ಹುಲ್ಲೇಪುರದ ಜಮೀನಿನಲ್ಲಿ ಅಸ್ವಸ್ಥಗೊಂಡು ಮೃತಪಟ್ಟ ಚರತೆ.  
ಚಾಮರಾಜನಗರ

ನಿತ್ರಾಣಗೊಂಡಿದ್ದ ಗಂಡು ಚಿರತೆ ಮೃತ

ಹನೂರು: ಸಮೀಪದ ಹುಲ್ಲೇಪುರ ಜಮೀನೊಂದರಲ್ಲಿ ಭಾನುವಾರ ನಿತ್ರಾಣಗೊಂಡಿದ್ದ ಗಂಡು ಚಿರತೆ ಮೃತಪಟ್ಟಿದೆ.
ಬೆಳಗ್ಗೆ 8 ಗಂಟೆ ಸಮಯದಲ್ಲಿ ಹುಲ್ಲೇಪುರ ಜಮೀನಿನಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಈ ವೇಳೆ ರೈತರು ಸದ್ದು ಮಾಡಿದರೂ ಸ್ಥಳ ಬಿಟ್ಟು ಕದಲಲಿಲ್ಲ. ಇದರಿಂದ ಆತಂಕಕ್ಕೊಳಗಾದ ರೈತರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಪರಿಶೀಲಿಸಿದಾಗ ಚಿರತೆ ಮೇಲೇಳಲು ಸಾಧ್ಯವಾಗದೆ ನಿತ್ರಾಣಗೊಂಡಿತ್ತು. ಬಳಿಕ ಚಿರತೆಯನ್ನು ಬಲೆಯಲ್ಲಿ ಸೆರೆ ಹಿಡಿದು ಚಿಕಿತ್ಸೆಗಾಗಿ ವಾಹನದಲ್ಲಿ ಅಜ್ಜೀಪುರದ ಸಸ್ಯ ಕ್ಷೇತ್ರಕ್ಕೆ ಕರೆತರಲಾಯಿತು. ಕೆಳಗಿಳಿಸುವಾಗ ಯಾವುದೇ ಚಲನವಲನ ಇಲ್ಲದಿರುವುದನ್ನು ಗಮನಿಸಿದಾಗ ಚಿರತೆ ಮೃತಪಟ್ಟಿರುವುದು ದೃಢಪಟ್ಟಿದೆ.
ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್ ಭಾಸ್ಕರ್, ಎಸಿಎಫ್ ಮರಿಸ್ವಾಮಿ, ಆರ್‌ಎಫ್‌ಒ ಮಹೇಶ್, ಎನ್‌ಟಿಸಿಎ ಪ್ರತಿನಿಧಿ ಟಿ. ಜಾನ್ ಪೀಟರ್ ಹಾಗೂ ಪಪಂ ಮಾಜಿ ಸದಸ್ಯ ಸಂಪತ್‌ಕುಮಾರ್ ಸಮ್ಮುಖದಲ್ಲಿ ಎನ್‌ಟಿಸಿಎ ಹಾಗೂ ಎಸ್‌ಒಪಿ ಪ್ರಕಾರ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಪಶು ವೈದ್ಯಾಧಿಕಾರಿ ವಾಸೀಂ ಮಿರ್ಜಾ ಅವರು ಮರಣೋತ್ತರ ಪರೀಕ್ಷೆ ನಡೆಸಿದರು. ಬಳಿಕ ಚಿರತೆ ಮೃತ ದೇಹವನ್ನು ಸ್ಥಳದಲ್ಲಿಯೇ ಸುಡಲಾಯಿತು. ಚಿರತೆ ಸಾವಿಗೆ ನಿಖರ ಕಾರಣವನ್ನು ತಿಳಿಯಲು ಅಂಗಾಂಗದ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಬಳಿಕ ಚಿರತೆ ನಿತ್ರಾಣಗೊಂಡಿದ್ದ ಸ್ಥಳದ ಸುತ್ತಮುತ್ತ ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಶ್ವಾನದಳದಿಂದ ಕೂಬಿಂಗ್ ನಡೆಸಲಾಯಿತು. ಈ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.