ವಡಕೆಹಳ್ಳದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.  
ಚಾಮರಾಜನಗರ

ಡಿಪಿಆರ್ ಸಿದ್ಧವಾಗದಿದ್ದರೆ ಹೋರಾಟ ತೀವ್ರ

ಪ್ರಮುಖ ಮುಖ್ಯಾಂಶಗಳು

  • ಏತ ನೀರಾವರಿ ಯೋಜನೆ
  • ರೂಪಿಸುವ ಸಂಬಂಧ
  • ಡಿಪಿಆರ್ ಆಗದಿರುವ ಹಿನ್ನಲೆ
  • ವಡಕೆಹಳ್ಳದಲ್ಲಿ 78 ದಿನಗಳಿಂದ ಅಹೋ ರಾತ್ರಿ ಧರಣಿ
ಹನೂರು: ಏತ ನೀರಾವರಿ ಯೋಜನೆ ರೂಪಿಸುವ ಸಂಬಂಧ ಡಿಪಿಆರ್ ಆಗದಿರುವ ಹಿನ್ನಲೆಯಲ್ಲಿ ತಾಲೂಕಿನ ವಡಕೆಹಳ್ಳದಲ್ಲಿ 78 ದಿನಗಳಿಂದ ಅಹೋ ರಾತ್ರಿ ಧರಣಿ ನಡೆಸುತ್ತಿರುವ ರೈತರು ಬೇಸತ್ತು ಸೋಮವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘ ಹಾಗೂ ದಂಟಳ್ಳಿ ಏತ ನೀರಾವರಿ ಹೋರಾಟ ಸಮಿತಿ ವತಿಯಿಂದ ಅಹೋ ರಾತ್ರಿ ಧರಣಿ ನಡೆಯುತ್ತಿದ್ದು, ಮಹಿಳೆಯರು, ಯುವಕರು, ನಿವೃತ್ತ ಸೈನಿಕರು, ಚರ್ಚ್‌ನ ಫಾದರ್ ಸೇರಿದಂತೆ ಸಂಘ ಸಂಸ್ಥೆಯ ಪದಾಧಿಕಾರಿಗಳು ಬೆಂಬಲ ಸೂಚಿಸಿದ್ದಾರೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದ ವೇಳೆ ಜ.15ರೊಳಗೆ ಏತ ನೀರಾವರಿ ಯೋಜನೆ ಸಂಬಂಧ ಡಿಪಿಆರ್ ಸಿದ್ಧಗೊಳಿಸುವುದಾಗಿ ಭರವಸೆ ನೀಡಿದ್ದರು. ಆದರೆ ಈವರೆಗೂ ಈ ಕಾರ್ಯವಾಗಿಲ್ಲ. ಇದರಿಂದ ಬೇಸತ್ತ ಧರಣಿ ನಿರತರು ಹಾಗೂ ಮಹಿಳೆಯರು ಗ್ರಾಮದ ಮುಖ್ಯ ರಸ್ತೆಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುವ ಮೂಲಕ ಪ್ರತಿಭಟನೆ ನಡೆಸಿದರು. ಈ ವೇಳೆ ಕೆಲ ರೈತರು ಅರೆಬೆತ್ತಲೆ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಧರಣಿ ನಿರತ ಸ್ಥಳಕ್ಕೆ ಆಗಮಿಸಿದ ರೈತರು ಮಾತನಾಡಿ, ಏತ ನೀರಾವರಿ ಯೋಜನೆಯನ್ನು ರೂಪಿಸುವಂತೆ ಆಗ್ರಹಿಸಿ 78 ದಿನಗಳಿಂದಲೂ ಧರಣಿ ನಡೆಸಲಾಗುತ್ತಿದೆ. ಜ.15ರೊಳಗೆ ಡಿಪಿಆರ್ ಸಿದ್ಧವಾಗುವುದು ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಈ ಕಾರ್ಯವಾಗಿಲ್ಲ. ಈ ಬಗ್ಗೆ ಎಚ್ಚೆತ್ತು ಡಿಪಿಆರ್‌ಗೆ ಕ್ರಮವಹಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಚರ್ಚ್ ಫಾದರ್ ಸೇಸುರಾಜ್, ಸಿಸ್ಟರ್ ಸಲೋಮಿ, ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ, ಗ್ರಾಮ ಘಟಕದ ಅಧ್ಯಕ್ಷ ಅರ್ಪುದರಾಜ್, ನಿವೃತ್ತ ಸೈನಿಕರಾದ ಮರಿಯ ಜೋಸೆಫ್, ಮಾಣಿಕ್ಯಂ, ರೈತ ಮುಖಂಡರಾದ ಲೂರ್ದುಸ್ವಾಮಿ, ಪೀಟರ್, ಡೇವಿಡ್, ದೀಪಾ ಮೇರಿ, ಸಗಾಯಮೇರಿ, ಜೋಸ್ಮೀನ್ ಮೇರಿ, ಪ್ರೇಮಾ, ಲಿಲ್ಲಿ ಇತರರಿದ್ದರು.