ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟ ಉದ್ಭವ ಗಂಗಾಧರೇಶ್ವರ ರಥೋತ್ಸವ ಅಂಗವಾಗಿ ಸೋಮವಾರ ಭಕ್ತರು ದೇಗುಲದ ಆವರಣದಲ್ಲಿ ಪ್ರಸಾದ ಸ್ವೀಕರಿಸಿದರು.
- ಐತಿಹಾಸಿಕ ಪುಣ್ಯಕ್ಷೇತ್ರದಲ್ಲಿ ಶಿವರಾತ್ರಿ ಮಾರನೇ ದಿನ ಆಚರಣೆ
- ಅಭಿಜಿನ್ ಮುಹೂರ್ತದಲ್ಲಿ ರಥಾರೋಹಣ
ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಉದ್ಭವ ಗಂಗಾಧರೇಶ್ವರ ರಥೋತ್ಸವ ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವಯುತವಾಗಿ ನಡೆಯಿತು.
ವೈಷ್ಣವ ಹಾಗೂ ಶೈವ ಸಂಪ್ರದಾಯವನ್ನು ಒಳಗೊಂಡ ಐತಿಹಾಸಿಕ ಪುಣ್ಯಕ್ಷೇತ್ರದಲ್ಲಿ ಶಿವರಾತ್ರಿ ಮಾರನೇ ದಿನ ನಡೆಯುವ ಗಂಗಾಧರೇಶ್ವರ ರಥಕ್ಕೆ ಆದಿವಾಸಿಗಳು, ಸೋಲಿಗರೂ ಸೇರಿದಂತೆ ವಿವಿಧ ಜಿಲ್ಲೆ ಹಾಗೂ ತಾಲೂಕುಗಳಿಂದ ಸಾವಿರಾರು ಭಕ್ತರು ಸಾಕ್ಷಿಯಾದರು.
ಮಹಾರಾಜರ ಸ್ವರ್ಣಕೊಳಗ ಧಾರಣೆ: ಪ್ರಭಾವಳಿಯಲ್ಲಿದ್ದ ದೇವರ ಉತ್ಸವ ಮೂರ್ತಿಯನ್ನು ರಥದ ಮೇಲೆ ಕುಳ್ಳಿರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಜತೆಗೆ ಉದ್ಭವ ಲಿಂಗಕ್ಕೆ ಚಿನ್ನದ ಕೊಳಗವನ್ನೂ ಧಾರಣೆ ಮಾಡಲಾಗಿತ್ತು. ಮಧ್ಯಾಹ್ನ 12.40 ರಿಂದ 12.55 ಗಂಟೆಯೊಳಗೆ ಸಲ್ಲುವ ಶುಭ ಅಭಿಜಿನ್ ಲಗ್ನದ ಶುಭ ಮುಹೂರ್ತದಲ್ಲಿ ರಥಾರೋಹಣ ಮಹೋತ್ಸವ ಸಂಪನ್ನಗೊಂಡಿತು. ನೆರೆದಿದ್ದ ಭಕ್ತರು ಹರಹರ ಮಹಾದೇವ ಎಂಬ ಉದ್ಘಾರದೊಂದಿಗೆ ತೇರನ್ನು ದೇಗುಲದ ಸುತ್ತ ಒಂದು ಸುತ್ತು ಪ್ರದಕ್ಷಿಣೆ ಹಾಕಿಸಿ ಸ್ವಸ್ಥಾನಕ್ಕೆ ತಂದರು. ಇದಾದ ಬಳಿಕ ಪ್ರಭಾವಳಿಯಲ್ಲಿ ದೇವರ ಉತ್ಸವ ಮೂರ್ತಿಯನ್ನು 400 ವರ್ಷಕ್ಕೂ ಹಳೆಯದಾದ ಹಿತ್ತಾಳೆಯ ಬಸವ ವಾಹನದ ಮೇಲೆ ಕುಳ್ಳಿರಿಸಿ ದೇಗುಲದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಿಸಲಾಯಿತು.
