ಬೂದುಬಾಳು ಶ್ರೀ ಗುಡಿಹಟ್ಟಿ ವೆಂಕಟರಮಣಸ್ವಾಮಿ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.  
ಚಾಮರಾಜನಗರ

ವಿಜೃಂಭಣೆಯ ವೆಂಕಟರಮಣಸ್ವಾಮಿ ರಥೋತ್ಸವ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಂ.ಆರ್.ಮಂಜುನಾಥ್ ಭಾಗಿ
ಹನೂರು: ಬೂದುಬಾಳು ಗ್ರಾಮದ ಶ್ರೀ ಗುಡಿಹಟ್ಟಿ ವೆಂಕಟರಮಣಸ್ವಾಮಿಯ ಬ್ರಹ್ಮ ರಥೋತ್ಸವ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ದೇಗುಲವನ್ನು ತಳಿರು, ತೋರಣ ಹಾಗೂ ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ರಥೋತ್ಸವ ಪ್ರಯುಕ್ತ ಬೆಳಗ್ಗೆ ದೇಗುಲದಲ್ಲಿ ಸ್ವಾಮಿಗೆ ವಿವಿಧ ಅಭಿಷೇಕದ ಜತೆಗೆ ವಿಶೇಷ ಪೂಜೆ ನೆರವೇರಿಸಲಾಯಿತು. ತೇರನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತು. 10.30ರ ವೇಳೆಯಲ್ಲಿ ದೇಗುಲದಲ್ಲಿ ಸ್ವಾಮಿಗೆ ಪೂಜೆ ನೆರವೇರಿಸಿದ ಬಳಿಕ ಉತ್ಸವ ಮೂರ್ತಿಯನ್ನು ತೇರಿನ ಬಳಿ ಕರೆ ತಂದು ಧರ್ಮಾಧಿಕಾರಿ ಮಧುಸೂದನ್ ಅವರ ಸಮ್ಮುಖದಲ್ಲಿ ಮೂರು ಸುತ್ತು ಪ್ರದಕ್ಷಿಣೆ ಹಾಕಿಸಲಾಯಿತು.
ಉತ್ಸವ ಮೂರ್ತಿಯನ್ನು ತೇರಿನಲ್ಲಿ ಕೂರಿಸಿ ದೀಪ, ಧೂಪದಾರತಿ ಬೆಳಗಲಾಯಿತು. ಗರುಡವೊಂದು ಪ್ರದಕ್ಷಿಣೆ ಹಾಕಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ದೇಗುಲದ ಆವರಣದಿಂದ ತುಸು ದೂರು ತೇರನ್ನು ಎಳೆಯಲಾಯಿತು. ಈ ವೇಳೆ ಭಕ್ತರು ಗೋವಿಂದ.. ಗೋವಿಂದಾ ಜಯಘೋಷಗಳನ್ನು ಮೊಳಗಿಸಿದರು. ದೇವರ ಗುಡ್ಡರು ಜಾಗಟೆ ಸದ್ದು ಮಾಡುತ್ತ ಶಂಖ ಊದುತ್ತ ಭಕ್ತಿ ಪರವಶವಾದರು. ರಥೋತ್ಸವದಲ್ಲಿ ಶಾಸಕ ಎಂ.ಆರ್.ಮಂಜುನಾಥ್, ಮಾಜಿ ಶಾಸಕ ಆರ್.ನರೇಂದ್ರ ಪುತ್ರ ನವನೀತ್‌ಗೌಡ, ತಹಸೀಲ್ದಾರ್ ಕೆ.ಎನ್ ಚೈತ್ರಾ, ಕೊಳ್ಳೇಗಾಲ ತಾಪಂ ಇಒ ಗುರುಶಾಂತಪ್ಪ, ಇನ್‌ಸ್ಪೆಕ್ಟರ್ ಆನಂದಮೂರ್ತಿ ಇತರರು ಭಾಗಿಯಾಗಿದ್ದರು.
ಕಂಡಾಯ, ಸತ್ತಿಗೆ, ಸೂರಿಪಾನಿ, ಜಾಗಟೆ ಹಾಗೂ ತಮಟೆ ಸದ್ದಿನೊಂದಿಗೆ ಸ್ವಾಮಿಯ ಉತ್ಸವ ಮೂರ್ತಿಯನ್ನು ಹೊತ್ತು ತಂದ ಸಿಂಗಾನಲ್ಲೂರು ಗ್ರಾಮಸ್ಥರು ಹಾಗೂ ದೇವರ ಗುಡ್ಡರು ಗ್ರಾಮದ ಹೊರವಲಯದಲ್ಲಿನ ನಾರಾಯಣಸ್ವಾಮಿ ಹಾಗೂ ಆಂಜನೇಯ ಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ತೇರಿನ ಬಳಿ ಆಗಮಿಸಿ ಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರದಕ್ಷಿಣೆ ಹಾಕಿಸಲಾ ಯಿತು. ಬಳಿಕ ದೊಡ್ಡಕೆರೆಯ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸಿದರು.
