ಯಳಂದೂರಿನ ರಸ್ತೆ ಬದಿ ಇದ್ದ ಪ್ರೀತಂ ಸಿಂಗ್ 
ಚಾಮರಾಜನಗರ

ಕುಟುಂಬ ಸೇರಿಸಿದ ಮಧ್ಯಪ್ರದೇಶದ ವೃದ್ಧನಿಗೆ ಜಾಲತಾಣವೇ ಸೇತುವೆ

ಪ್ರಮುಖ ಮುಖ್ಯಾಂಶಗಳು

  • ಯಳಂದೂರಿನಲ್ಲಿ ನಿರ್ಗತಿಕನಾಗಿ ಪತ್ತೆಯಾಗಿದ್ದ ಪ್ರೀತಂ ಸಿಂಗ್
  • ಪೊಲೀಸರ ಮೂಲಕ ವೃದ್ಧಾಶ್ರಮ ಸೇರಿದ್ದ ವ್ಯಕ್ತಿ
  • ಮಗ ಹುಡುಕಿಕೊಂಡ ಬರಲು ವೇದಿಕೆಯಾದ ಇನ್ಸ್ಟಾಗ್ರಾಂ
ಚಾಮರಾಜನಗರ: ಮಧ್ಯಪ್ರದೇಶದಿಂದ ಯಳಂದೂರಿಗೆ ಬಂದು ಮರಳಿ ಊರಿಗೆ ಹೋಗಲಾಗದೆ ಇಲ್ಲಿ ನಿರ್ಗತಿಕನಾಗಿ ಬದುಕುತ್ತಿದ್ದ ವೃದ್ಧನನ್ನು ಕುಟುಂಬದ ಮಡಿಲು ಸೇರಿಸಲು ಸಾಮಾಜಿಕ ಜಾಲತಾಣ ಸೇತುವೆಯಾಗಿದೆ.
ಸೋಷಿಯಲ್ ಮೀಡಿಯಾ ಸಮಾಜಕ್ಕೆ ಪೂರಕವೂ ಆಗಿದೆ ಮತ್ತು ಮಾರಕವೂ ಆಗಿದೆ. ಪ್ರಸ್ತುತ ದಿನಗಳಲ್ಲಂತೂ ಕೆಟ್ಟ ಕಮೆಂಟ್‌ಗಳು, ಲೈಕು, ಶೇರ್‌ಗಳಿಗಾಗಿ ಹಪಹಪಿಸುವ ವಿಡಿಯೋಗಳು, ದ್ವೇಷಕಾರುವ ವಿಚಾರಗಳೇ ಹೆಚ್ಚಾಗಿವೆ. ಇವುಗಳ ನಡುವೆ ಒಳ್ಳೆಯ ಸಂಗತಿಗಳಿಗೂ ಸಾಮಾಜಿಕ ಜಾಲತಾಣ ವೇದಿಕೆಯಾಗಿದ್ದು, ಯಳಂದೂರಿನಲ್ಲಿದ್ದ ಮಧ್ಯಪ್ರದೇಶದ ಪ್ರೀತಂ ಸಿಂಗ್ ಕುಟುಂಬ ಸೇರದ ಪ್ರಕರಣವೇ ಇದಕ್ಕೆ ಉದಾಹರಣೆ.
ಯಳಂದೂರಿನಲ್ಲಿ ನಿರ್ಗತಿಕ: ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಅಮರ್ ಪುರ್ ತಾಲೂಕಿನ ಧನ್ವಾಸಿ ಗ್ರಾಮದ ನಿವಾಸಿ 60 ವರ್ಷದ ಪ್ರೀತಂ ಸಿಂಗ್ ಕೆಲವು ತಿಂಗಳ ಹಿಂದೆ ಕುಟುಂಬಸ್ಥರೊಂದಿಗೆ ಯಳಂದೂರಿಗೆ ಕೂಲಿ ಕೆಲಸಕ್ಕೆ ಬಂದಿದ್ದರು. ಆದರೆ ಕುಟುಂಬದವರ ನೆರಳಿನಿಂದ ಅಚಾನಕ್ ಆಗಿ ಬೇರೆಯಾದರು. ಹಿಂದಿ ಬಿಟ್ಟು ಬೇರೆ ಭಾಷೆ ಗೊತ್ತಿಲ್ಲ. ಮನೆಯವರ ನಂಬರ್ ಗೊತ್ತಿಲ್ಲ. ವಾಪಸ್ ಹೋಗಲು ತಿಳಿಯುತ್ತಿಲ್ಲ, ಬಸ್ ಟಿಕೆಟ್‌ಗೆ ಹಣವೂ ಇಲ್ಲದೆ, ಮನೆಯವರ ಪಾಲಿಗೆ ನಾಪತ್ತೆಯಾಗಿ ಯಳಂದೂರು ಬಸ್ ನಿಲ್ದಾಣದ ಸುತ್ತಮುತ್ತ ಓಡಾಡುತ್ತ, ರಾತ್ರಿ ವೇಳೆ ರಸ್ತೆ ಬದಿ ಮಲಗಿಕೊಂಡು ದಿನಗಳನ್ನು ಕಳೆಯುತ್ತಿದ್ದರು. ನಿರ್ಗತಿಕ ವೃದ್ಧನನ್ನು ಗಮನಿಸಿದ ಯಳಂದೂರು ಠಾಣೆ ಪೊಲೀಸರು ನ.11ರಂದು ಸಂತೇಮರಹಳ್ಳಿಯ ಜ್ಞಾನ ಸಿಂಧು ವೃದ್ಧಾಶ್ರಮಕ್ಕೆ ಸೇರಿಸಿದ್ದರು.
