ಗೋಪಿನಾಥಂನಲ್ಲಿ ಹೋರಿ ಬೆದರಿಸುವ ಹಬ್ಬ ವಿಜೃಂಭಣೆಯಿಂದ ನೆರವೇರಿತು.
- ಗಡಿಗ್ರಾಮ ಗೋಪಿನಾಥಂ
- ಸಂಕ್ರಾಂತಿ ಹಬ್ಬ
ಹನೂರು: ತಾಲೂಕಿನ ಗಡಿಗ್ರಾಮ ಗೋಪಿನಾಥಂನಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಶನಿವಾರ ಹೋರಿ ಬೆದರಿಸುವ ವಿಶೇಷ ಉತ್ಸವ ವಿಜೃಂಭಣೆಯಿಂದ ನಡೆಯಿತು.
ಉತ್ಸವದ ಹಿನ್ನೆಲೆಯಲ್ಲಿ ಎತ್ತುಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮೈಮೇಲೆ ವಿವಿಧ ಬಣ್ಣಗಳಿಂದ ಚಿತ್ತಾರ ಬಿಡಿಸಲಾಗಿತ್ತು. ಕೊರಳು ಹಾಗೂ ಕಾಲಿಗೆ ಗೆಜ್ಜೆ ಕಟ್ಟಿ ಬಣ್ಣದ ಟೇಪ್‌ಗಳಿಂದ ಸಿಂಗರಿಸಲಾಗಿತ್ತು. ಎತ್ತುಗಳ ಕೊರಳು ಹಾಗೂ ಹೊಟ್ಟೆಗೆ ಕೊಬ್ಬರಿ ಸರ, ಪೀಪಿ ಹಾಗೂ ಅಲಂಕಾರಿಕ ಹೂಗಳಿಂದ ಸಿಂಗರಿಸಿ ಹೋರಿ ಬೆದರಿಸುವ ಸ್ಥಳಕ್ಕೆ ಕರೆ ತರಲಾಯಿತು.
ಗ್ರಾಮದ ಶ್ರೀ ಶಕ್ತಿ ಮಾರಿಯಮ್ಮನ್ ದೇಗುಲ ಸಮೀಪ ಜಮಾಯಿಸಿದ ಗ್ರಾಮಸ್ಥರು ತಮ್ಮ ಎತ್ತುಗಳಿಗೆ ಬೆದರು ಬೊಂಬೆಗಳನ್ನು ತೋರಿಸಿ ಅವುಗಳನ್ನು ರೊಚ್ಚಿಗೆಬ್ಬಿಸಿ ಕಾದಾಟ ನಡೆಸಿದರು. ಒಟ್ಟು 57 ಎತ್ತುಗಳು ಈ ಕಾದಾಟದಲ್ಲಿ ಭಾಗವಹಿಸಿದ್ದವು.
ಎತ್ತಿನ ಎಡ, ಬಲವನ್ನು ಹಗ್ಗದಿಂದ ಹಿಡಿಯುವ 10ಕ್ಕೂ ಹೆಚ್ಚು ಯುವಕರು ಬೆದರು ಬೊಂಬೆಯನ್ನು ತೋರಿಸಿ ಅದನ್ನು ರೊಚ್ಚಿಗೆಬ್ಬಿಸಿದರು. 10-12 ಯುವಕರ ಹಿಡಿತವನ್ನೂ ಲೆಕ್ಕಿಸದ ಎತ್ತುಗಳು ಬೆದರು ಬೊಂಬೆಯನ್ನು ತಿವಿದು ಬಿಸಾಕಿದವು. ಈ ವೇಳೆ ಯುವಕರು ಸೇರಿದಂತೆ ಗ್ರಾಮಸ್ಥರು ಹರ್ಷೋದ್ಘಾರ ವ್ಯಕ್ತಪಡಿಸಿದರು. ಇದು ನೆರೆದಿದ್ದವರಲ್ಲಿ ಕುತೂಹಲ ಮೂಡಿಸಿತು.