ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತರು
- ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯ
- ವೀರಸಿಂಹಾಸನ ಶಿಲಾಮಠದ ನೂತನ ಕಟ್ಟಡ ಉದ್ಘಾಟನೆ
ಗುಂಡ್ಲುಪೇಟೆ: ಯಾವುದೇ ಅಧಿಕಾರವಿಲ್ಲದಿದ್ದರೂ ಯಾರಿಗೆ ಹೆಚ್ಚಿನ ಜನಪ್ರಿಯತೆ ಇರುತ್ತದೋ ಅಂಥವರೇ ನಿಜವಾದ ನಾಯಕರು ಎಂದು ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಗುರುವಾರ ತಾಲೂಕಿನ ಸೋಮಹಳ್ಳಿ ಗ್ರಾಮದ ವೀರಸಿಂಹಾಸನ ಶಿಲಾಮಠದ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಎಷ್ಟು ಜನಪ್ರಿಯರಾಗಿದ್ದರೋ ಈಗಲೂ ಅವರಿಗೆ ಅಷ್ಟೇ ಜನಪ್ರಿಯತೆ ಇದೆ. ಮೊದಲ ಬಾರಿಗೆ ರೈತ ಪರ ಆಯವ್ಯಯ ಮಂಡಿಸಿದ ಕೀರ್ತಿ ಅವರದು. ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಬಗ್ಗೆ ಸುತ್ತೂರು ಜಾತ್ರೆಯಲ್ಲಿ ಚರ್ಚೆಯಾಗುತ್ತಿತ್ತು. ಆ ಸಂದರ್ಭದಲ್ಲಿ ತಮಿಳುನಾಡು, ಕರ್ನಾಟಕ ನಡುವೆ ಕಾವೇರಿ ವಿವಾದ ಇರುವುದರಿಂದ ಈ ಯೋಜನೆ ಸಾಧ್ಯವಿಲ್ಲ ಎಂದು ಕೆಲವರು ಯಡಿಯೂರಪ್ಪ ಅವರಿಗೆ ತಿಳಿಸಿದರು. ಕೂಡಲೇ ಪ್ರತಿಕ್ರಿಯಿಸಿದ ಯಡಿಯೂರಪ್ಪ ನಾನು ಜೈಲಿಗೆ ಹೋದರೂ ಪರವಾಗಿಲ್ಲ ಕೆರೆಗಳಿಗೆ ನೀರು ತುಂಬಿಸೇ ತೀರುತ್ತೇನೆ ಎಂದು ದಿಟ್ಟ ಹೆಜ್ಜೆ ಇಟ್ಟ ಧೀಮಂತ ರಾಜಕಾರಣಿ ಎಂದು ಸ್ಮರಿಸಿದರು.
ಚಾಮರಾಜನಗರ ಜಿಲ್ಲೆ ಪ್ರಕೃತಿ, ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತವಾದ ಕ್ಷೇತ್ರವಾಗಿದೆ. ದೇಶವು ಆಧ್ಯಾತ್ಮಿಕವಾಗಿ ಭವ್ಯವಾಗಿದೆ. ಸಂತರು ತಪಸ್ವಿಗಳು ಎಲ್ಲಿಯವರೆಗೆ ಇರುತ್ತಾರೋ ಅಲ್ಲಿಯವರೆಗೆ ಶಾಂತಿ ನೆಮ್ಮದಿ ಇರುತ್ತದೆ. ಎರಡು ಮಹಾ ವಿಶ್ವಯುದ್ಧಗಳನ್ನು ನೋಡದಿದ್ದರೂ ಇತಿಹಾಸವನ್ನು ಓದಿ ತಿಳಿದುಕೊಂಡಿದ್ದೇವೆ. ಇಡೀ ಜಗತ್ತು ಶಾಂತಿ, ಸಮಾಧಾನದಿಂದ ಇರಲು ಭಾರತವನ್ನು ನೋಡಿ ಕಲಿಯಬೇಕು. ತುಂಡು ಬಟ್ಟೆಯನ್ನುಟ್ಟು ದುಂಡು ಮೇಜಿನ ಪರಿಷತ್‌ನಲ್ಲಿ ಭಾಗವಹಿಸಿದ್ದ ಮಹಾತ್ಮ ಗಾಂಧೀಜಿ ಎಲ್ಲರಿಗೂ ಪ್ರೇರಣೆಯಾಗಬೇಕು. ಯುದ್ಧಗಳು ಯಾವುದೇ ದೇಶದ ಅಭಿವೃದ್ಧಿಗೆ ಮಾರಕ. ಮನುಷ್ಯ ಮನುಷ್ಯನನ್ನು ಕೊಲ್ಲುವಷ್ಟು ಕ್ರೂರಿಗಳಾಗಬಾರದು. ಶಾಂತಿ, ಸಹನೆಯಿಂದ ಯುದ್ಧ ಗೆಲ್ಲಬೇಕು. ಮನುಷ್ಯ ಯಾವುದೇ ಅಸ್ತ್ರಗಳಿಂದ ಯುದ್ಧಗಳನ್ನು ಗೆಲ್ಲಲು ಸಾಧ್ಯವಿಲ್ಲ. ಅಸ್ತ್ರಗಳಿಂದ ಕ್ರೂರತನ ಮೆರೆಯುತ್ತದೆ. ಹಾಗಾಗಿ, ಆದಷ್ಟು ಬೇಗ ಯುದ್ಧ ನಿಲ್ಲುವಂತಾಗಲಿ ಎಂದು ಆಶಿಸಿದರು.
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಚಾಮರಾಜನಗರ ಜಿಲ್ಲೆಯು ಯಡಿಯೂರು ಸಿದ್ದಲಿಂಗೇಶ್ವರರ ಜನ್ಮಸ್ಥಳ ಸೇರಿದಂತೆ ತತ್ವ-ಸಿದ್ಧಾಂತಗಳನ್ನು ಒಳಗೊಂಡ ಮಹಾನ್ ದಾರ್ಶನಿಕರ ಬೀಡಾಗಿದೆ. ಗುರುಮಲ್ಲೇಶ್ವರರು ಧಾರ್ಮಿಕ ಕ್ರಾಂತಿ ಮಾಡಿದ ಪುಣ್ಯ ಪುರುಷರ ಸ್ಥಳವಾಗಿದೆ. ಜಿಲ್ಲೆಯಲ್ಲಿರುವ ಅನೇಕ ಮಠಗಳು ಸಮಾಜಮುಖಿ ಸೇವೆಗಳನ್ನು ನೀಡುತ್ತಾ ಬಂದಿವೆ. ಸಾಮಾಜಿಕ ಧಾರ್ಮಿಕ ಕ್ಷೇತ್ರಗಳಲ್ಲಿ ಈ ನಾಡಿನ ಮಠಗಳ ಕೊಡುಗೆ ಅನನ್ಯ. ಸೋಮಹಳ್ಳಿ ಮಠ ಕೂಡ ಉತ್ತುಂಗಕ್ಕೆ ಏರಲು ಭಕ್ತರು ಕಾರಣ. ಸೋಮಹಳ್ಳಿ ಗಂಗಾಧರೇಶ್ವರರು ಬಿತ್ತಿದ ಬೀಜ ಇಂದು ಬೃಹತ್ತಾಗಿ ಬೆಳೆದಿದೆ. ಮಳೆ ಬೆಳೆ ಚೆನ್ನಾಗಿ ಆಗುತ್ತಿತ್ತು. ಅಂತಹ ಮಹಾನ್ ಪುರುಷರ ಆರಾಧನೆ ಮಹತ್ವದ್ದಾಗಿದೆ. ರಾಜ್ಯದ ಎಲ್ಲ ವರ್ಗದ ಮಠಗಳ ಸೇವೆಗಳನ್ನು ಗಮನಿಸಿ. ಎಲ್ಲ ಮಠಗಳಿಗೂ ಅನುದಾನ ನೀಡಿದ್ದು ಶ್ಲಾಘನೀಯ ಎಂದರು.
