ಯಳಂದೂರು ತಾಲೂಕಿನ ಮಲಾರಪಾಳ್ಯ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಕೊಳ್ಳೇಗಾಲ ಜೆಎಸ್‌ಎಸ್ ಮಹಿಳಾ ಪದವಿ ಪೂರ್ವ ಕಾಲೇಜನ ವತಿಯಿಂದ ನಡೆದ ಎನ್‌ಎಸ್‌ಎಸ್ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ವಕೀಲ ಗೌಡಹಳ್ಳಿ ಮಹೇಶ್ ಮಾತನಾಡಿದರು. ತೇಜನಾಯಕ್, ಅಮೃತೇಶ್ವರ್, ಸುಂದ್ರಮ್ಮ, ಕವಿತಾ ಇರರಿದ್ದರು. 
ಚಾಮರಾಜನಗರ

ಜಾನಪದ ವಿವಿ ಬೇರೆ ಜಿಲ್ಲೆಯ ಪಾಲಾಗಿದ್ದು ಚಾರಿತ್ರಿಕ ಮೋಸ

ಪ್ರಮುಖ ಮುಖ್ಯಾಂಶಗಳು

  • ವಕೀಲ ಗೌಡಹಳ್ಳಿ ಮಹೇಶ್ ವಿಷಾದ
  • ರಾಷ್ಟ್ರೀಯ ಸೇವಾ ಯೋಜನೆ ಶಿಬಿರ
ಯಳಂದೂರು: ಜನಪದ ಕಲೆಗಳ ತವರೂರಾದ ಚಾಮರಾಜನಗರ ಜಿಲ್ಲೆಗೆ ಒಲಿಯಬೇಕಾದ ಜಾನಪದ ವಿಶ್ವವಿದ್ಯಾಲಯ ಬೇರೆ ಜಿಲ್ಲೆಯ ಪಾಲಾಗಿದ್ದು ಚಾರಿತ್ರಿಕ ಮೋಸ ಎಂದು ವಕೀಲ ಗೌಡಹಳ್ಳಿ ಮಹೇಶ್ ವಿಷಾದಿಸಿದರು.
ಅವರು ತಾಲೂಕಿನ ಮಲಾರಪಾಳ್ಯ ಗ್ರಾಮದಲ್ಲಿ ಗುರುವಾರ ಜೆಎಸ್‌ಎಸ್ ಮಹಿಳಾ ಪದವಿ ಕಾಲೇಜು ಕೊಳ್ಳೇಗಾಲ ಇವರ ವತಿಯಿಂದ ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ಜನಪದ ಮಹಾಕಾವ್ಯಗಳು ಕುರಿತ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಫಿನ್‌ಲ್ಯಾಂಡಿನ ಕಲೈವಾಲವನ್ನು ಹೊರತುಪಡಿಸಿದರೆ ಈ ಜಗತ್ತಿನಲ್ಲಿ ಎರಡನೇ ಅತಿದೊಡ್ಡ ಜನಪದ ಮಹಾಕಾವ್ಯ ಪರಂಪರೆ ಎಂದರೆ ಅದು ಮಲೆಮಹದೇಶ್ವರ ಕಾವ್ಯ ಪರಂಪರೆ. ಜಿಲ್ಲೆಯಲ್ಲಿ ಮಹದೇಶ್ವರ ಕಾವ್ಯ, ಬೀಸು ಕಂಸಾಳೆ, ಗೊರವರ ಕುಣಿತ, ಮಂಟೆಸ್ವಾಮಿ ಕಾವ್ಯ, ಲಂಬಾಣಿ ನೃತ್ಯ, ಪಿನಾಸಿ ನೃತ್ಯ, ಕೋಲಾಟ, ಸೋಬಾನೆ ಪದ, ವೀರ ಮಕ್ಕಳ ಕುಣಿತ, ಸುಗ್ಗಿ ಕುಣಿತ, ಬೀಸುಕಲ್ಲಿನ ಪದ ಸೇರಿದಂತೆ ಹಲವು ಪ್ರಕಾರದ ಜನಪದ ಕಲೆಗಳ ಹಿನ್ನೆಲ್ಲಿ ಇದೆ ಎಂದು ಪ್ರಶ್ನಿಸಿದರು.