ದೇವರ ದರ್ಶನ ಪಡೆದ ಭಕ್ತರು: ಚಾಮರಾಜನಗರ ಸೇರಿದಂತೆ ಮೈಸೂರು, ಮಂಡ್ಯ, ಬೆಂಗಳೂರು ಹಾಗೂ ಇತರ ಕಡೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಸರತಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದರು. ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಿದರು. ದೇಗುಲದ ಒಳಾಂಗಣದಲ್ಲಿ ಪಟ್ಟದಲ್ಲಿ ಕೂರಿಸಿದ್ದ ಸ್ವಾಮಿಯ ಉತ್ಸವ ಮೂರ್ತಿಗೂ ಪೂಜೆ ನೆರವೇರಿಸಿದರು. ಇನ್ನು ಭಕ್ತರಿಗೆ ಗ್ರಾಮದ ಬಹುತೇಕ ಕಡೆಗಳಲ್ಲಿ ಅನ್ನ ಸಂತರ್ಪಣೆ ಹಾಗೂ ಮಜ್ಜಿಗೆ, ಪಾನಕ ವಿತರಿಸಲಾಯಿತು.
ಪಾರ್ಕಿಂಗ್ ಶುಲ್ಕದಿಂದ ಮುಕ್ತಿ: ಪ್ರತಿ ವರ್ಷ ವಾಹನಗಳಿಂದ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಲಾಗುತ್ತಿತ್ತು. ಇದರಿಂದ ವಾಹನ ದಟ್ಟಣೆ ಜತೆಗೆ ಭಕ್ತರು ಕಿರಿಕಿರಿ ಅನುಭವಿಸುವಂತಾಗಿತ್ತು. ಈ ಬಗ್ಗೆ ಭಕ್ತರಿಂದ ಆಕ್ಷೇಪ ಕೇಳಿ ಬಂದಿತ್ತು. ಈ ಬಗ್ಗೆ ಮನಗಂಡ ಶಾಸಕ ಎಂ.ಆರ್.ಮಂಜುನಾಥ್, ಕಳೆದ ವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಯಾವುದೇ ಕಾರಣಕ್ಕೂ ಭಕ್ತರಿಂದ ಶುಲ್ಕವನ್ನು ಪಡೆಯುವಂತಿಲ್ಲ ಎಂದು ಸೂಚಿಸಿದ್ದರು. ಹಾಗಾಗಿ ಈ ಬಾರಿ ಭಕ್ತರು ಪಾರ್ಕಿಂಗ್ ಶುಲ್ಕದಿಂದ ಮುಕ್ತಿ ಪಡೆದರು. ಇನ್‌ಸ್ಪೆಕ್ಟರ್ ಆನಂದಮೂರ್ತಿ ನೇತೃತ್ವದಲ್ಲಿ ಮುಂಜಾಗ್ರತಾ ಕ್ರಮವಾಗಿ ಸೂಕ್ತ ಪೋಲಿಸ್ ಬಂದೋಬಸ್ತ್ ಒದಗಿಸಲಾಗಿತ್ತು. ಗ್ರಾಮದ ಹೊರವಲಯದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು.
ದೇಗುಲದ ಅಭಿವೃದ್ಧಿಗೆ ಅಗತ್ಯ ಕ್ರಮ: ರಥೋತ್ಸವದ ಬಳಿಕ ಸುದ್ದಿಗಾರದೊಂದಿಗೆ ಮಾತನಾಡಿದ ಶಾಸಕ ಎಂ.ಆರ್. ಮಂಜುನಾಥ್, ಗುಡಿಹಟ್ಟಿ ವೆಂಕಟರಮಣಸ್ವಾಮಿ ಜಾತ್ರೆ ಖ್ಯಾತಿ ಪಡೆದಿದ್ದು, ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಭಕ್ತರು ಆಗಮಿಸಿದ್ದಾರೆ. ರಥೋತ್ಸವವು ವಿಜೃಂಭಣೆಯಿಂದ ನಡೆದಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆ, ಬೆಳೆಯಾಗಿ ಹನೂರು ಕ್ಷೇತ್ರ ಸಮೃದ್ಧಿಯಿಂದ ಕೂಡಿರಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಇನ್ನು ಈ ದೇಗುಲ ಅಭಿವೃದ್ಧಿಯಾಗಬೇಕಿದ್ದು, ಈ ಸಂಬಂಧ ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದರು.