ಗುಂಡ್ಲುಪೇಟೆ ಪಟ್ಟಣದ ಪೇಟೆ ಪ್ರೈಮರಿ ಶಾಲೆಯಲ್ಲಿ ಶಿಕ್ಷಕರು ಹಾಗೂ ಶಿಕ್ಷಣಾಧಿಕಾರಿಗಳು ವಿದ್ಯಾರ್ಥಿಗಳಲ್ಲಿ ಶಾಲೆಗೆ ಸ್ವಾಗತಿಸಿದರು. ಗುಂಡ್ಲುಪೇಟೆ ತಾಲೂಕಿನ ತೊಂಡವಾಡಿ ಗ್ರಾಮದಲ್ಲಿ ವಿದ್ಯಾರ್ಥಿಗಳನ್ನು ಎತ್ತಿನಗಾಡಿಯಲ್ಲಿ ಶಾಲೆಗೆ ಕರೆತರಲಾಯಿತು.
ಗುಂಡ್ಲುಪೇಟೆ: ತಾಲೂಕಿನ ಎಲ್ಲ ಶಾಲೆಗಳಲ್ಲಿ ಶಾಲಾ ಆರಂಭೋತ್ಸವವನ್ನು ಸಡಗರದಿಂದ ಆಚರಿಸಲಾಯಿತು.
ಪ್ರತಿ ಶಾಲೆಗಳಲ್ಲಿಯೂ ತಳಿರು ತೋರಣಗಳಿಂದ ಅಲಂಕರಿಸಿ ಬೇಸಿಗೆ ರಜೆ ಮುಗಿಸಿ ಶಾಲೆಗೆ ಆಗಮಿಸಿದ್ದ ಮಕ್ಕಳಿಗೂ ಹೂಗುಚ್ಛ ಹಾಗೂ ಸಿಹಿ ತಿನಿಸು ನೀಡುವ ಮೂಲಕ ಸ್ವಾಗತಿಸಲಾಯಿತು.
ಗ್ರಾಮಾಂತರ ಪ್ರದೇಶಗಳಲ್ಲಿ ಮಕ್ಕಳನ್ನು ಅಲಂಕೃತ ಎತ್ತಿನಗಾಡಿಗಳಲ್ಲಿ ಮೆರವಣಿಗೆ ಮೂಲಕ ಶಾಲೆಗೆ ಕರೆತರಲಾಯಿತು.
ಪಟ್ಟಣದ ಪೇಟೆ ಪ್ರೈಮರಿ ಶಾಲೆ, ಹಂಗಳ, ಮೇಲುಕಾಮನಹಳ್ಳಿ, ಬಸವಾಪುರ, ಬೊಮ್ಮನಹಳ್ಳಿ ಸೇರಿದಂತೆ ಹಲವು ಶಾಲೆಗಳಲ್ಲಿ ಶಾಲಾಭಿವೃದ್ಧಿ ಸಮಿತಿ ಹಾಗೂ ಗ್ರಾಮಪಂಚಾಯಿತಿ ಅಧಿಕಾರಿಗಳು ಸೇರಿ ಮಕ್ಕಳಿಗೆ ಸಿಹಿ ವಿತರಿಸಿದರು.
ಸರ್ಕಾರಿ ಶಾಲೆಗಳು, ಅನುದಾನಿತ ಹಾಗೂ ಅನುದಾನ ರಹಿತ ಸೇರಿದಂತೆ ಎಲ್ಲ 245 ಶಾಲೆಗಳನ್ನೂ ಆರಂಭಿಸಲಾಗಿದೆ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ ತಿಳಿಸಿದ್ದಾರೆ.