ಗುಂಡ್ಲುಪೇಟೆಯಲ್ಲಿ ಸಿಎಂ ಕಾರ್ಯಕ್ರಮದ ವೇದಿಕೆ ಸಿದ್ಧತೆಯನ್ನು ಜಿಲ್ಲಾಧಿಕಾರಿ ಶ್ರೀರೂಪಾ ಹಾಗೂ ಶಾಸಕ ಗಣೇಶ್ ಪ್ರಸಾದ್ ಅಧಿಕಾರಿಗಳೊಂದಿಗೆ ವೀಕ್ಷಿಸಿದರು.
- 21ರಂದು ಗುಂಡ್ಲುಪೇಟೆ ಸಿಎಂ ಸಿದ್ದರಾಮಯ್ಯ ಆಗಮನದ ಹಿನ್ನೆಲೆ
ಗುಂಡ್ಲುಪೇಟೆ: ತಾಲೂಕಿನ 110 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಭೂಮಿಪೂಜೆ ನೆರವೇರಿಸುವುದು ಸೇರಿದಂತೆ ನಾನಾ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಏ.21ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ತರಾತುರಿಯಲ್ಲಿ ಸಿದ್ಧತೆ ಆರಂಭಿಸಿದ್ದಾರೆ.
ತಾಲೂಕಿನ ಬೇಗೂರು ಗ್ರಾಮದಲ್ಲಿ ಎಪಿಎಂಸಿ ವತಿಯಿಂದ ನಿರ್ಮಿಸಿರುವ ಹತ್ತಿ ಮಾರುಕಟ್ಟೆ, ಅರೇಪುರ ಸಮೀಪ ನಿರ್ಮಿಸಿರುವ ಸೆಸ್ಕ್ ಉಪಕೇಂದ್ರ, ಬೊಮ್ಮನಹಳ್ಳಿ ಸಮೀಪ ನಿರ್ಮಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಪದವಿಪೂರ್ವ ಬಾಲಕರ ವಸತಿ ಶಾಲೆ, ಪಟ್ಟಣದಲ್ಲಿ ನಿರ್ಮಿಸಿರುವ ವಾಲ್ಮೀಕಿ ಭವನ, ಗುಂಡ್ಲುಪೇಟೆ ಪಟ್ಟಣಕ್ಕೆ ಪ್ರತ್ಯೇಕ ಕುಡಿಯುವ ನೀರು ಪೂರೈಸುವ ಎಕ್ಸ್‌ಪ್ರೆಸ್ ಲೈನ್, ತೆರಕಣಾಂಬಿಯಲ್ಲಿ ನಿರ್ಮಿಸಿರುವ ಸಮುದಾಯ ಆರೋಗ್ಯ ಕೇಂದ್ರಗಳು ಲೋಕಾರ್ಪಣೆಗೊಳ್ಳಲು ಸಿದ್ಧವಾಗಿವೆ.
ಬೃಹತ್ ವೇದಿಕೆ ನಿರ್ಮಾಣ: ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಬರುವ ಸುಮಾರು 10 ಸಾವಿರ ಜನರು ಕುಳಿತುಕೊಳ್ಳಲು ಸಾಧ್ಯವಾಗುವಂತೆ ಕುರ್ಚಿಗಳು ಹಾಗೂ ನೆರಳಿನ ವ್ಯವಸ್ಥೆ ಮಾಡಲಾಗುತ್ತಿದ್ದು ಅದರ ಒಂದು ಪಾರ್ಶ್ವದಲ್ಲಿ ಉಪಹಾರ ವಿತರಣೆ ಮಾಡುವ ಯೋಚನೆಯಿದೆ.
ಸಾಮಾನ್ಯವಾಗಿ ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗುತ್ತಿತ್ತು. ಆದರೆ ವೇದಿಕೆ ಕಾರ್ಯಕ್ರಮವನ್ನು ಅಲ್ಲಿಯೇ ಆಯೋಜಿಸಿರುವುದರಿಂದ ಊಟಿ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದ ಎದುರು ಇರುವ ವಿಶಾಲ ಸ್ಥಳದಲ್ಲಿ ನಿರ್ಮಿಸಲಾಗುತ್ತಿದೆ.
ವಾಹನಗಳ ಪಾರ್ಕಿಂಗ್: ಕಾರ್ಯಕ್ರಮಕ್ಕೆ ಸುಮಾರು 10 ಸಾವಿರ ಜನರು ಆಗಮಿಸುವ ನಿರೀಕ್ಷೆ ಇರುವುದರಿಂದ ಪಟ್ಟಣದಲ್ಲಿ ವಾಹನಗಳ ಪಾರ್ಕಿಂಗ್‌ಗೆ ಪೊಲೀಸರು ಸ್ಥಳ ಗುರುತಿಸಿದ್ದಾರೆ. ಶಾಲಾ ಕಾಲೇಜುಗಳಿಗೆ ರಜೆ ಇರುವುದರಿಂದ ವೇದಿಕೆ ಕಾರ್ಯಕ್ರಮ ನಡೆಯುವ ಕ್ರೀಡಾಂಗಣದ ಸಮೀಪದ ದೊಡ್ಡಹುಂಡಿ ಭೋಗಪ್ಪ ಕಿರಿಯ ಕಾಲೇಜು, ಸರ್ಕಾರಿ ಬಾಲಕಿಯರ ಶಾಲೆ, ಮದ್ದಾನೇಶ್ವರ ಪ್ರೌಢಶಾಲೆ ಆವರಣ, ಸುರಬಿ ಹೋಟೆಲ್ ಎದುರು ಇರುವ ಲೋಕೋಪಯೋಗಿ ಇಲಾಖೆಗೆ ಸೇರಿದ ಸ್ಥಳ, ಬಿಇಒ ಕಚೇರಿ ಹಿಂಭಾಗದ ಸ್ಥಳ ಸೇರಿದಂತೆ ಸುಮಾರು 6 ಪ್ರದೇಶಗಳನ್ನು ಗುರುತಿಸಿದ್ದಾರೆ.