ಚಾಮರಾಜನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಡಾ.ಶ್ರೀಶಿವಕುಮಾರಸ್ವಾಮೀಜಿ ಅವರ ಜಯಂತಿ ಅಂಗವಾಗಿ ದಾಸೋಹ ಕಾರ್ಯಕ್ರಮಕ್ಕೆ ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಚಾಲನೆ ನೀಡಿದರು. ಸ್ಟೈಲ್ ಮಂಜು, ರಂಗರಾಜು, ಬೇಡಗುಳಿ ವೀರಭದ್ರಸ್ವಾಮಿ, ಹೊನ್ನಮೇಟಿ ಸುಂದ್ರಣ್ಣ, ಲಿಂಗರಾಜಮೂರ್ತಿ, ಯೋಗಪ್ರಕಾಶ್, ಶಿವಮಲ್ಲಪ್ಪ, ವಿಶ್ವ, ಈಶ್ವರ್ ರಕ್ಷಿತ್, ನಾಗರತ್ನಮ್ಮಇತರರಿದ್ದರು.  
ಚಾಮರಾಜನಗರ

ದಾಸೋಹದಲ್ಲಿ ಪ್ರತ್ಯಕ್ಷವಾದ ನಡೆದಾಡುವ ದೇವರು

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯಾದ್ಯಂತ ಡಾ.ಶ್ರೀಶಿವಕುಮಾರಸ್ವಾಮೀಜಿ ಜಯಂತ್ಯುತ್ಸವ
  • ನಗರದ ವೃತ್ತವೊಂದಕ್ಕೆ ಶ್ರೀಗಳ ಹೆಸರು ನಾಮಕರಣ
  • 3500 ಜನರಿಗೆ ಊಟದ ವ್ಯವಸ್ಥೆ
ಚಾಮರಾಜನಗರದ ಹೌಸಿಂಗ್ ಬೋರ್ಡ್ ಕಾಲೋನಿಯ ಾರೆಸ್ಟ್ ನರ್ಸರಿ ರಸ್ತೆಯಲ್ಲಿರುವ ವೃತ್ತಕ್ಕೆ ಡಾ.ಶ್ರೀಶಿವಕುಮಾರಸ್ವಾಮೀಜಿ ಅವರ ಹೆಸರು ನಾಮಕರಣ ಮಾಡಲಾಯಿತು. ಶ್ರೀಚನ್ನಬಸವಸ್ವಾಮೀಜಿ, ಮೂಡ್ಲುಪುರ ನಂದೀಶ್, ಎನ್‌ರಿಚ್ ಮಹಾದೇವಸ್ವಾಮಿ, ಹೊನ್ನಮೇಟಿ ಸುಂದರ್, ವಿಶ್ವ, ಸುನಿ, ಸಂತೋಷ್, ನಂಜುಂಡಸ್ವಾಮಿ, ಮಂಜೇಶ್ ಇದ್ದರು.
ಚಾಮರಾಜನಗರ: ತುಮಕೂರಿನ ಶ್ರೀಸಿದ್ಧಗಂಗಾಮಠದ ಲಿಂಗೈಕ್ಯ ಡಾ.ಶ್ರೀಶಿವಕುಮಾರಸ್ವಾಮೀಜಿ ಅವರ ಜಯಂತೋತ್ಸವದ ಅಂಗವಾಗಿ ಜಿಲ್ಲೆಯಾದ್ಯಂತ ಹಮ್ಮಿಕೊಂಡಿದ್ದ ದಾಸೋಹದಲ್ಲಿ ನಡೆದಾಡುವ ದೇವರು ಪ್ರತ್ಯಕ್ಷವಾದಂತೆ ಭಾಸವಾಯಿತು.
ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಯಳಂದೂರು ಹಾಗೂ ಹನೂರು ತಾಲೂಕಿನ ವ್ಯಾಪ್ತಿಯಲ್ಲಿ ಬುಧವಾರ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ.ಶ್ರೀಶಿವಕುಮಾರಸ್ವಾಮೀಜಿ ಅವರ 119ನೇ ಜನ್ಮದಿನಾಚರಣೆ ಅಂಗವಾಗಿ ದಾಸೋಹ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಶರಣ ಪರಂಪರೆಯಲ್ಲಿ ದಾಸೋಹಕ್ಕೆ ತನ್ನದೇಯಾದ ಮಹತ್ವವಿದ್ದು, ಅಂತಹ ದಾಸೋಹ ಪರಂಪರೆಯನ್ನು ಜಗತ್ತಿಗೆ ಸಾರಿದ ಕೀರ್ತಿ ಸಿದ್ಧಗಂಗಾ ಶ್ರೀಗಳಿಗೆ ಸಲ್ಲುತ್ತದೆ. ಈ ನಿಟ್ಟಿನಲ್ಲಿ ಭಕ್ತರಿಗೆ ನಿರಂತರ ದಾಸೋಹ ಕಲ್ಪಿಸುವ ಮೂಲಕ ಜಯಂತ್ಯುತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಅದಲ್ಲದೇ ವಿವಿಧ ಕಡೆಗಳಲ್ಲಿ ಡಾ.ಶ್ರೀಶಿವಕುಮಾರಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸುವ ಮೂಲಕ ಜಯಂತ್ಯುತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಶ್ರೀಗಳಿಗೆ ಭಾರತರತ್ನ ನೀಡುವಂತೆ ಆಗ್ರಹ:
ತುಮಕೂರು ಸಿದ್ಧಗಂಗಾಮಠದ ಲಿಂಗೈಕ್ಯ ಡಾ.ಶ್ರೀಶಿವಕುಮಾರಸ್ವಾಮೀಜಿ ಅವರ ಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಮರಣೋತ್ತರ ಭಾರತರತ್ನ ಪ್ರಶಸ್ತಿಯನ್ನು ನೀಡಬೇಕು ಎಂದು ಇಂಚರ ಹೋಟೆಲ್ ಗ್ರೂಪ್ ಮಾಲೀಕ ಕೆ.ಜಿ.ಮಂಜುನಾಥ್(ಸ್ಟೈಲ್ ಮಂಜು) ಆಗ್ರಹಿಸಿದರು. ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಹೋಟೆಲ್‌ನಲ್ಲಿ ಸಿದ್ಧಗಂಗಾ ಮಠದ ಡಾ.ಶ್ರೀಶಿವಕುಮಾರಸ್ವಾಮೀಜಿ ಅವರ 119ನೇ ಜನ್ಮದಿನಾಚರಣೆ ಅಂಗವಾಗಿ ಬುಧವಾರ ಆಯೋಜಿಸಿದ್ದ ನಿರಂತರ ಉಚಿತ ದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಿದ್ಧಗಂಗಾ ಶ್ರೀಗಳ ಜಯತ್ಯುತ್ಸವದ ಅಂಗವಾಗಿ ಪ್ರತಿವರ್ಷ ಉಚಿತವಾಗಿ ತಿಂಡಿ, ಊಟದ ವ್ಯವಸ್ಥೆ ಮಾಡಿಕೊಂಡು ಬರಲಾಗುತ್ತಿದೆ. ಅದರಂತೆ ಈ ಬಾರಿಯೂ ಸುಮಾರು 1500 ಜನರಿಗೆ ತಿಂಡಿ ಹಾಗೂ 3500 ಜನರಿಗೆ ಊಟದ ವ್ಯವಸ್ಥೆಯನ್ನು ಈ ಬಾರಿಯೂ ಮಾಡಲಾಗಿದೆ ಎಂದರು. ಜಗತ್ತಿಗೆ ದಾಸೋಹದ ಮಹತ್ವವನ್ನು ಸಾರಿದ, ತ್ರಿವಿಧ ದಾಸೋಹದ ಬೆಳಕನ್ನು ಇಡೀ ನಾಡಿಗೆ ಪಸರಿಸಿದ ಡಾ.