ಪಾದಯಾತ್ರೆ ಕೈ ಬಿಡುವಂತೆ ನಗರಸಭೆ ಪೌರಾಯುಕ್ತೆ ರುದ್ರಮ್ಮ ಶರಣಯ್ಯ ಮಧುಚಂದ್ರ ಅವರ ಮನವೊಲಿಸುತ್ತಿರುವುದು.
- ತಿಂಗಳೊಳಗಾಗಿ ವಿತರಣೆ ಮಡುವುದಾಗಿ ಪೌರಾಯುಕ್ತೆ ರುದ್ರಮ್ಮ ಶರಣಯ್ಯ ಭರವಸೆ ಹಿನ್ನೆಲೆ
ಕೊಳ್ಳೇಗಾಲ: ಇಲ್ಲಿನ ನಗರಸಭೆಯಲ್ಲಿ ಇ-ಸ್ವತ್ತು ನೀಡಲು ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಚಾಮರಾಜನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿವರೆಗೆ ನಗರಸಭೆ ನಾಮನಿರ್ದೇಶಿತ ಮಾಜಿ ಸದಸ್ಯ ಮಧುಚಂದ್ರ ಕೈಗೊಂಡಿದ್ದ ಪಾದಯಾತ್ರೆ ಸ್ಥಗಿತಗೊಂಡಿತು.
ಪಟ್ಟಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ, ದೇವಲ ಮಹರ್ಷಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮಧುಚಂದ್ರ ಚಾಮರಾಜನಗರ ಕಡೆಗೆ ಪಾದಯಾತ್ರೆ ಆರಂಭಿಸಿದರು. ಈ ವೇಳೆ ಸಾರ್ವಜನಿಕರು ಅವರೊಟ್ಟಿಗೆ ನಡೆದು ಬೆಂಬಲ ನೀಡಿದರು. ಪಾದಯಾತ್ರೆ ಬಾಪುನಗರದ ಬಡಾವಣೆ ಬಳಿ ಬರುತ್ತಿದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹೋರಾಟವನ್ನು ತಡೆ ಹಿಡಿದರು. ಈ ವೇಳೆ ಸ್ಥಳಕ್ಕೆ ಪೌರಾಯುಕ್ತೆ ರುದ್ರಮ್ಮ ಶರಣಯ್ಯ ಆಗಮಿಸಿ ಹೋರಾಟಗಾರರ ಮನವಿ ಆಲಿಸಿದರು. 1 ತಿಂಗಳೊಳಗೆ ಬಾಕಿ ಉಳಿದಿರುವ ಇ-ಸ್ವತ್ತು ವಿತರಣೆ ಮಾಡಲಾಗುತ್ತದೆ ಎಂದು ಭರವಸೆ ನೀಡಿ ಹೋರಾಟ ಕೈ ಬಿಡುವಂತೆ ಮನವಿ ಮಾಡಿದರು.
ನಗರಸಭೆಯಲ್ಲಿ ಸಾರ್ವಜನಿಕರ ಇ-ಆಸ್ತಿ ಕಾರ್ಯ ವಿಳಂಬ ಆಗುತ್ತಿದೆ. ಅಲ್ಲದೆ, ಎ-ಟು ಬಿ ಖಾತೆ ವಿಚಾರದಲ್ಲಿ ಗೊಂದಲವಾಗಿದೆ. ಈ ಬಗ್ಗೆ ಮೇಲಧಿಕಾರಿಗಳ ಗಮನ ಸೆಳೆದು ಸಮಸ್ಯೆ ಬಗೆಹರಿಸಬೇಕು. ಇ-ಸ್ವತ್ತು ಕುಟುಂಬ ಆಧಾರ ಸ್ತಂಭವಾಗಿದ್ದು, ಆಸ್ತಿಗಳನ್ನು ಮಾರಾಟ ಮಾಡಲಾಗುತ್ತಿಲ್ಲ. ಇ-ಸ್ವತ್ತು ನವೀಕರಣವನ್ನು ತ್ವರಿತವಾಗಿ ಮಾಡಿಕೊಡಬೇಕು. ಸಾರ್ವಜನಿಕರು ಮುಕ್ತವಾಗಿ ತಮ್ಮ ಸಮಸ್ಯೆ ಹೇಳಿಕೊಳ್ಳಲು ಸಭೆ ಕರೆಯಬೇಕು ಎಂದು ಮಧುಚಂದ್ರ ಆಗ್ರಹಿಸಿದರು.
ಇ-ಸ್ವತ್ತು ವಿಳಂಬ ಖಂಡಿಸಿ ಮಾ.26 ರಂದು ನಗರಸಭೆ ಕಚೇರಿ ಮುಂಭಾಗ ಕೈಗೊಂಡಿದ್ದ ಉಪವಾಸ ಸತ್ಯಾಗ್ರಹ ಸಂದರ್ಭದಲ್ಲಿ ಬಾಕಿ ಉಳಿದಿರುವ ಇ-ಸ್ವತ್ತು ಅರ್ಜಿಯನ್ನು ಏ.10ರೊಳಗೆ ಮಾಡಿಕೊಡುತ್ತೇನೆಂದು ನೀಡಿದ್ದ ಭರವಸೆ ಹುಸಿಯಾಗಿದೆ. ಹಾಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ ಕೈಗೊಂಡಿದ್ದೆ. ಇದೀಗ ಮತ್ತೆ 1 ತಿಂಗಳೊಳಗೆ ಇ-ಸ್ವತ್ತು ವಿತರಣೆ ಮಾಡುವ ಭರವಸೆ ನೀಡಿ ಹೋರಾಟ ತಡೆದಿದ್ದೀರಿ. ಈ ಭರವಸೆ ಈಡೇರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ. 1 ತಿಂಗಳೊಳಗೆ ಇ-ಸ್ವತ್ತು ವಿತರಣೆ ಮಾಡದಿದ್ದರೆ ಹೋರಾಟ ಮುಂದುವರಿಯಲಿದೆ ಎಂದರು. ಬಳಿಕ ಪ್ರತಿಭಟನಾಕಾರರು ಪ್ರತಿಭಟನೆ ಕೈಬಿಟ್ಟು ವಾಪಸ್ ತೆರಳಿದರು.
ಪಾದಯಾತ್ರೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಪರಮೇಶ್ವರಯ್ಯ, ನಾಮನಿರ್ದೇಶಿತ ಮಾಜಿ ಸದಸ್ಯ ನಟರಾಜು, ಕೆ.ಕೆ.ಮೂರ್ತಿ, ಸೋಮಣ್ಣ, ಮುಖಂಡ ವರದರಾಜು, ರೈಲ್ವೆ ನಿಂಗರಾಜು, ವಾಸಿಕ್, ಬಾಸ್ಕರ್, ಲಿಂಗರಾಜು, ಮಹೇಶ್, ಮರಿಸಿದ್ದಯ್ಯ, ಕಿರಣ್, ಶಂಕರ್, ನಂಜುಂಡ, ನಾಗರಾಜು, ಲಿಂಗಣ್ಣ ಇತರರು ಇದ್ದರು.