ಸ್ವಾಮೀಜಿ ಕರುಣಾಮಯಿ ಹಾಗೂ ಮಾತೃ ಹೃದಯದ ವ್ಯಕ್ತಿಯಾಗಿದ್ದರು. ಶಿಕ್ಷಣ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಿದ ಅವರ ಸೇವೆಯನ್ನು ಇಂದಿಗೂ ಸಮಾಜ ಸ್ಮರಿಸುತ್ತಿದೆ. ವಿದ್ಯಾರ್ಥಿ ಜೀವನದಲ್ಲಿಯೇ ತಮ್ಮೊಂದಿಗೆ ಕಲಿಯುತ್ತಿದ್ದವರಿಗೆ ಸಹಾಯ ಮಾಡುತ್ತಿದ್ದ ಅವರು, ಹಾಸ್ಟೆಲ್ ನಡೆಸಲು ಆರ್ಥಿಕ ಸಂಪನ್ಮೂಲದ ಕೊರತೆಯಾದಾಗ ತಮ್ಮ ಚಿನ್ನದ ಕಡಗವನ್ನೇ ಮಾರಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗಿದ್ದರು. ಗ್ರಾಮೀಣ ಭಾಗದ ಮಕ್ಕಳು ವಿದ್ಯಾವಂತರಾಗಬೇಕು ಎಂಬ ಉದ್ದೇಶದಿಂದ ಹಳ್ಳಿಗಳಲ್ಲಿಯೇ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದರು. ಶಿಕ್ಷಣದ ಜತೆಗೆ ಆರೋಗ್ಯ ಕ್ಷೇತ್ರಕ್ಕೂ ಮಹತ್ವ ನೀಡಿದರು. ಗುಂಡ್ಲುಪೇಟೆ ಭಾಗಕ್ಕೆ ರಾಜೇಂದ್ರ ಶ್ರೀಗಳ ಕೊಡುಗೆ ಅಪಾರವಾಗಿದೆ. ಅವರ ಶಿಸ್ತು, ಬದ್ಧತೆ ಮತ್ತು ಸೇವಾ ಮನೋಭಾವವನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಶಾಸಕ ಎಚ್.ಎಂ.ಗಣೇಶಪ್ರಸಾದ್ ಅವರು ರಾಜೇಂದ್ರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ದತ್ತಿ ಪುರಸ್ಕಾರ ಪ್ರದಾನ ಹಾಗೂ ಕ್ರೀಡಾಕೂಟದಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸೋಮಹಳ್ಳಿ ಮಠಾಧ್ಯಕ್ಷರಾದ ಸಿದ್ದಮಲ್ಲಸ್ವಾಮೀಜಿ, ಚಿಕ್ಕತುಪ್ಪೂರು ಮಠಾಧ್ಯಕ್ಷರಾದ ಚನ್ನವೀರಸ್ವಾಮೀಜಿ, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಎಸ್.ಶಿವಪ್ರಸಾದ್(ರಾಜು), ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ನಾಗೇಂದ್ರ, ಪೃಥ್ವಿರಾಜ್, ಬೆಟ್ಟದಮಾದಳ್ಳಿ ಮಹದೇವಸ್ವಾಮಿ, ಅಭಿಷೇಕ್ ಗುಡಿಮನೆ, ಗುರುಪ್ರಸಾದ್ ವೀರನಪುರ, ಎನ್. ಯೋಗೇಂದ್ರ ದೇವರಹಳ್ಳಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಗಣ್ಯರು, ಭಕ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.