ಹನೂರು ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ತೆರೆದ ಮನೆ ಕಾರ್ಯಕ್ರಮದಲ್ಲಿ ಇನ್‌ಸ್ಪೆಕ್ಟರ್ ಆನಂದಮೂರ್ತಿ ಮಾತನಾಡಿದರು. ಸಾಹೇಬಗೌಡ, ಶಿವಕುಮಾರ್, ಚೈತ್ರಾ, ಶ್ರೀನಿವಾಸನಾಯ್ಡು, ಲೋಕೇಶ್ ಇದ್ದರು.
ಹನೂರು : ಉತ್ತಮ ಸಮಾಜಕ್ಕೆ ಬಾಲ್ಯ ವಿವಾಹ ಮಾರಕವಾಗಿದ್ದು, ಈ ಪಿಡುಗಿನ ಬಗ್ಗೆ ಎಚ್ಚರ ವಹಿಸುವ ಜತೆಗೆ ಪ್ರತಿಯೊಬ್ಬರೂ ಓದಿನತ್ತ ಗಮನ ಹರಿಸಬೇಕು ಎಂದು ಇನ್‌ಸ್ಪೆಕ್ಟರ್ ಆನಂದಮೂರ್ತಿ ಕಿವಿಮಾತು ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಜಿ.ವಿ.ಗೌಡ ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ಗುರುವಾರ ಆಯೋಜಿಸಿದ್ದ ತೆರೆದ ಮನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾಲ್ಯ ವಿವಾಹ ಅಪರಾಧವಾಗಿದ್ದು, ಶಿಕ್ಷೆ ವಿಧಿಸಲಾಗುತ್ತದೆ. ಆದರೆ, ಈ ಬಗ್ಗೆ ತಿಳಿದಿದ್ದರೂ ಕೆಲ ಪಾಲಕರು ಮಕ್ಕಳನ್ನು ಬಾಲ್ಯ ವಿವಾಹಕ್ಕೆ ದೂಡುತ್ತಿದ್ದಾರೆ. ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರಲಿದ್ದು, ಉತ್ತಮ ಜೀವನ ರೂಪಿಸಿಕೊಳ್ಳಲು ಕಷ್ಟವಾಗುತ್ತದೆ. ಆದ್ದರಿಂದ ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಂಡು ಪಾಲಕರಿಗೆ ತಿಳಿ ಹೇಳುವ ಮೂಲಕ ಬಾಲ್ಯ ವಿವಾಹದಿಂದ ದೂರವಿರಬೇಕು. ಶೈಕ್ಷಣಿಕ ಸಾಧನೆಯತ್ತ ಗಮನಹರಿಸಬೇಕು. ಇದರಿಂದ ಭವಿಷ್ಯದಲ್ಲಿ ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು, ಜನರನ್ನು ವಂಚಿಸಲಾಗುತ್ತಿದೆ. ಈ ಬಗ್ಗೆ ಜಾಗ್ರತೆ ವಹಿಸಬೇಕು. ಅಪ್ರಾಪ್ತರು ವಾಹನ ಚಾಲನೆಯಿಂದ ದೂರವಿರಬೇಕು. ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಟರಿಣಾಮ ಬಗ್ಗೆ ಅರಿವು ಮೂಡಿಸಬೇಕು. ಶಾಲೆ, ಮನೆ ಹಾಗೂ ಇನ್ನಿತರ ಕಡೆಗಳಲ್ಲಿ ದೌರ್ಜನ್ಯ ಕಂಡು ಬಂದರೆ ಸಹಾಯವಾಣಿಗೆ ಮಾಹಿತಿ ತಿಳಿಸಬೇಕು. ಹೆಸರನ್ನು ಗೌಪ್ಯವಾಗಿಟ್ಟು ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬಳಿಕ ಶಾಲೆಯಿಂದ ಆಗಮಿಸಿದ್ದ 43 ವಿದ್ಯಾರ್ಥಿಗಳನ್ನು ಠಾಣೆಯೊಳಗೆ ಕರೆದೊಯ್ದು ದೈನಂದಿನ ಕಾರ್ಯ ಚಟುವಟಿಕೆ, ಅಧಿಕಾರಿಗಳು ಕೈಗೊಳ್ಳುವ ಕಾರ್ಯ, ಬಂದೀಖಾನೆ, ಶಸ್ತಾಸ್ತ್ರಗಳ ಬಗ್ಗೆ ಮಾಹಿತಿ ತಿಳಿಸಲಾಯಿತು.
ಸಬ್‌ಇನ್‌ಸ್ಪೆಕ್ಟರ್ ಸಾಹೇಬಗೌಡ, ಎಎಸ್‌ಐ ಶಿವಕುಮಾರ್, ಪೇದೆ ಚೈತ್ರಾ, ಶಿಕ್ಷಕರಾದ ಶ್ರೀನಿವಾಸನಾಯ್ಡು, ಜಿ.ಲೋಕೇಶ್ ಇತರರಿದ್ದರು.