ಚಾಮರಾಜನಗರದ ತಾಲೂಕು ಕಚೇರಿ ಮುಂಭಾಗ ರಾಜ್ಯ ರೈತ ಸಂಘದ ಮುಖಂಡರು ಗುರುವಾರ ಪ್ರತಿಭಟನೆ ನಡೆಸಿದರು. ಸಿದ್ದರಾಜು, ಯಶವಂತ್,ಮಲ್ಲಪ್ಪ, ಮೂಡ್ಕಾಕೂಡು ಮಹೇಶ್, ಕೆರೆಹಳ್ಳಿ ಮಹೇಶ್, ನಾಗಶೆಟ್ಟಿ, ಬಾಬು ಇತರರು ಪಾಲ್ಗೊಂಡಿದ್ದರು.  
ಚಾಮರಾಜನಗರ

ರೈತರು ಕೊಡುವ ಅರ್ಜಿಗಳು ಮಾಯ..!

ಪ್ರಮುಖ ಮುಖ್ಯಾಂಶಗಳು

  • ತಾಲೂಕು ಕಚೇರಿ ಅಧಿಕಾರಿಗಳ ಕಾರ್ಯವೈಖರಿಗೆ ರೈತರ ಆಕ್ರೋಶ
  • ವಿದ್ಯುತ್ ಖಾಸಗೀಕರಣ ವಿರೋದಿ ಪ್ರತಿಭಟನೆಯಲ್ಲಿ ಅನ್ನದಾತರ ಸಿಟ್ಟು
ಚಾಮರಾಜನಗರ:ವಿದ್ಯುತ್ ಖಾಸಗೀಕರಣ ವಿರೋಧಿಸಿ ರಾಜ್ಯ ರೈತ ಸಂಘದ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಚಾಮರಾಜನಗರ ತಾಲೂಕು ಕಚೇರಿಗೆ ರೈತರು ಸಲ್ಲಿಸುವ ಅರ್ಜಿಗಳು ನಾಪತ್ತೆಯಾಗುವುದು ಮತ್ತು ವಿಲೇವಾರಿಯಾಗುತ್ತಿವಲ್ಲವೆಂದು ತೀವ್ರ ಆಕ್ರೋಶ ವ್ಯಕ್ತವಾಯಿತು.
ನಗರದ ತಾಲೂಕು ಕಚೇರಿ ಮುಂದೆ ಗುರುವಾರ ಜಮಾಯಿಸಿದ ಪ್ರತಿಭಟನಾಕಾರರು, ವಿದ್ಯುತ್ ಖಾಸಗೀಕರಣ ಮಾಡಬಾರದೆಂದು ಆಗ್ರಹಿಸಿದರು. ರೈತರು ಸಲ್ಲಿಸುತ್ತಿರುವ ಅರ್ಜಿಯನ್ನು ಆಕ್ಷೇಪಣೆ ಎಂದೇ ಭಾವಿಸಬೇಕೆಂದು ಒತ್ತಾಯಿಸಿದರು. ಮನವಿ ಪತ್ರ ಸ್ವೀಕಾರ ಮಾಡಲು ಬಂದಿದ್ದ ತಹಸೀಲ್ದಾರ್ ಗಿರಿಜಾ ಮತ್ತು ಉಪ ತಹಸೀಲ್ದಾರ್ ಜಬೀನಾ ಬಾನು ಅವರನ್ನು ರೈತರು ಪ್ರಶ್ನೆ ಮಾಡಿದರು. ನಾವು ಕೊಡುತ್ತಿರುವ ಅರ್ಜಿಗಳು ಮಾಯವಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಸಂಘದ ರಾಜ್ಯ ವಿಭಾಗೀಯ ಕಾರ್ಯದರ್ಶಿ ಸಿದ್ದರಾಜು ಜ್ಯೋತಿಗೌಡನಪುರ ಮಾತನಾಡಿ, ತೇಗ, ಶ್ರೀಗಂಧದ ಮರಗಳನ್ನು ಕತ್ತರಿಸಲು ಅನುಮತಿ ಕೋರಿ ರೈತರು ಸಲ್ಲಿಸುತ್ತಿರುವ ಅರ್ಜಿಗಳು ಎರಡು ವರ್ಷಗಳಾದರೂ ವಿಲೇವಾರಿಯಾಗುತ್ತಿಲ್ಲ. ಇತ್ತ ರೈತರು ಅನುಮತಿಗಾಗಿ ಸರ್ಕಾರ ಕಚೇರಿಗೆ ಅಲೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಯುವ ಘಟಕದ ಸಂಚಾಲಕ ಯಶವಂತ್ ಮಾತನಾಡಿ, ರೈತರು ಸಲ್ಲಿಸಿರುವ ಅರ್ಜಿಗಳಿಗೆ ಸ್ವೀಕೃತ ಪತ್ರವಿದೆ. ಆದರೆ ಅಧಿಕಾರಿಗಳ ಬಳಿ ಹೋಗಿ ಕೇಳಿದರೆ ಅರ್ಜಿ ಇಲ್ಲವೆಂದು ಹೇಳುತ್ತಾರೆ. ರೈತರು ಅರ್ಜಿ ಸಲ್ಲಿಸಿರುವ ಮಾಹಿತಿಯನ್ನು ಪಡೆದು ನೀವೇ ಕಚೇರಿಯಲ್ಲಿ ಹುಡುಕಿ ಅರ್ಜಿಗಳನ್ನು ತನ್ನಿ ಎಂದು ಆಗ್ರಹಿಸಿದರು.
ಜ್ಯೋತಿಗೌಡನಪುರದ ಲಕ್ಷ್ಮಿಕಾಂತ್ ಪಾಪಣ್ಣ ಮಾತನಾಡಿ, ನಮ್ಮ ತಾತ 1962ರಲ್ಲಿ ನಿಧನರಾದರು. ಇವರ ಮರಣ ಪ್ರಮಾಣ ಪತ್ರ ಕೋರಿ ಅರ್ಜಿ ಸಲ್ಲಿಸಿ ವರ್ಷವೇ ಆಗಿದೆ. ಕೇಳಿದರೆ ಅರ್ಜಿಯನ್ನೇ ಸಲ್ಲಿಸಿಲ್ಲವೆಂದು ಹೇಳಿದರು. ಮತ್ತೊಮ್ಮೆ ಅರ್ಜಿ ಪಡೆದುಕೊಂಡರು. ಮತ್ತೆ ಅರ್ಜಿ ಕೊಟ್ಟಿಲ್ಲವೆಂದು ಹೇಳಿದಾಗ ಸ್ವೀಕೃತಿ ಪತ್ರ ತೋರಿಸಿದೆ. ಆದರೂ ಇನ್ನೂ ಮರಣ ಪ್ರಮಾಣ ಪತ್ರ ಕೊಟ್ಟಿಲ್ಲವೆಂದು ಹೇಳಿದರು. ಇದಕ್ಕೆ ಉಪ ತಹಸೀಲ್ದಾರ್ ಜಬಿನಾ ಬಾನು ಪ್ರತಿಕ್ರಿಯಿಸಿ, ನಾಳೆಯೇ ಮರಣ ಪ್ರಮಾ ಪತ್ರ ನೀಡುತ್ತೇನೆ ಎಂದು ಭರವಸೆ ನೀಡಿದರು.
