ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆಯ ರಾಮಮಂದಿರದ ಎದುರು ಇರುವ ವಸಂತ್‌ಕುಮಾರ್ ಅವರ ಮನೆಯ ಕುಡಿಯುವ ನೀರಿನ ತೊಟ್ಟಿಯಲ್ಲಿ ಕೊಳಚೆ ನೀರು ಬಂದಿರುವುದು 
ಚಾಮರಾಜನಗರ

ಕುಡಿಯಲು ‘ಕೊಳಚೆ’ ನೀರಿನ ಭಾಗ್ಯ

ಪ್ರಮುಖ ಮುಖ್ಯಾಂಶಗಳು

  • 13ನೇ ವಾರ್ಡ್ ರಾಮಮಂದಿರದ ಎದುರಿನ ಮನೆಗಳಿಗೆ ಗಲೀಜು ಜಲ
  • ನಲ್ಲಿಗಳಲ್ಲಿ ಶುದ್ಧ ನೀರಿನ ಬದಲು ಗಬ್ಬು, ಕಪ್ಪು, ಮಾಂಸದಂಗಡಿಯ ರಕ್ತ ಮಿಶ್ರಿತ ನೀರು
ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆಯ ರಾಮಮಂದಿರದ ಎದುರು ಇರುವ ವಸಂತ್‌ಕುಮಾರ್ ಅವರ ಮನೆಯ ಕುಡಿಯುವ ನೀರಿನ ತೊಟ್ಟಿಯಲ್ಲಿ ಕೊಳಚೆ ನೀರು ಬಂದಿರುವುದು
ಚಾಮರಾಜನಗರ: ಚಾಮರಾಜನಗರ ನಗರಸಭೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡುತ್ತಿಲ್ಲ ಎನ್ನುವುದರೊಂದಿಗೆ ಕೊಳಚೆ ನೀರು ಭಾಗ್ಯವನ್ನೂ ಕರುಣಿಸಿದೆ.
ನಗರದ 13ನೇ ವಾರ್ಡ್‌ನ ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆಯ ರಾಮಮಂದಿರ ಎದುರಿನ ಬೀದಿಯ ಮನೆಗಳ ನಲ್ಲಿಗಳಲ್ಲಿ ಚರಂಡಿ ನೀರು ಮಿಶ್ರಣಗೊಂಡು ಸರಬರಾಜು ಆಗುತ್ತಿದೆ. ಚರಂಡಿ ಬಳಿ ಹಾದುಹೋಗಿರುವ ಪೈಪ್‌ಲೈನ್‌ನಲ್ಲಿ ಕೊಳಚೆ ನೀರು ಸೇರ್ಪಡೆಯಾಗುತ್ತಿರುವ ಸಂಭವವಿದೆ. ಹೀಗಾಗಿ ಹಲವು ದಿನಗಳಿಂದ ನಲ್ಲಿಗಳಲ್ಲಿ ಕೊಳಚೆ ನೀರು ಬರುತ್ತಿದೆ. ಈ ಬಗ್ಗೆ ಬೀದಿಯ ನಿವಾಸಿಗಳು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ. ಇದರಿಂದ ಬೇಸತ್ತು ಜನರು ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಕುಡಿಯಲು ಕೊಳಚೆ ನೀರು:
ನಲ್ಲಿಯಲ್ಲಿ ಬರುತ್ತಿರುವ ನೀರು ಕುಡಿಯುವುದಕ್ಕೆ ಯೋಗ್ಯವಾಗಿಲ್ಲ. ಕಲ್ಲು, ಮಣ್ಣು ಮಿಶ್ರಣಗೊಂಡಿದೆ. ಕಪ್ಪು ಬಣ್ಣದಿಂದ ಕೂಡಿದೆ. ಚರಂಡಿಯ ಕಸ, ಕಡ್ಡಿ, ಮಾಂಸದಂಗಡಿಯ ತ್ಯಾಜ್ಯ, ರಕ್ತ, ಪಾಚಿ, ಸಣ್ಣ ಸಣ್ಣ ಹುಳುಗಳು ತುಂಬಿಕೊಂಡಿವೆ. ನಲ್ಲಿಯಲ್ಲಿ ನೀರು ಬಂತು ಎಂದು ಕುಡಿಯುವುದಕ್ಕಾಗಿ ನೀರು ಹಿಡಿದು ಇಟ್ಟುಕೊಳ್ಳಲು ಬರುವ ನಿವಾಸಿಗಳು ಕೊಳಚೆ ನೀರು ಕಂಡು ಗಾಬರಿಯಾಗುತ್ತಿದ್ದಾರೆ. ಗಬ್ಬು ನಾರುತ್ತಿರುವ ನೀರು ಬಿಂದಿ, ತೊಟ್ಟಿಗಳ ಶುಚಿತ್ವವನ್ನೂ ಹಾಳು ಮಾಡುತ್ತಿದೆ. ತೊಟ್ಟಿಗಳಲ್ಲಿ ಶೇಖರಣೆಯಾಗುತ್ತಿರುವ ಗಲೀಜು ನೀರನ್ನು ಹೊರಗೆ ಹಾಕುವುದಕ್ಕೂ ಕಷ್ಟ ಪಡಬೇಕಾಗಿದೆ.
