ಮಾದಪ್ಪನ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳಿದ ಭಕ್ತರು.  ಮಲೆ ಮಹದೇಶ್ವರ ಬೆಟ್ಟ
ಚಾಮರಾಜನಗರ

ಮಾರ್ದನಿಸಿದ ಉಘೇ ಮಾದಪ್ಪ... ಉದ್ಘೋಷ

ಕಾಲ್ನಡಿಗೆಯಲ್ಲಿ ಮ.ಬೆಟ್ಟಕ್ಕೆ ಭಕ್ತರ ಯಾತ್ರೆ

ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯುವ ದೀಪಾವಳಿ ಜಾತ್ರೆಗೆ ವಿವಿಧ ಜಿಲ್ಲೆಯಿಂದ ಸಾವಿರಾರು ಭಕ್ತರು 3 ದಿನಗಳಿಂದ ಹನೂರಿನ ಮೂಲಕ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದಾರೆ.

ಉತ್ತರದ ಶ್ರೀ ಶೈಲದಿಂದ ಕತ್ತಲೆ ರಾಜ್ಯಕ್ಕೆ ಆಗಮಿಸಿದ ಶ್ರೀಮಹದೇಶ್ವರರು 77 ಮಲೆಗಳಲ್ಲಿ ಸಂಚರಿಸಿ ಹಲವು ಪವಾಡಗಳ ಮೂಲಕ ಭಕ್ತರ ಕಷ್ಟ ಕಾರ್ಪಣ್ಯ ನೀಗಿಸಿದ್ದಾರೆ. ಹಾಗಾಗಿ ಮಾಯ್ಕರ ಮಾದಪ್ಪನನ್ನು ಕೋಟ್ಯಂತರ ಜಗದೊಡೆಯ ಎಂದು ಭಕ್ತರು ಬಲವಾಗಿ ನಂಬಿದ್ದು, ಪೂಜಿಸುತ್ತಾ ಬಂದಿದ್ದಾರೆ. ನಡುಮಲೆಯಲ್ಲಿ ನೆಲೆಸಿರುವ ಮಾದಪ್ಪನ ಬಗ್ಗೆ ಭಕ್ತರು ಅಪಾರ ಭಕ್ತಿಭಾವವನ್ನು ಹೊಂದಿದ್ದಾರೆ. ಹಿಂದಿನ ಕಾಲಘಟ್ಟದಲ್ಲಿ ಮಲೆಮಹದೇಶ್ವರ ಬೆಟ್ಟಕ್ಕೆ ಯಾವುದೇ ಸಾರಿಗೆ ವ್ಯವಸ್ಥೆ ಇರಲಿಲ್ಲ. ಹಾಗಾಗಿ ಜಾತ್ರೆ ವೇಳೆ ರಾಜ್ಯದ ವಿವಿಧೆಡೆಯಿಂದ ಹರಕೆ ಹೊತ್ತ ಭಕ್ತರು ಬುತ್ತಿಯನ್ನು ಕಟ್ಟಿಕೊಂಡು ಹಲವು ದಿನಗಳ ಕಾಲ ಕಾಲ್ನಡಿಗೆಯ ಮೂಲಕ ಅಲ್ಲಲ್ಲಿ ವಿಶ್ರಾಂತಿ ಪಡೆಯುತ್ತಾ ಮಾದಪ್ಪನನ್ನು ಸ್ಮರಿಸುತ್ತಾ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದರು. ಈ ವಾಡಿಕೆ ಇಂದಿಗೂ ಮುಂದುವರಿದಿದೆ.