ಶಾಸಕ ಎಚ್.ಎಂ.ಗಣೇಶಪ್ರಸಾದ್ ಮಾತನಾಡಿ, ಇಡೀ ಕ್ಷೇತ್ರದ ಜನರು ಶ್ರೀ ಮಠದ ಅಭಿವೃದ್ಧಿಗೆ ಕೈ ಜೋಡಿಸಿದ್ದಾರೆ. ನನ್ನ ಅಧಿಕಾರಾವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದೇನೆ. ತಾಲೂಕಿನ 110 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಚರ್ಚಿಸಿ 475 ಕೋಟಿ ರೂ. ಅನುದಾನ ಪಡೆಯಲಾಗಿದ್ದು ಈ ಯೋಜನೆಗೆ ಸಿದ್ದರಾಮಯ್ಯ ಶೀಘ್ರದಲ್ಲಿಯೇ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಅವರು ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕಿನ ಕೆರೆಗೆ ನೀರು ತುಂಬಿಸಿದ ಭಗೀರಥ ಎಂದು ಬಣ್ಣಿಸಿದರು. ಗುಂಡ್ಲುಪೇಟೆ ತಾಲೂಕಿನಾದ್ಯಂತ ಕುಡಿಯುವ ನೀರಿಗೆ ಹಾಹಾಕಾರ ಇದ್ದಾಗ ಅಂತರ್ಜಲ ಕುಸಿತಗೊಂಡು ಜನತೆ ಪರದಾಡುತ್ತಿದ್ದರು. ಈ ಬಗ್ಗೆ ಸುತ್ತೂರು ಶ್ರೀಗಳು ಯಡಿಯೂರಪ್ಪ ಅವರಿಗೆ ಮನವರಿಕೆ ಮಾಡಿಕೊಟ್ಟ ಪರಿಣಾಮ ಸುತ್ತೂರು ಶ್ರೀಗಳ ಮಾತಿಗೆ ಒಪ್ಪಿದ ಯಡಿಯೂರಪ್ಪ ಅವರು ಸುತ್ತೂರು ಮಠದಲ್ಲಿಯೇ ಚಾಮರಾಜನಗರ ಗುಂಡ್ಲುಪೇಟೆ ಕೆರೆಗಳಿಗೆ ನೀರು ತುಂಬಿಸಲು ಆದೇಶ ಮಾಡಿದ್ದರು. ಅಂದು ಚಾಮರಾಜನಗರ ಜಿಲ್ಲೆಯಲ್ಲಿ ಒಬ್ರೂ ಕೂಡ ಬಿಜೆಪಿ ಶಾಸಕರು ಇರಲಿಲ್ಲ. ಅಂತಹ ಸಂದರ್ಭದಲ್ಲೂ ಯಾವುದೇ ರಾಜಕೀಯ ಮಾಡದೆ ಪ್ರಾಮಾಣಿಕವಾಗಿ ಜಿಲ್ಲೆಯ ಅಭಿವೃದ್ಧಿಗೆ ಪಣ ತೊಟ್ಟರು. ಒಂದೇ ಕಂತಿನಲ್ಲಿ ಅನುದಾನ ನೀಡಿದ್ದರ ಪರಿಣಾಮವಾಗಿ ಇಂದು ಜಿಲ್ಲೆ ಹಾಗೂ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಿ ನೀರಿನ ಸಮಸ್ಯೆ ನೀಗುವಂತಾಗಿದೆ ಎಂದರು.
ತಮ್ಮ 84ರ ವಯಸ್ಸಿನಲ್ಲೂ ಗುಂಡ್ಲುಪೇಟೆ ಬಗ್ಗೆ ಅಭಿಮಾನ ಇಟ್ಟುಕೊಂಡು ತಾಲೂಕಿಗೆ ಆಗಮಿಸಿರುವುದು ನಮ್ಮೆಲ್ಲರ ಪುಣ್ಯ. ಯಡಿಯೂರಪ್ಪ ಅವರು ಸಿ.ಎಂ. ಆಗಿದ್ದಾಗ ಸೋಮಹಳ್ಳಿ ಮಠಕ್ಕೆ 1 ಕೋಟಿ 70 ಲಕ್ಷ ರೂ. ಅನುದಾನ ನೀಡಿದ್ದಾರೆ. ರಾಜ್ಯದ ಅನೇಕ ಮಠಗಳಿಗೆ ಯಡಿಯೂರಪ್ಪ ಅವರು ಅನುದಾನ ನೀಡಿರುವುದನ್ನು ಸ್ಮರಿಸಿಕೊಳ್ಳಬೇಕಾಗಿದೆ ಎಂದರು.