ಚಾಮರಾಜನಗರ ತಾಲೂಕಿನ ಚಂದಕವಾಡಿ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಡಿವೈಎಸ್ಪಿ ಸ್ನೇಹರಾಜ್ ಉದ್ಘಾಟಿಸಿದರು. ಟಿ.ಜೆ. ಸುರೇಶ್, ಕೆ.ಸಿ.ರೇಚಣ್ಣ, ಸಾವಿತ್ರಿ, ರಾಮಸಮುದ್ರ ಸುರೇಶ್, ಚಂದ್ರಕಾಂತ್ ಇನ್ನಿತರರಿದ್ದರು.  
ಚಾಮರಾಜನಗರ

ಸಂವಿಧಾನ ಪ್ರತಿಯೊಬ್ಬರ ಪವಿತ್ರ ಗ್ರಂಥ

ಎಂ.ರವಿ

*ಚಾ.ನಗರ ವಿಭಾಗದ ಡಿವೈಎಸ್ಪಿ ಸ್ನೇಹಾರಾಜ್ ಅಭಿಪ್ರಾಯ

ಚಾಮರಾಜನಗರ: ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶಕ್ಕೆ ಉತ್ತಮ ಸಂವಿಧಾನವನ್ನು ನೀಡುವ ಮೂಲಕ ಅಪಾರ ಕೊಡುಗೆ ನೀಡಿದ್ದಾರೆ ಎಂದು ಚಾಮರಾಜನಗರ ವಿಭಾಗದ ಡಿವೈಎಸ್ಪಿ ಸ್ನೇಹರಾಜ್ ಹೇಳಿದರು.
ತಾಲೂಕಿನ ಚಂದಕವಾಡಿ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾ ಮಾನವ ಸಂಪನ್ಮೂಲ ಕೇಂದ್ರದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂವಿಧಾನದಿಂದಲೇ ಸಮಾಜದಲ್ಲಿ ಪ್ರತಿಯೊಬ್ಬರೂ ಸಮಾನ ಜೀವನ ನಡೆಸುವಂತಾಗಿದೆ. ದೇಶದ ಪ್ರತಿಯೊಬ್ಬರೂ ಎಲ್ಲ ಮೂಲಸೌಲಭ್ಯಗಳನ್ನು ಪಡೆದುಕೊಳ್ಳಲು ಸಂವಿಧಾನ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಓದಿಗೆ ಮೊದಲ ಆದ್ಯತೆ ನೀಡಬೇಕು. ಓದಿನಿಂದಲೇ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯ. ಶಿಕ್ಷಣ ಪಡೆದು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ತರಬೇತಿ ಸಂಯೋಜಕ ಟಿ.ಜೆ.ಸುರೇಶ್ ಮಾತನಾಡಿ, ಭಾರತದ ಸಂವಿಧಾನ ವಿಶ್ವದಲ್ಲಿಯೇ ಅತಿದೊಡ್ಡದು. ರಾಷ್ಟ್ರದ ಏಕತೆ, ಸಮಗ್ರತೆ, ವ್ಯಕ್ತಿ ಗೌರವ, ಆರ್ಥಿಕ, ರಾಜಕೀಯ, ಸಾಮಾಜಿಕ ಸಮಾನತೆಯನ್ನು ಪ್ರತಿಯೊಬ್ಬರಿಗೂ ಕಲ್ಪಿಸಿದೆ. ಹಕ್ಕುಗಳ ಜತೆಗೆ ಕರ್ತವ್ಯಗಳನ್ನು ಪಾಲನೆ ಮಾಡಬೇಕು ಎಂಬ ಸಂದೇಶವನ್ನು ಸಂವಿಧಾನದಲ್ಲಿ ತಿಳಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಾನವ ಸಂಪನ್ಮೂಲ ಕೇಂದ್ರದ ಸಂಯೋಜಕ ಕೆ.ಸಿ.ರೇಚಣ್ಣ, ಕಾಲೇಜಿನ ಪ್ರಾಂಶುಪಾಲರಾದ ಸಾವಿತ್ರಿ, ಜನಹಿತಾಶಕ್ತಿ ಹೋರಾಟ ವೇದಿಕೆ ಜಿಲ್ಲಾಧ್ಯಕ್ಷ ರಾಮಸಮುದ್ರ ಸುರೇಶ್, ಕಾನೂನು ಸಲಹೆಗಾರ ಚಂದ್ರಕಾಂತ್, ಉಪನ್ಯಾಸಕ ಚಂದ್ರು, ಸಿದ್ದಾರ್ಥ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ರಂಗಸ್ವಾಮಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.