ದೀಪಾವಳಿ ನಿಮಿತ್ತ ವಿಶೇಷ ಪೂಜೆ : ಮಲೆಮಹದೇಶ್ವರ ಬೆಟ್ಟದಲ್ಲಿ ನ.6ರಿಂದ 5 ದಿನಗಳ ನಡೆಯುವ ದೀಪಾವಳಿ ಜಾತ್ರೆಯಲ್ಲಿ ಮಾದಪ್ಪನಿಗೆ ವಿಶೇಷ ಪೂಜೆ, ಎಣ್ಣೆಮಜ್ಜನ ಸೇವೆ, ಹಾಲರವಿ ಉತ್ಸವ, ಮಹಾರಥೋತ್ಸವ ಹಾಗೂ ತೆಪ್ಪೋತ್ಸವ ಜರುಗಲಿದೆ. ಈ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗಲು ಹಾಗೂ ಹರಕೆ ಸೇವೆಗಳನ್ನು ಕೈಗೊಳ್ಳಲು 2 ದಿನಗಳಿಂದ ಚಾಮರಾಜನಗರ, ನಂಜನಗೂಡು, ನರಸೀಪುರ, ಮೈಸೂರು, ಮಂಡ್ಯ, ಮಳವಳ್ಳಿ, ರಾಮನಗರದ ಭಾಗದಿಂದ ಹೆಚ್ಚಿನ ಭಕ್ತರು ತಂಡೋಪತಂಡವಾಗಿ ಪಾದಯಾತ್ರೆ ಮೂಲಕ ಅಲ್ಲಲ್ಲಿ ವಿಶ್ರಾಂತಿ ಪಡೆಯುತ್ತಾ ಹಾಗೂ ಅಡುಗೆ ತಯಾರಿಸಿ ಭೋಜನವನ್ನು ಸವಿದು ತೆರಳುತ್ತಿದ್ದಾರೆ. ಈ ಬಾರಿ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಉೇ ಮಾದಪ್ಪ... ೋಷಣೆ ಜತೆಗೆ ಮಾದಪ್ಪನ ಹಾಡನ್ನು ಹಾಡುತ್ತಾ ತಮಟೆಯ ತಾಳಕ್ಕೆ ಧ್ವನಿಗೂಡಿಸುತ್ತ ತೆರಳುತ್ತಿದ್ದರೆ, ಮಾದಪ್ಪನ ದೇವರ ಗುಡ್ಡರು ಕಂಸಾಳೆ ಬಾರಿಸುತ್ತಾ ಮಾದಪ್ಪನ ಮಹಿಮೆಯ ಹಾಡನ್ನು ಹಾಡುತ್ತಾ ಬೆಟ್ಟಕ್ಕೆ ಪಯಣ ಬೆಳೆಸಿದ್ದಾರೆ. ಹಾಗಾಗಿ ಹನೂರು ಭಾಗದಲ್ಲಿ ದೀಪಾವಳಿ ಜಾತ್ರೆಯ ಸಂಭ್ರಮ ಮನೆ ಮಾಡಿದೆ.

ತಾಳುಬೆಟ್ಟದಲ್ಲಿ ತಂಗುವ ಭಕ್ತರು: ಉತ್ತರದಿಂದ ನಡುಮಲೆಯಲ್ಲಿ ನೆಲೆಸಿರುವ ಮಹದೇಶ್ವರರು ಈ ಭಾಗದ ಕಾಡು ಮೇಡುಗಳಲ್ಲಿ ಸಂಚರಿಸುತ್ತಾ ಅಲ್ಲಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಬೆಟ್ಟ ಗುಡ್ಡಗಳಿಂದ ಆವೃತವಾಗಿದ್ದ ತಾಳುಬೆಟ್ಟದಲ್ಲಿ ತಂಗಿದ್ದು ವಿಶ್ರಾಂತಿ ಪಡೆದು ನಡುಮಲೆಗೆ ಪಯಣವನ್ನು ಆರಂಭಿಸಿದರು ಎನ್ನಲಾಗಿದೆ. ಈ ಕಾರಣದಿಂದ ಕಾಲ್ನಡಿಗೆಯಲ್ಲಿ ತೆರಳುತ್ತಿರುವ ಭಕ್ತರು ತಾಳುಬೆಟ್ಟದಲ್ಲಿ ತಂಗುತ್ತಾರೆ. ಬೆಳಗ್ಗೆ ಮಾದಪ್ಪನಿಗೆ ಧೂಪ ಹಾಕಿ, ಕೈ ಮುಗಿದು ಮಲೆಮಹದೇಶ್ವರಬೆಟ್ಟಕ್ಕೆ ಪಯಣ ಬೆಳೆಸುತ್ತಾರೆ. ಅಲ್ಲಿ ಕೆಲ ಗ್ರಾಮಸ್ಥರು ಅನ್ನ ಸಂತಪಣೆಯನ್ನು ಕೈಗೊಳ್ಳುತ್ತಾರೆ. ಈ ಜಾತ್ರೆಗೆ ಲಕ್ಷಾಂತರ ಭಕ್ತರು ಭಾಗಿಯಾಗಲಿದ್ದಾರೆ.