ನಿವಾಸಿಗಳಲ್ಲಿ ಅನಾರೋಗ್ಯ:
ಕೊಳಚೆ ನೀರು ಕುಡಿಯುವ ಬರುತ್ತಿರುವುದು ಗೊತ್ತಾಗದ ನಿವಾಸಿಗಳು ನೀರು ಕುಡಿದು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ನೆಗಡಿ, ಕೆಮ್ಮು, ಜ್ವರ ಬಂದು ಚಿಕಿತ್ಸೆ ಪಡೆಯುವಂತಾಗಿದೆ. ಕೊಳಚೆ ನೀರು ಜೀವಕ್ಕೆ ಅಪಾಯ ತಂದರೆ ಏನು ಗತಿ ಎನ್ನುವ ಭಯದಲ್ಲಿ ಆತಂಕದಲ್ಲಿದ್ದಾರೆ. ತೊಟ್ಟಿಗಳಲ್ಲಿ ತುಂಬಿಕೊಂಡಿರುವ ಗಲೀಜು ನೀರಿನಲ್ಲಿ ಸೊಳ್ಳೆ ಕುಳಿತು ಡೆಂಘೆ ಜ್ವರ ತರಿಸುವ ಭೀತಿಯೂ ಎದುರಾಗಿದೆ. ಕಲುಷಿತ ನೀರು ಕುಡಿದು ಜನರು ಮೃತಪಟ್ಟಿರುವ ಘಟನೆಗಳು ಜನರಲ್ಲಿ ಮತ್ತಷ್ಟು ಭಯ ಹುಟ್ಟುಹಾಕಿದೆ. ಜನರ ಜೀವಕ್ಕೆ ಕುತ್ತು ಬಂದರೆ ಅಧಿಕಾರಿಗಳು ಹೊಣೆಯಾಗಬೇಕಾಗುತ್ತದೆ. ಸದ್ಯಕ್ಕೆ ಜನರು ಆರೋಗ್ಯದ ದೃಷ್ಟಿಯಿಂದ ಕುಡಿಯುವುದಕ್ಕಾಗಿ ಶುದ್ಧ ಕುಡಿಯುವ ನೀರು ತಂದು ಕುಡಿಯುತ್ತಿದ್ದಾರೆ. ವಠಾರದ ಸಮೀಪದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಹಲವು ದಿನಗಳಿಂದ ಕೆಟ್ಟು ಹೋಗಿತ್ತು. ಇತ್ತೀಚೆಗೆ ರಿಪೇರಿಯಾಗಿದೆ. ಇನ್ನು ಮನೆ ಬಳಕೆಗಾಗಿ ಬೋರ್‌ವೆಲ್ ನೀರನ್ನು ಬಳಸಿಕೊಳ್ಳಲಾಗುತ್ತಿದೆ.
ಕೊಳಚೆ ನೀರಿನ ಸಾಕ್ಷ್ಯ ಬೇಕಾ..?
