ಕೊಳ್ಳೇಗಾಲದಲ್ಲಿ ಶನಿವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ನಿವೃತ್ತ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎ.ಆರ್. ಕೃಷ್ಣಮೂರ್ತಿ, ಆರ್.ರಾಜೇಂದ್ರ, ಎಂ.ಮಂಜುಳಾ, ಎಂ.ಮಹದೇವ ಕುಮಾರ್, ಪಿ.ನಾಗರತ್ನಮ್ಮ ಇತರರು ಇದ್ದರು.
- ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿಕೆ
- ಕೊಳ್ಳೇಗಾಲದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ
ಕೊಳ್ಳೇಗಾಲ: ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನ ಕಡೆಗೆ ನಡೆಸುವವರೇ ಶಿಕ್ಷಕರು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಬಣ್ಣಿಸಿದರು.
ಪಟ್ಟಣದ ಭ್ರಮರಾಂಬ ಕಲ್ಯಾಣ ಮಂಟಪದಲ್ಲಿ ಶನಿವಾರ ಜಿಲ್ಲಾ ಪಂಚಾಯಿತಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಹಾಗೂ ತಾಲೂಕು ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರ ಸ್ಥಾನ ಪವಿತ್ರವಾದದ್ದು, ಭಾರತ ದೇಶದ ಸಮಗ್ರ ಬೆಳವಣಿಗೆಯ ಹಿಂದೆ ಗುರುಗಳಿದ್ದಾರೆ. ನಮಗೆ ತಂದೆ-ತಾಯಿ ಜನ್ಮ ನೀಡಿದವರಾದರೂ ಶಿಕ್ಷಕರು ಅಕ್ಷರ ಕಲಿಸುವ ಮೂಲಕ ಸಂಸ್ಕಾರ ಕಲಿಸಿದ್ದಾರೆ. ಅಂದಿನ ಕಾಲದಲ್ಲಿ ಎಲ್ಲರೂ ಶಿಕ್ಷಣ ಪಡೆಯುವ ಅವಕಾಶ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಅಕ್ಷರ ಮಾತೆ ಸಾವಿತ್ರಿಬಾಯಿ ಪುಲೆ ಅವರು ತಾವು ಅವಮಾನ ಅನುಭವಿಸಿ ಸಮಾಜಕ್ಕೆ ಶಿಕ್ಷಣ ನೀಡಿದ್ದಾರೆ ಎಂದರು.
ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡುವ ಉದ್ದೇಶದಿಂದ ಸಂಸತ್ತಿನಲ್ಲಿ ಹಿಂದೂ ಕೋಡ್ ಬಿಲ್ ಜಾರಿಗೊಳಿಸುವಂತೆ ಡಾ.ಬಿ. ಆರ್.ಅಂಬೇಡ್ಕರ್ ಮಂಡಿಸಿದಾಗ ಅದಕ್ಕೆ ತ್ರೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಅಂಬೇಡ್ಕರ್ ಅವರು ಕಾನೂನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದನ್ನು ಮಹಿಳೆಯರು ಮರೆಯಬಾರದು. ಇವತ್ತಿನ ರಾಜಕಾರಣಿಗಳಾಗಿದ್ದರೆ ಯಾರೂ ಸ್ಥಾನವನ್ನು ತೊರೆಯುತ್ತಿರಲಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ 15 ಸಾವಿರ ಶಿಕ್ಷಕರ ನೇಮಕಾತಿಗೆ ತೀರ್ಮಾನಿಸಿದೆ, ಹೊಸ ಶಾಲೆಗಳ ಸ್ಥಾಪನೆ ಮೂಲಕ ಶೈಕ್ಷಣಿಕ ಅಭ್ಯುದಯಕ್ಕೆ ಶ್ರಮಿಸುತ್ತಿದೆ. ಸರ್ಕಾರ ಜಾರಿಗೆ ತಂದಿರುವ ಆರೋಗ್ಯ ಸಂಜೀವಿನಿ, ಸಂಜಯ ಕಿರಣ ಯೋಜನೆಯ ಶಿಕ್ಷಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕೊಳ್ಳೇಗಾಲ ಉಪಖಜಾನೆ ಸಹಾಯಕ ನಿರ್ದೇಶಕಿ ಪಿ.ನಾಗರತ್ನಮ್ಮ ಮಾತನಾಡಿ, ಅಂದಿನ ಶಿಕ್ಷಣ, ಇಂದಿನ ಶಿಕ್ಷಣಕ್ಕೂ ವ್ಯತ್ಯಾಸವಿದೆ. ಈ ಹಿಂದೆ ಗುರು ಶಿಷ್ಯರಿಗೆ ಜ್ಞಾನ ಕಲಿಸಲು ದಂಡಿಸಿದಾಗ ಶಿಷ್ಯರು ಅದನ್ನೇ ಮಹಾಪ್ರಸಾದ ಎಂದು ಸ್ವೀಕರಿಸುತ್ತಿದ್ದರು. ಆದರೀಗ, ಶಿಕ್ಷಣ ಪರಿಸ್ಥಿತಿ ಬದಲಾಗಿದೆ, ಗುರುವೇ ಶಿಷ್ಯರಿಗೆ ನಮಿಸಿ ಜ್ಞಾನ ಕಲಿಸಬೇಕಿದೆ ಎಂದು ಹೇಳಿದರು.
ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿರುವ ಮುಖ್ಯ ಶಿಕ್ಷಕ ಎಲ್.ಇ.ಗ್ನಾಸಿ ಮುತ್ತು, ಸಹ ಶಿಕ್ಷಕಿ ಬಿ.ಆಲುಮೇಲಮ್ಮ, ಜಿ.ನಿಶಿತಾನಂದ, ಮೋಚಾ ರಾಕಿಣಿ, ಆರ್.ಲಕ್ಷ್ಮೀ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಳಿಕ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ವಿವಿಧ ಬೇಡಿಕೆ ಈಡೇರಿಸುವಂತೆ ಪ್ರಾಥಮಿಕ ಶಾಲೆಯ ಶಿಕ್ಷಕ ಸಂಘ ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು.
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಆರ್.ರಾಜೇಂದ್ರ, ತಾಲೂಕು ಪಂಚಾಯಿತಿ ಇಒ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಂಜುಳಾ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಡಿ.ಮಹದೇವ ಕುಮಾರ್, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಅಲೆಗ್ಸಾಂಡರ್, ಪ್ರೌಢಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಅಕ್ಬರ್, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷೆ ಸವಿತಾ, ಪರಿಶಿಷ್ಟ ಜಾತಿ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿದ್ದರಾಜು, ದೈಹಿಕ ಶಿಕ್ಷಕ ಸುರೇಶ್, ಅಸ್ಸಿಸ್ಸಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಇಗ್ನಾಸಿ ಮುತ್ತು ಇತರರು ಇದ್ದರು.