ಬಂಡೀಪುರ ಅರಣ್ಯದೊಳಗಿರುವ ತಾವರಕಟ್ಟೆ ಮಹದೇಶ್ವರ ದೇವಾಲಯಕ್ಕೆ ಆದಿವಾಸಿಗಳು ಆಗಮಿಸಿ ಪೂಜೆ ಸಲ್ಲಿಸಿದರು.
- ಬಂಡೀಪುರ ಅರಣ್ಯದೊಳಗೆ ತೆರಳಿ ಧಾರ್ಮಿಕ ಕಾರ್ಯ
- ಅರಣ್ಯ ಇಲಾಖೆಯಿಂದ ಸಫಾರಿ ವಾಹನ ವ್ಯವಸ್ಥೆ
ಗುಂಡ್ಲುಪೇಟೆ: ಬಂಡೀಪುರ ಅರಣ್ಯದೊಳಗೆ ತಾವರೆಕಟ್ಟೆ ಮಹದೇಶ್ವರ ಜಾತ್ರೆ ಸೋಮವಾರ ಶ್ರದ್ಧಾಭಕ್ತಿಯಿಂದ ಜರುಗಿತು.
ಕಾಡಿನ ಒಳಗೆ ಇರುವ ದೇವಾಲಯಕ್ಕೆ ಭಕ್ತರನ್ನು ಕರೆದೊಯ್ಯಲು ಅರಣ್ಯ ಇಲಾಖೆ ಗುರುವಾರ ಸಫಾರಿ ವಾಹನಗಳನ್ನು ನಿಯೋಜಿಸಿತ್ತು. ಹುಲಿ ಯೋಜನೆಯ ಬಂಡೀಪುರ ಸಫಾರಿ ವಲಯದ ಅರಣ್ಯ ಪ್ರದೇಶದಲ್ಲಿರುವ ತಾವರೆಕಟ್ಟೆ ಮಹದೇಶ್ವರ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನರು ಹಾಗೂ ಆದಿವಾಸಿಗಳ ಆರಾಧ್ಯ ದೈವವಾಗಿದೆ. ಪ್ರತಿ ವರ್ಷ ಶಿವರಾತ್ರಿ ಹಬ್ಬದ ಮರುದಿನ ಬಂಡೀಪುರ ವಲಯದ ಅರಣ್ಯ ಪ್ರದೇಶದೊಳಗೆ ಇರುವ ತಾವರೆಕಟ್ಟೆ ಮಹದೇಶ್ವರ ದೇವಾಲಯಕ್ಕೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಆಗಮಿಸಿ ಸಂಭ್ರಮ-ಸಡಗರದಿಂದ ಜಾತ್ರೆ ಮಾಡುತ್ತಿದ್ದಾರೆ.
ಈ ಹಿಂದೆ ಪ್ರತಿ ಸೋಮವಾರ, ಶುಕ್ರವಾರ ಹಾಗೂ ವಿಶೇಷ ದಿನಗಳಲ್ಲಿ ಭಕ್ತರು ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುತ್ತಿದ್ದರು. ಆದರೆ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆಯಾದ ನಂತರ ಸಾರ್ವಜನಿಕರ ಮುಕ್ತ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಇದರಿಂದ ಪ್ರತಿ ವರ್ಷವೂ ಶಿವರಾತ್ರಿ ಹಬ್ಬದ ಮರು ದಿನ ಜಾತ್ರೆ ನಡೆಸಲು ಅರಣ್ಯ ಇಲಾಖೆ ಅನುಮತಿ ನೀಡುತ್ತಿದೆ. ಜಾತ್ರೆಗೆ ಬರುವ ಭಕ್ತರು ಹಾಗೂ ಆದಿವಾಸಿಗಳನ್ನು ದೇವಾಲಯಕ್ಕೆ ಕರೆದೊಯ್ದು ನಂತರ ಹೊರಗೆ ಕರೆತರಲು ವಾಹನಗಳ ವ್ಯವಸ್ಥೆ ಮಾಡುವ ಜತೆಗೆ ಭಕ್ತರಿಗೆ ಪ್ರಸಾದ ನೀಡುವ ವ್ಯವಸ್ಥೆಯನ್ನೂ ಮಾಡುತ್ತಿದೆ.
ಬಂಡೀಪುರ ಹಾಗೂ ನೆರೆಯ ತಮಿಳುನಾಡು ಮುಂತಾದ ಕಡೆಗಳಲ್ಲಿ ನೆಲೆಸಿರುವ ಆದಿವಾಸಿಗಳು ಬಂದು ಸಾಂಪ್ರದಾಯಿಕ ಹಾಡುಗಳನ್ನು ಹಾಡುತ್ತ ಸಾಮೂಹಿಕವಾಗಿ ನರ್ತಿಸುವ ಮೂಲಕ ಮಾದಪ್ಪನ ಸೇವೆ ಸಲ್ಲಿಸಿದರು. ಬಂಡೀಪುರ ಸುತ್ತಮುತ್ತಲಿನ ಗ್ರಾಮಗಳು ಹಂಗಳ ಹೋಬಳಿಯ ಹೆಚ್ಚಿನ ಗ್ರಾಮಗಳ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
ಪ್ರತಿ ವರ್ಷವೂ ಜಾತ್ರೆಗೆ ಭಕ್ತರನ್ನು ಕರೆದೊಯ್ಯುವ ಮೂಲಕ ಅರಣ್ಯ ಇಲಾಖೆ ಕಾಡಂಚಿನ ಜನರ ಭಾವನೆಗಳನ್ನು ಗೌರವಿಸುತ್ತಿದೆ. ಬೇಸಿಗೆ ಸಂದರ್ಭದಲ್ಲಿ ಕಾಡಿಗೆ ಆಕಸ್ಮಿಕವಾಗಿ ಬೆಂಕಿಬಿದ್ದರೆ ಕಾಡಂಚಿನ ಜನರು ಹಾಗೂ ಆದಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅರಣ್ಯ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುತ್ತಿದೆ.
ಜಾತ್ರೆಗೆ ಸುಮಾರು 5 ಸಾವಿರಕ್ಕೂ ಹೆಚ್ಚಿನ ಭಕ್ತರು ಆಗಮಿಸಿದ್ದರು ಎಂದು ಬಂಡೀಪುರ ವಲಯಾರಣ್ಯಾಧಿಕಾರಿ ಎನ್.ಸಿ.ಮಹದೇವ ವಿಜಯವಾಣಿಗೆ ತಿಳಿಸಿದ್ದಾರೆ.