ಯಳಂದೂರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಡಿ.ಚಂದ್ರಶೇಖರ್, ಬಿ.ಸಿದ್ದರಾಜು, ಎ.ಆರ್.ಬಾಲರಾಜು, ಎಚ್.ವಿ.ಚಂದ್ರು, ಬಿ.ರಾಚಯ್ಯ, ಅಗರ ಲಿಂಗರಾಜು ಇತರರಿದ್ದರು.
ಯಳಂದೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಹಾಗೂ ವರ್ಗಗಳನ್ನು ರಾಜಕೀಯವಾಗಿ ಹತ್ತಿಕ್ಕುವ ಹುನ್ನಾರ ನಡೆಯುತ್ತಲೇ ಇದೆ. ಹೊಸ ಜಾತಿ ಸಮೀಕ್ಷೆ ಪಟ್ಟಿಯಲ್ಲಿ ಈ ಜನಾಂಗದ ಜನಸಂಖ್ಯೆಯೇ ಇಲ್ಲ. ಈ ಜನರು ರಾಜ್ಯದ 102 ಕ್ಷೇತ್ರಗಳಲ್ಲಿ ನಿರ್ಣಾಯಕ ಮತದಾರರಾಗಿದ್ದು, ಗೆಲ್ಲುವ ಅರ್ಹತೆ ನಮಗಿದೆ ಎಂದು ರಾಜ್ಯ ಪ್ರದೇಶಾಭಿವೃದ್ಧಿ ಮಂಡಳಿ ಯೋಜನಾ ನಿರ್ದೇಶಕ ಡಿ.ಚಂದ್ರಶೇಖರಯ್ಯ ಹೇಳಿದರು.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಅಂಬೇಡ್ಕರ್ ಸೇವಾ ಸಮಿತಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ರಾಜ್ಯದಲ್ಲಿ ಕೇವಲ 52 ಮೀಸಲು ಕ್ಷೇತ್ರಗಳಿವೆ. ಒಳ ಮೀಸಲಾತಿಯನ್ನು ಮಾಡುವ ಮೂಲಕ ನಮ್ಮನ್ನು ಇಬ್ಭಾಗ ಮಾಡಲಾಗಿದೆ. ಈ ಸಮುದಾಯ ಒಂದಾಗಿ ನಿಲ್ಲಲು ಬಿಡುತ್ತಿಲ್ಲ. ಪುಸ್ತಕದಲ್ಲಿರುವ ಎಲ್ಲ ನೀತಿ ನಿಮಯಗಳು ಅನುಷ್ಠಾನವಾಗುತ್ತಿಲ್ಲ. ತೆರೆಮರೆಯಲ್ಲಿ ನಮ್ಮನ್ನು ಹತ್ತಿಕ್ಕುವ ಕೆಲಸವನ್ನು ಮಾಡಲಾಗುತ್ತಿದೆ. ರಾಜ್ಯದಲ್ಲಿ ನಾವು ಎಲ್ಲರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನಸಂಖ್ಯೆಯನ್ನು ಹೊಂದಿದ್ದೇವೆ. ಬಾಬಾ ಸಾಹೇಬರು ತುಳಿತ ಸಮಾಜದ ಉದ್ಧಾರಕ್ಕೆ ಜಾರಿಗೆ ತಂದಿರುವ ನೀತಿಗಳನ್ನು ಎಥಾವತ್ತಾಗಿ ಅನುಷ್ಠಾನ ಮಾಡಲು ಪ್ರಬಲರು ನಮಗೆ ಇನ್ನೂ ಅವಕಾಶ ನೀಡುತ್ತಿಲ್ಲ. ಈ ಬಗ್ಗೆ ನಾವು ಇನ್ನೂ ಜಾಗೃತರಾಗಬೇಕಿದೆ. ನಮ್ಮ ಜನಸಂಖ್ಯೆ 1 ಕೋಟಿ ಮೀರಿದ್ದರೂ ಶೇ.2ರಷ್ಟು ಜನರು ಮಾತ್ರ ಅರ್ಥಿಕವಾಗಿ ಸುಸ್ಥಿತಿಯಲ್ಲಿದ್ದೇವೆ. ಕೆಪಿಎಸ್‌ಸಿಯಲ್ಲಿ ಇದುವರೆವಿಗೂ ಬಲಗೈ ಸಮುದಾಯದ ಒಬ್ಬರೇ ಒಬ್ಬರೂ ಅಧ್ಯಕ್ಷರಾಗಿ ಆಯ್ಕೆಯಾಗಿಲ್ಲ. ಹಾಗಾಗಿ ನಾವು ಇಂತಹ ಸ್ಥಾನಗಳಲ್ಲಿ ಕುಳಿತುಕೊಂಡಲ್ಲಿ ನಾವು ನಮ್ಮ ಹಕ್ಕನ್ನು ಸಾಧಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಾವು ಜಾಗೃತರಾಗಬೇಕು ಎಂದು ಸಲಹೆ ನೀಡಿದರು.
ಮಾಜಿ ಶಾಸಕ ಎಸ್.ಬಾಲರಾಜು, ಮುಖ್ಯಭಾಷಣಕಾರ ಪ್ರಾಂಶುಪಾಲ ಡಾ.ಪಿ. ದೇವರಾಜು ಮಾತನಾಡಿದರು.ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇದಕ್ಕೂ ಮುಂಚೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.
ಅಂಬೇಡ್ಕರ್ ಸೇವಾ ಸಮಿತಿ ತಾಲೂಕು ಅಧ್ಯಕ್ಷ ಬಿ.ಸಿದ್ದರಾಜು, ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್, ಮಾಜಿ ಸದಸ್ಯ ಎ.ಆರ್. ಬಾಲರಾಜು, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ಮುಖಂಡರಾದ ಕಿನಕಹಳ್ಳಿ ಬಿ.ರಾಚಯ್ಯ, ಅಗರ ಲಿಂಗರಾಜು, ಮಾಂಬಳ್ಳಿ ನಂಜುಂಡಸ್ವಾಮಿ, ಎನ್.ಲೋಕೇಶ್, ಯರಿಯೂರು ನಟರಾಜು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಮ್ಮನಪುರ ಮಹೇಶ್, ನಟರಾಜು ಸಮಾಜ ಕಲ್ಯಾಣ ಇಲಾಖೆಯ ಕೇಶವಮೂರ್ತಿ, ಗುರುಪ್ರಸಾದ್ ಸೇರಿದಂತೆ ಅನೇಕರು ಇದ್ದರು.