ಸಾವಿರಾರು ಭಕ್ತರಿಗೆ ಪ್ರಸಾದ ವಿತರಣೆ: ರಥೋತ್ಸವ ಮುಗಿಯುತ್ತಿದ್ದಂತೆಯೇ ದೇಗುಲದ ಮುಂಭಾಗ ಸಾವಿರಾರು ಭಕ್ತರು ಕೆಳಗೆ ಕುಳಿತು ಪ್ರಸಾದ ಸ್ವೀಕರಿಸಿದರು. ಇದಕ್ಕೂ ಮುನ್ನ ಪಟ್ಟಣದ ಉಪಖಜಾನೆ ಕಾರ್ಯಾಲಯದಿಂದ ಮೈಸೂರು ಮಹಾರಾಜರು ನೀಡಿರುವ ಸ್ವರ್ಣಕೊಳಗವನ್ನು ಮಂಗಳವಾದ್ಯ, ಮೆರವಣಿಗೆ ಮೂಲಕ ದೇಗುಲಕ್ಕೆ ಕೊಂಡೊಯ್ದು ಧಾರಣೆ ಮಾಡಲಾಯಿತು. ಹರಕೆ ಹೊತ್ತ ಭಕ್ತರು ದಂಡುಗೋಲು ಸೇವೆ ನೆರವೇರಿಸಿದರು.
ಸಾವಿರಾರು ಭಕ್ತರು ಉತ್ಸವದಲ್ಲಿ ಭಾಗವಹಿಸಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಶಾಸಕ ಎ.ಆರ್. ಕೃಷ್ಣಮೂರ್ತಿ ದಂಡುಗೋಲನ್ನು ಹಿಡಿದು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿದ್ದು ವಿಶೇಷವಾಗಿತ್ತು. ಜಿಲ್ಲಾ ಗ್ಯಾರಂಟಿ ಯೋಜನೆ ಅನಷ್ಠಾನ ಸಮಿತಿ ಅಧ್ಯಕ್ಷ ಎಚ್.ವಿ.ಚಂದ್ರು, ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜೆ.ಶ್ರೀನಿವಾಸ್, ಸದಸ್ಯರಾದ ಗುಂಬಳ್ಳಿ ರಾಜಣ್ಣ, ಕೇತಮ್ಮ, ತಹಸೀಲ್ದಾರ್ ಎಸ್.ಎಲ್.ನಯನಾ, ಇಒ ಎನ್. ಸುರೇಶ್, ರಾಜಣ್ಣ, ಶೇಷಾದ್ರಿ, ಬಾದ್ರಿರಾಮು, ರಂಗನಾಥ್, ವೆಂಕಟೇಶ್, ಪಿಡಿಒ ಶಶಿಕಲಾ ಸೇರಿದಂತೆ ಅನೇಕರು ಸಾಥ್ ನೀಡಿದರು.
ಸೋಲಿಗ ಜನಾಂಗದವರು ರಥವನ್ನು ಅಲಂಕರಿಸುವ ಜವಾಬ್ದಾರಿ ಹೊತ್ತಿದ್ದರು. ಸಿಪಿಐ ಸುಬ್ರಹ್ಮಣ್ಯ, ಪಿಐಎಸ್ ಆಕಾಶ್ ನೇತೃತ್ವದಲ್ಲಿ ವಿಶೇಷ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ತೇರು ಮುಗಿಯುತ್ತಿದ್ದಂತೆಯೇ ವಿವಿಧ ಪೋಡುಗಳಿಂದ ಬರಿಗಾಲಿನಲ್ಲೇ ನಡೆದುಕೊಂಡು ಬಂದಿದ್ದ ನೂರಾರು ಸೋಲಿಗರು ಮಕ್ಕಳ ಆಟಿಕೆ ವಸ್ತು, ಹಣ್ಣು, ಕಡ್ಲೆಪುರಿ, ಖಾರ ಸೇರಿದಂತೆ ವಿವಿಧ ವಸ್ತುಗಳನ್ನು ಖರೀಸುತ್ತಿದ್ದ ದೃಶ್ಯ ಅಲ್ಲಲ್ಲಿ ಗೋಚರಿಸಿತು.