ಕೊಳಚೆ ನೀರು ಬರುತ್ತಿರುವುದಕ್ಕೆ ಬೇಸತ್ತಿರುವ ಜನರು ಅಧಿಕಾರಿಗಳಿಗೆ ತೋರಿಸಲು ಸಾಕ್ಷ್ಯ ಇಟ್ಟುಕೊಂಡಿದ್ದಾರೆ. ನಲ್ಲಿಯಲ್ಲಿ ಬಂದಿರುವ ಕೊಳಚೆ ನೀರನ್ನು ಬಾಟಲಿಯಲ್ಲಿ ತುಂಬಿ ಇಟ್ಟುಕೊಂಡಿದ್ದಾರೆ. ಮನೆ ತೊಟ್ಟಿಗಳಲ್ಲಿ ತುಂಬಿಕೊಂಡಿರುವ ಕೊಳಚೆ ನೀರನ್ನು ಹಾಗೆಯೇ ಬಿಟ್ಟು ಸ್ಥಳ ಪರಿಶೀಲನೆಗೆ ಬರುವವರಿಗೆ ತೋರಿಸುತ್ತಿದ್ದಾರೆ. ಹಲವು ದಿನಗಳಿಂದ ಸಮಸ್ಯೆ ಹೇಳಿಕೊಳ್ಳುತ್ತಿದ್ದರೂ ಶುದ್ಧ ಕುಡಿಯುವ ನೀರು ದೊರೆಯದೆ ಇರುವುದಕ್ಕೆ ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಶುದ್ಧ ನೀರು ಕೇಳುವುದು ಹಕ್ಕು:
ಶುದ್ಧ ಕುಡಿಯುವ ನೀರು ಪಡೆಯುವುದು ಮೂಲಭೂತ ಹಕ್ಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಅತ್ಯವಶ್ಯಕ ಮೂಲಸೌಕರ್ಯಗಳಲ್ಲಿ ಕುಡಿಯುವ ನೀರು ಪ್ರಧಾನವಾಗಿದೆ. ಚಾಮರಾಜನಗರ ನಗರಸಭೆ ತನ್ನ ವ್ಯಾಪ್ತಿಯಲ್ಲಿ ಸಕಾಲಕ್ಕೆ ನೀರು ಸರಬರಾಜು ಮಾಡದೆ ಜನರಿಗೆ ತುಂಬಾ ತೊಂದರೆ ನೀಡುತ್ತಿದೆ. ಹಣವುಳ್ಳವರು ಟ್ಯಾಂಕರ್‌ಗಳಲ್ಲಿ ನೀರು ತರಿಸಿಕೊಳ್ಳುತ್ತಿದ್ದಾರೆ. ಕುಡಿಯುವುದಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಕ್ಯಾನ್ ತೆಗೆದುಕೊಂಡು ಹೋಗುತ್ತಿದ್ದಾರೆ. ಆದರೆ ಬಡಜನರು ಬಡಾವಣೆಯ ಬೋರ್‌ವೆಲ್, ನಲ್ಲಿ ನೀರನ್ನೇ ಆಶ್ರಯಿಸಬೇಕಾಗಿದೆ.