ಶ್ರೀಶಿವಕುಮಾರಸ್ವಾಮೀಜಿ ಅವರಿಗೆ ಮರಣೋತ್ತರ ಭಾರತರತ್ನವನ್ನು ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ, ಉಪ ತಹಸೀಲ್ದಾರ್ ರಂಗರಾಜು, ಮುಖಂಡರಾದ ಬೇಡಗುಳಿ ವೀರಭದ್ರಸ್ವಾಮಿ, ಹೊನ್ನಮೇಟಿ ಸುಂದ್ರಣ್ಣ, ಲಿಂಗರಾಜಮೂರ್ತಿ, ಯೋಗಪ್ರಕಾಶ್, ಶಿವಮಲ್ಲಪ್ಪ, ವಿಶ್ವ, ಈಶ್ವರ್ ರಕ್ಷಿತ್, ನಾಗರತ್ನಮ್ಮ, ಉಮಾ ಮಂಜುನಾಥ್, ರಾಧಾಕೃಷ್ಣ, ಸಿದ್ದರಾಜು, ಹೆಬ್ಬಸೂರು ಶಂಕರ್, ಮಹೇಶ್, ರಾಜು ಹಾಗೂ ಇತರರು ಭಾಗವಹಿಸಿದ್ದರು.
ವೃತ್ತವೊಂದಕ್ಕೆ ಶ್ರೀಗಳ ಹೆಸರು:
ನಗರದ ಹೌಸಿಂಗ್ ಬೋರ್ಡಿನ ಾರೆಸ್ಟ್ ನರ್ಸರಿ ರಸ್ತೆಯಲ್ಲಿರುವ ವೃತ್ತಕ್ಕೆ ಶ್ರೀಗಳ 119ನೇ ಜಯಂತ್ಯುತ್ಸವದ ಅಂಗವಾಗಿ ಸಿದ್ಧಗಂಗಾ ಮಠದ ಡಾ.ಶ್ರೀಶಿವಕುಮಾರಸ್ವಾಮಿ ಅವರ ಹೆಸರನ್ನು ನಾಮಕರಣ ಮಾಡಲಾಯಿತು. ನಗರದ ಶ್ರೀಸಿದ್ಧಮಲ್ಲೇಶ್ವರ ವಿರಕ್ತ ಮಠದ ಶ್ರೀ ಚನ್ನಬಸವಸ್ವಾಮೀಜಿ ಅವರು ನಾಮಲಕವನ್ನು ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅವರು 12ನೇ ಶತಮಾನದ ಶರಣ ಪರಂಪರೆಗೆ ಪ್ರಪಂಚದಲ್ಲಿ ತನ್ನದೇಯಾದ ಮಹತ್ವವಿದೆ. ಬಸವಾಧಿ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿದ ಡಾ.ಶ್ರೀಶಿವಕುಮಾರಸ್ವಾಮೀಜಿ ಅವರು ಪ್ರಪಂಚಕ್ಕೆ ತ್ರಿವಿಧ ಮಹತ್ವವನ್ನು ಸಾರಿದರು. ಆ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ. ಅವರ ಆದರ್ಶಗಳನ್ನು ನಾವೆಲ್ಲರೂ ಬದುಕಿನಲ್ಲಿ ಅಳವಡಿಸಿಕೊಂಡು ಸಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ಬಸವಕೇಂದ್ರದ ಜಿಲ್ಲಾಧ್ಯಕ್ಷ ಎನ್‌ರಿಚ್ ಮಹಾದೇವಸ್ವಾಮಿ, ಹೊನ್ನಮೇಟಿ ಸುಂದರ್, ವಿಶ್ವ, ಸುನಿ, ಸಂತೋಷ್, ಕೆಎಸ್‌ಆರ್‌ಟಿಸಿ ನಂಜುಂಡಸ್ವಾಮಿ, ಮೂಡ್ಲುಪುರ ಮಂಜೇಶ್, ಕುಮಾರ್, ಮಹಾಂತ್, ಪ್ರಮೋದ್ ಹಾಗೂ ಇತರರಿದ್ದರು.