ಚಾಮರಾಜನಗರ ಜಿಲ್ಲೆಯ ಪ್ರತಿ ಐದು ಮಂದಿಯಲ್ಲಿ ಒಬ್ಬರಿಗೆ ಜನಪದ, ಇಬ್ಬರಿಗೆ ರಂಗಭೂಮಿ, ಮತ್ತಿಬ್ಬರಿಗೆ ಜನಪದ ಮತ್ತು ರಂಗಭೂಮಿ ಎರಡರ ಪರಿಚಯವೂ ಇದೆ. ಇಂತಹ ಜಿಲ್ಲೆಗೆ ಜಾನಪದ ವಿವಿ ಕೈ ತಪ್ಪಲು ರಾಜಕೀಯ ಇಚ್ಛಾಶಕ್ತಿಯೂ ಕಾರಣವಾಗಿದೆ. ಮತ್ತೆ ಇದನ್ನು ಜಿಲ್ಲೆಗೆ ದಕ್ಕಿಸಿಕೊಳ್ಳುವ ಕೆಲಸವನ್ನು ಎಲ್ಲರೂ ಸೇರಿ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ದೊಡ್ಡ ಹೋರಾಟದ ಅಗತ್ಯವಿದೆ. ಕಾಡಿನಿಂದ ಆವೃತ್ತವಾಗಿರುವ ಈ ಜಿಲ್ಲೆಯ ಬಹುಭಾಗ ಸಂಪದ್ಭರಿತವಾಗಿದೆ. ಇಲ್ಲಿನ ಕಾಡಿನ ಸೋಲಿಗರ ಗಾನ, ನೃತ್ಯವೂ ಕೂಡ ನಮ್ಮ ಜಾನಪದ ಸಂಸ್ಕೃತಿಯ ಭಾಗವಾಗಿದೆ. ಇಂದಿನ ಪೀಳಿಗೆ ಇದನ್ನು ಪೋಷಿಸುವ ಕೆಲಸ ಮಾಡಬೇಕಿದೆ. ವಿದ್ಯಾರ್ಥಿಗಳು ಇದನ್ನು ಅಭ್ಯಸಿಸಬೇಕಿದೆ. ಜಾನಪದಲ್ಲಿ ವೈಜ್ಞಾನಿಕ ದೃಷ್ಟಿಯನ್ನು ಪ್ರತಿಬಿಂಬಿಸುವ ಅನೇಕ ವಸ್ತು ವಿಷಯಗಳಿವೆ. ಇದರಲ್ಲಿ ಬದುಕಿನ ಸಾರವಿದೆ. ನಮ್ಮ ನಡವಳಿಕೆಯನ್ನು ತಿದ್ದುವ ಪಾಠವಿದೆ. ರಾತ್ರಿವಿಡಿ ಬರೆ ಬಾಯಲ್ಲೇ ಇಡೀ ಮಹದೇಶ್ವರ, ಮಂಟೇಸ್ವಾಮಿ, ಸಿದ್ದಪ್ಪಾಜಿ, ರಾಚಪ್ಪಾಜಿ ಕಥೆಗಳನ್ನು ಹಾಡುವ, ಹೇಳುವ ಜಾನಪದರ ತವರು ಇದಾಗಿದೆ. ಈ ಹಿನ್ನೆಲೆಯಲ್ಲಿ ನಾವು ಇದನ್ನು ಕಲಿಯಬೇಕು, ಉಳಿಸಬೇಕಿದೆ ಎಂದರು.
ವಿದ್ಯಾರ್ಥಿಗಳು ಮೊಬೈಲ್ ವ್ಯಸನದಿಂದ ದೂರವಿದ್ದು, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಮಹಿಳಾ ಕಾನೂನಿನ ಅರಿವು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಯೂತ್ ಫಾರ್ ಸೇವಾ ಸಂಸ್ಥೆಯ ಜಿಲ್ಲಾ ಸಂಚಾಲಕ ತೇಜನಾಯಕ್, ಕೃಷಿ ಇಲಾಖೆಯ ಸಹಾಯಕ ನಿರ್ದೆಶಕ ಅಮೃತೇಶ್ವರ್ ಮಾತನಾಡಿದರು. ಕೃಷಿ ಪತ್ತಿನ ಸಹಕರ ಸಂಘದ ನಿರ್ದೇಶಕ ರಾಜೇಶ್‌ರಂಗಯ್ಯ, ಸ್ಕೌಟ್ ಅಂಡ್ ಗೈಡ್ಸ್‌ನ ಪ್ರದೀಪ್, ಎಸ್‌ಡಿಎಂಸಿ ಸದಸ್ಯರಾದ ಸುಂದ್ರಮ್ಮ, ಕವಿತಾ, ಶೃತಿ, ಶಿಬಿರಾಧಿಕಾರಿ ಮಂಜಪ್ಪ, ಸಹ ಶಿಬಿರಾಧಿಕಾರಿ ಮಹೇಶ್, ಪ್ರಕಾಶ್, ಪುಟ್ಟಮ್ಮ, ಮಮತಾ ಇತರರಿದ್ದರು.