ಸೇತುವೆಯಾದ ಇನ್ಸ್ಟಾಗ್ರಾಂ..: ಎರಡು ತಿಂಗಳು ವೃದ್ಧಾಶ್ರಮದಲ್ಲಿದ್ದ ಪ್ರೀತಂ ಸಿಂಗ್ ಊರು, ಮನೆಯವರ ಬಗ್ಗೆ ಹಿಂದಿಯಲ್ಲಿ ಹೇಳಿಕೊಂಡು ಪೇಚಾಡುತ್ತಿದ್ದರು. ಸರಿಯಾಗಿ ಊರಿನ ಹೆಸರು ಹೇಳುತ್ತಿದ್ದಾರಾ ಎನ್ನುವ ಗೊಂದಲ ಮೂಡಿತ್ತು. ವೃದ್ಧಾಶ್ರಮದ ಅಧೀಕ್ಷಕ ಎಂ.ಮಹದೇವಸ್ವಾಮಿ, ಸಾಮಾಜ ಸೇವಕ ಎಚ್.ಬಿ.ಪ್ರಕಾಶ್‌ಗೆ ಪ್ರೀತಂ ಸಿಂಗ್‌ನನ್ನು ಕುಟುಂಬದ ಮಡಿಲು ಸೇರಿಸಬೇಕೆಂಬ ಆಸೆ ಇತ್ತು. ಈ ಸಂದರ್ಭದಲ್ಲಿ ವೃದ್ದಾಶ್ರಮದಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ಬಂದಿದ್ದ ಸತ್ಯ ಎಜುಕೇರ್ ಕಾಂಪೆಟೆನ್ಸಿ ಟ್ರಸ್ಟ್‌ನ ಮಹೇಶ್ ಪ್ರೀತಂ ಸಿಂಗ್ ಅವರ ವಿಡಿಯೋವನ್ನು ಮಾಡಿದರು. ಇನ್ಸ್ಟಾಗ್ರಾಂನಲ್ಲಿರುವ ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಗ್ರೂಪ್‌ಗೆ ಈ ವಿಡಿಯೋವನ್ನು ಹಾಕಿ ಸಹಾಯ ಕೋರಿದರು. ದಿಂಡೋರಿ ಗ್ರೂಪ್‌ನ ಅಡ್ಮಿನ್ ಪ್ರೀತಂ ಸಿಂಗ್ ಕುಟುಂಬಕ್ಕೆ ವಿಷಯ ತಿಳಿಸಿ ಮಹೇಶ್‌ಗೆ ಅವರ ಸಂಪರ್ಕ ಸಂಖ್ಯೆಯನ್ನು ಕೊಟ್ಟರು.
ತಂದೆಗಾಗಿ ಬಂದ ಮಗ:
ಇನ್ಸ್ಟಾಗ್ರಾಂನಿಂದ ಸಿಕ್ಕ ಮಾಹಿತಿ ಆಧರಿಸಿ ಡಿ.30ರಂದು ವೃದ್ಧ ಪ್ರೀತಂ ಸಿಂಗ್ ಪುತ್ರ ರಾಜೇಶ್ ಸಿಂಗ್ ಧುರ್ವಿ ಬಂದರು. ಕಾನೂನು ನಿಯಮಾವಳಿ ಪ್ರಕಾರ, ಪ್ರೀತಂ ಸಿಂಗ್ ಅನ್ನು ಯಳಂದೂರು ಪೊಲೀಸರ ಮೂಲಕ ಮಗನಿಗೆ ಒಪ್ಪಿಸಲಾಯಿತು. ಕೆಲವು ತಿಂಗಳು ಕುಟುಂಬದಿಂದ, ಸ್ವಗ್ರಾಮದಿಂದ ದೂರವಾಗಿ ಇಳಿ ವಯಸ್ಸಿನಲ್ಲಿ ನಿರ್ಗತಿಕನಂತೆ ಯಳಂದೂರಿನಲ್ಲಿ ಬದುಕುತ್ತಿದ್ದ ವೃದ್ಧನ ಬಾಳಿಗೆ 2026ರ ನಿಜವಾಗಿಯೂ ಹೊಸ ವರ್ಷವೇ ಆಯಿತು.
ಯಳಂದೂರಿನ ಬಸ್ ನಿಲ್ದಾಣದ ಬಳಿ ಇರುತ್ತಿದ್ದ ಪ್ರೀತಂ ಸಿಂಗ್‌ನನ್ನು ಪೊಲೀಸರು ವೃದ್ಧಾಶ್ರಮಕ್ಕೆ ಕರೆತಂದು ಬಿಟ್ಟಿದ್ದರು. ಇವರ ಬಗ್ಗೆ ಮಹೇಶ್ ವಿಡಿಯೋ ಮಾಡಿ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿ ಕುಟುಂಬದವರನ್ನು ಪತ್ತೆ ಮಾಡಿದರು. ಅಂತಿಮವಾಗಿ ಪ್ರೀತಂ ಸಿಂಗ್ ಮಗ ಬಂದು ಕರೆದುಕೊಂಡು ಹೋದರು.
ಎಚ್.ಬಿ.ಪ್ರಕಾಶ್, ಸಾಮಾಜ ಸೇವಕ