ಗಲೀಜು ನೀರು, ಮಹಿಳೆಯರ ಆಕ್ರೋಶ
ನಲ್ಲಿಯಲ್ಲಿ ಬರುತ್ತಿರುವ ನೀರು ತುಂಬಾ ಕೆಂಪಾಗಿತ್ತು. ಸೂಕ್ಷ್ಮವಾಗಿ ಗಮನಿಸಿದಾಗ ನೀರಿನಲ್ಲಿ ರಕ್ತ ಇತ್ತು. ಮಾಂಸದಂಗಡಿಯಿಂದ ಚರಂಡಿಗೆ ಹರಿದ ನೀರು ನೇರವಾಗಿ ನಲ್ಲಿಯಲ್ಲಿ ಬಂದಿದೆ. ಇನ್ನು ನೋಡಿ ವಾಕರಿಗೆ ಬಂತು ಎಂದು ಬಡಾವಣೆಯ ನಿವಾಸಿ ನಾಗಮ್ಮ ತಿಳಿಸಿದ್ದಾರೆ. ಮತ್ತೋರ್ವ ನಿವಾಸಿ ಲಕ್ಷ್ಮಮ್ಮ ಮಾತನಾಡಿ, ಗಲೀಜು ನೀರು ಸರಬರಾಜು ಆಗುತ್ತಿದೆ. ನನಗೆ ಗೊತ್ತಿಲ್ಲದೆ ಮನೆ ಬಳಕೆಗೆ ಮುಂದಾಗಿದ್ದೆ. ಗಬ್ಬು ವಾಸನೆ ಬರುವುದನ್ನು ನೋಡಿ ಬಳಿಕ ಎಚ್ಚೆತ್ತುಕೊಂಡೆ ಎಂದು ಹೇಳಿದ್ದಾರೆ. ಶುದ್ಧ ನೀರು ಸರಬರಾಜು ಮಾಡದೆ ಇರುವುದಕ್ಕೆ ಇಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲವು ದಿನಗಳಿಂದ ನಲ್ಲಿಗಳಲ್ಲಿ ಕೊಳಚೆ ನೀರು ಬರುತ್ತಿದೆ. ಕಪ್ಪು ಬಣ್ಣ, ಗಬ್ಬು ವಾಸನೆಯಿಂದ ನೀರು ಕೂಡಿದೆ. ಈ ನೀರು ಕುಡಿದು ಕೆಲವರಿಗೆ ಆರೋಗ್ಯ ಹಾಳಾಗಿದೆ. ತಕ್ಷಣ ಕೊಳಚೆ ನೀರು ಕುಡಿಯುವ ನೀರಿನೊಂದಿಗೆ ಸೇರ್ಪಡೆಯಾಗುತ್ತಿರುವುದನ್ನು ತಡೆಯಬೇಕು.
ನಾಗಮ್ಮ, ಬಡಾವಣೆಯ ನಿವಾಸಿ
ಕೊಳಚೆ ನೀರು ಬರುತ್ತಿರುವ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ತಿಳಿಸಿದರೂ ಕ್ರಮ ವಹಿಸಿಲ್ಲ. ಸಮಸ್ಯೆ ಬಗ್ಗೆ ಗೊತ್ತಿದ್ದರೂ ಸರಿಪಡಿಸುತ್ತಿಲ್ಲ. ನಮ್ಮ ಮನೆಯಲ್ಲೇ ಹಲವರಿಗೆ ನೀರು ಕುಡಿದು ಆರೋಗ್ಯ ಹದಗೆಟ್ಟಿತ್ತು. ಕೊಳಚೆ ನೀರು ಕುಡಿದು ಜನರ ಜೀವ ಹಾನಿಯಾದರೆ ನಗರಸಭೆಯೇ ನೇರ ಹೊಣೆಯಾಗಬೇಕಾಗುತ್ತದೆ.
ವಸಂತ್‌ಕುಮಾರ್, ಬಡಾವಣೆಯ ನಿವಾಸಿ
ಕುಡಿಯುವ ನೀರಿನ ನಲ್ಲಿಗಳಲ್ಲಿ ಕೊಳಚೆ ನೀರು ಬರುವುದನ್ನು ತಡೆಯಲು ಬೇರೆ ಪೈಪ್‌ಲೈನ್ ಮಾಡಲು ಈಗಾಗಲೇ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಯುಜಿಡಿ ಪಕ್ಕದಲ್ಲಿ ಪೈಪ್ ಹೊಡೆದು ಹೋಗಿತ್ತು ಎಂದು ಸಿಬ್ಬಂದಿ ತಿಳಿಸಿದ್ದಾರೆ. ಅದನ್ನು ರಿಪೇರಿ ಮಾಡಿಸಲಾಗಿದ್ದು, ನೀರು ಹರಿಸಿ ಕೊಳಚೆ ನೀರು ಬರುವುದು ನಿಂತಿದೆಯೇ ಎಂದು ಪರಿಶೀಲನೆ ಮಾಡಲಾಗುವುದು.
ಪ್ರಕಾಶ್, ಎಇಇ, ನಗರಸಭೆ