ಕೊಳ್ಳೇಗಾಲ ಪಟ್ಟಣದ ಶ್ರೀ ವಾಸವಿ ವಿದ್ಯಾ ಕೇಂದ್ರದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಶ್ರೀ ವಾಸವಿ ಸಮೂಹ ವಿದ್ಯಾ ಸಂಸ್ಥೆ ವಾರ್ಷಿಕೋತ್ಸವ 2025 ಸಂಸ್ಕೃತಿ ಭಾವನೆ ಸಾರ ಕಾರ್ಯಕ್ರಮಕ್ಕೆ ಆರ್ಯ ವೈಶ್ಯ ಸಂಘದ ಅಧ್ಯಕ್ಷ ಮತ್ತು ಶ್ರೀ ವಾಸವಿ ಸಮೂಹ ವಿದ್ಯಾ ಸಂಸ್ಥೆಯ ಎ.ಡಿ.ಕುಮಾರಕೃಷ್ಣ ಚಾಲನೆ ನೀಡಿದರು. ಪಿ.ಎನ್. ಸತ್ಯನಾರಾಯಣ್, ಡಾ.ಪಿ.ಜಿ.ಶ್ರೀಧರ್, ಪಿ.ಜಿ. ಶಶಿಧರ್, ಸುಮಂತ್ ವಿ.ಅಚ್ಚಮ್ ಇತರರು ಇದ್ದರು. 
ಚಾಮರಾಜನಗರ

ನಮ್ಮ ದೇಶದ ಪ್ರತಿಭೆಗಳಿಲ್ಲದೆ ಅನ್ಯ ರಾಷ್ಟ್ರಗಳ ಅಭಿವೃದ್ಧಿ ಅಸಾಧ್ಯ

ಆರ್ಯ ವೈಶ್ಯ ಸಂಘದ ಅಧ್ಯಕ್ಷ ಎ.ಡಿ.ಕುಮಾರಕೃಷ್ಣ ಅಭಿಮತ

ಕೊಳ್ಳೇಗಾಲ: ನಮ್ಮ ದೇಶದ ಪ್ರತಿಭೆಗಳಿಲ್ಲದೆ ಬೇರೆ ರಾಷ್ಟ್ರಗಳು ಆರ್ಥಿಕವಾಗಿ ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದು ಆರ್ಯ ವೈಶ್ಯ ಸಂಘದ ಅಧ್ಯಕ್ಷ ಮತ್ತು ಶ್ರೀ ವಾಸವಿ ಸಮೂಹ ವಿದ್ಯಾಸಂಸ್ಥೆಯ ಎ.ಡಿ.ಕುಮಾರಕೃಷ್ಣ ಹೇಳಿದರು.
ಪಟ್ಟಣದ ಶ್ರೀ ವಾಸವಿ ವಿದ್ಯಾ ಕೇಂದ್ರದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಶ್ರೀ ವಾಸವಿ ಸಮೂಹ ವಿದ್ಯಾಸಂಸ್ಥೆ ವಾರ್ಷಿಕೋತ್ಸವ ಕಾರ್ಯಕ್ರಮ-2025 ಸಂಸ್ಕೃತಿ ಭಾವನೆ ಸಾರ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು, ಪ್ರಸಕ್ತ ವರ್ಷಕ್ಕೆ ನೋಡುವುದಾದರೆ ನಮ್ಮ ಭಾರತ ಎತ್ತರಕ್ಕೆ ಬೆಳೆದು ನಿಂತಿದೆ. ನಮ್ಮ ಬಾಲ್ಯದ ವಿದ್ಯಾಭ್ಯಾಸದಲ್ಲಿ ಭಾರತವನ್ನು ಅನೇಕರು ಆಳ್ವಿಕೆ ಮಾಡಿದರು ಎಂಬ ಇತಿಹಾಸವನ್ನು ಓದಿದ್ದೇವೆ. ಆದರೀಗ ಪ್ರಪಂಚದ ಪ್ರತಿಯೊಂದು ದೇಶವು ಭಾರತದೊಂದಿಗೆ ಸ್ನೇಹ ಬೆಸೆಯಲು ಹಂಬಲಿಸುತ್ತ ಕೈ ಚಾಚುತ್ತಿವೆ ಎಂದರು.
ಹಿಂದೆ ಭಾರತ ಬಡ ರಾಷ್ಟ್ರವೆಂದು ಕರೆಯುತ್ತಿದ್ದರು. ಆದರೀಗ ಜಗ್ಗತ್ತಿನ ಶ್ರೀಮಂತ ರಾಷ್ಟ್ರಗಳಲ್ಲಿ ಭಾರತವು ಒಂದಾಗಿದೆ. 5ನೇ ಆರ್ಥಿಕ ಶಕ್ತಿಯಾಗಿ ಬೆಳೆದು ನಿಂತಿದೆ. ನಮ್ಮ ದೇಶದ ಪ್ರತಿಭೆಗಳಿಲ್ಲದೆ ಬೇರೆ ರಾಷ್ಟ್ರಗಳು ಆರ್ಥಿಕವಾಗಿ ಬೆಳೆಯಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ದೇಶದ ಗಟ್ಟಿಯಾದ ಶಿಕ್ಷಣದ ವ್ಯವಸ್ಥೆಯಾಗಿದೆ. ನಮ್ಮ ಮಕ್ಕಳಲ್ಲಿ ಸಂವಹನ ಕೌಶಲ ಮತ್ತು ಆಂಗ್ಲ ಭಾಷೆಯ ಹಿಡಿತ ಉತ್ತಮವಾಗಿದೆ. ಶಿಕ್ಷಣ ವ್ಯವಸ್ಥೆ ಮೇಲೆ ನಮ್ಮ ಮಕ್ಕಳ ಭವಿಷ್ಯ ನಿಂತಿದೆ ಎಂದು ಹೇಳಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ 2024-25ನೇ ಸಾಲಿನಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಚಿನ್ನದ ನಾಣ್ಯ ನೀಡಿ ಗೌರವಿಸಲಾಯಿತು. ಬಳಿಕ ಶಾಲಾ ಮಕ್ಕಳಿಂದ ಸಂಸ್ಕೃತಿ ಕಾರ್ಯಕ್ರಮಗಳು ಜರುಗಿದವು.
ಶ್ರೀ ವಾಸವಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಪಿ.ಎನ್.ಸತ್ಯನಾರಾಯಣ್, ಕಾರ್ಯದರ್ಶಿ ಡಾ.ಪಿ.ಜಿ.ಶ್ರೀಧರ್, ಆರ್ಯ ವೈಶ್ಯದ ಕಾರ್ಯದರ್ಶಿ ಪಿ.ಜಿ.ಶಶಿಧರ್, ಖಜಾಂಚಿ ಸುಮಂತ್ ವಿ.ಅಚ್ಚಮ್, ಜಂಟಿ ಕಾರ್ಯದರ್ಶಿ ಜೆ.ಎಸ್.ಚೇತನ್, ಕೆ.ಎಸ್.ನಾಗರಾಜ ಬಾಬು, ಎಸ್.ವೆಂಕಟೇಶ್‌ಬಾಬು ಸಂಸ್ಥೆಯ ನಿರ್ದೇಶಕರು ಹಾಗೂ ಸಂಯೋಜಕರು ಇದ್ದರು.