ರೈತ ಮುಖಂಡ ಆಲೂರು ಜಯಣ್ಣ ಮಾತನಾಡಿ, ನಮ್ಮ ಜಮೀನಿನಲ್ಲಿದ್ದ 1 ತೇಗದ ಮರವನ್ನು ಆರ್‌ಟಿಸಿಗೆ ಸೇರಿಸಲು ಅರ್ಜಿ ಸಲ್ಲಿಸಿದ್ದೆವು. ಇದನ್ನು ಆರ್‌ಟಿಸಿಗೆ ಸೇರಿಸಲು 2 ವರ್ಷಗಳಾಯಿತು. ಈ ಅವಧಿಯಲ್ಲಿ ಸರ್ಕಾರಿ ಕಚೇರಿಗಳಗೆ ಅಲೆಯಬೇಕಾಯಿತು. ನಮ್ಮಂತೆ ಹಲವು ರೈತರು ಅರ್ಜಿ ಸಲ್ಲಿಸಿ ಕಾಯಬೇಕಾದ ಪರಿಸ್ಥಿತಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ವೀರನಪುರ ಸುಬ್ರಹ್ಮಣ್ಯ ಮಾತನಾಡಿ, ನಮ್ಮ ಜಮೀನಿನ ಆರ್‌ಟಿಸಿಯಲ್ಲಿ ತಂದೆ ಮಲ್ಲಪ್ಪ ಬದಲು ತಾಯಿ ಯಲ್ಲಪ್ಪ ಎಂದು ಆಗಿದೆ. ಇದನ್ನು ಸರಿಪಡಿಸಿಕೊಳ್ಳಲು ಕೊಳ್ಳೇಗಾಲದ ಉಪ ವಿಭಾಗಾಧಿಕಾರಿ ಕಚೇರಿಗೆ ಅಲೆದೆ. ಅಲ್ಲಿ ಚಾಮರಾನಗರ ತಾಲೂಕು ಕಚೇರಿಗೆ ಹೋಗಲು ತಿಳಿಸಿದರು. ಇಲ್ಲಿಗೆ ಬಂದು ಕಾಯುತ್ತಿದ್ದೇನೆ. ಸುಮಾರು 2 ವರ್ಷದಿಂದ ಆರ್‌ಟಿಸಿಯಲ್ಲಿ ಮಲ್ಲಪ್ಪ ಬದಲು ಯಲ್ಲಪ್ಪ ಆಗಿರುವುದನ್ನು ಸರಿಪಡಿಸಿಕೊಳ್ಳಲು ಹೆಣಗಾಡುತ್ತಿದ್ದೇನೆ ಎಂದು ಹೇಳಿದರು.
ರೈತರ ಆಕ್ರೋಶದ ನುಡಿಗಳ ನಡುವೆ ತಹಸೀಲ್ದಾರ್ ಗಿರಿಜಾ ಮಾತನಾಡಿ, ರೈತರು ಯಾವ ವಿಚಾರಗಳಿಗಾಗಿ ಅರ್ಜಿ ಸಲ್ಲಿಸಿದ್ದೀರಾ ಎಂದು ಬರೆದು ಕೊಡಿ. ಈ ಕುರಿತು ಪರಿಶೀಲನೆ ನಡೆಸಿ ಕ್ರಮವಹಿಸುತ್ತೇನೆ ಎಂದರು. ಪದೇ ಪದೇ ಅರ್ಜಿಗಳನ್ನು ಸಲ್ಲಿಸಲು ಆಗಲ್ಲ ಹುಡುಕಿ ವಿಲೇವಾರಿ ಮಾಡಿ ಎಂದು ರೈತರು ಹೇಳಿದರು. ಬಳಿಕ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಯಿತು.
ತಾಲೂಕು ಕಾರ್ಯಾಧ್ಯಕ್ಷ ಮಲ್ಲಪ್ಪ, ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಮಹೇಶ್, ಹೋಬಳಿ ಉಪಾಧ್ಯಕ್ಷ ಕೆರೆಹಳ್ಳಿ ಮಹೇಶ್, ಮುಖಂಡರಾದ ನಾಗಶೆಟ್ಟಿ, ಬಾಬು, ಜಯಣ್ಣ, ಆಲೂರು ನಿರಂಜನ್, ನಾಗಮಲ್ಲು, ಪುಟ್ಟರಾಜು, ಸಿದ್ದಪ್ಪ, ಪಾಪಣ್ಣ, ಕಿರಣ್, ಎಚ್.ಸಿ.ಮಣಿ ಮತ್ತು ಇತರರು ಭಾಗವಹಿಸಿದ್ದರು.