ಅಸ್ತೂರು ಗ್ರಾಮದಲ್ಲಿ ನಿರ್ಮಿಸಿರುವ ಶ್ರೀ ಶನೈಶ್ಚರ, ಶ್ರೀಪಡಗಲ್ಲು ಮಹದೇಶ್ವರ ಹಾಗೂ ಶ್ರೀಜಡೇಸ್ವಾಮಿ ಮೂರ್ತಿ ಪ್ರತಿಷ್ಟಾಪನೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಆರ್.ನರೇಂದ್ರ ಭಾಗಿಯಾಗಿದ್ದರು. ಪೊನ್ನಾಚಿ ಮಹದೇವಸ್ವಾಮಿ, ರವಿಕುಮಾರ್, ರಂಗಸ್ವಾಮಿ ಮತ್ತಿತರರಿದ್ದರು. 
ಚಾಮರಾಜನಗರ

ಸಹಬಾಳ್ವೆಗೆ ದೇವಸ್ಥಾನಗಳು ಸಹಕಾರಿ

ಕಿರಣ್ ಮಾದರಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ಆರ್.ನರೇಂದ್ರ ಅಭಿಮತ
  • ಶ್ರೀಜಡೇಸ್ವಾಮಿ ಮೂರ್ತಿ ಪ್ರತಿಷ್ಟಾಪನೆ ಕಾರ್ಯಕ್ರಮದಲ್ಲಿ ಭಾಗಿ
ಹನೂರು: ದೇಗುಲಗಳು ಮನಸ್ಸಿಗೆ ಶಾಂತಿ ಹಾಗೂ ನೆಮ್ಮದಿಯನ್ನು ನೀಡುವುದರ ಜತೆಗೆ ಗ್ರಾಮದ ಜನರು ಪರಸ್ಪರ ಸಹಬಾಳ್ವೆಯಿಂದ ಜೀವನ ನಡೆಸಲು ಸಹಕಾರಿಯಾಗಿವೆ ಎಂದು ಮಾಜಿ ಶಾಸಕ ಆರ್.ನರೇಂದ್ರ ತಿಳಿಸಿದರು.
ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಸ್ತೂರು ಗ್ರಾಮದಲ್ಲಿ ನಿರ್ಮಿಸಿರುವ ಶ್ರೀ ಶನೈಶ್ಚರ, ಶ್ರೀಪಡಗಲ್ಲು ಮಹದೇಶ್ವರ ಹಾಗೂ ಶ್ರೀಜಡೇಸ್ವಾಮಿ ಮೂರ್ತಿ ಪ್ರತಿಷ್ಟಾಪನೆ ಕಾರ್ಯಕ್ರಮದಲ್ಲಿ ಶುಕ್ರವಾರ ಭಾಗಿಯಾಗಿ ಮಾತನಾಡಿದರು. ಹನೂರು ಕ್ಷೇತ್ರವು ಶ್ರೀಮಲೆಮಹದೇಶ್ವರರು, ಸಿದ್ದಪ್ಪಾಜಿ, ಮಂಟೇಸ್ವಾಮಿ ಹಾಗೂ ಇನ್ನಿತರೆ ಪವಾಡ ಪುರುಷರು ನೆಲೆಸಿರುವ ಧಾರ್ಮಿಕ ಸ್ಥಳ. ಹಾಗಾಗಿ ಇಲ್ಲಿಗೆ ರಾಜ್ಯದ ವಿವಿಧೆಡೆಯಿಂದ ಹೆಚ್ಚಿನ ಭಕ್ತರು ಆಗಮಿಸುತ್ತಾರೆ. ಹಾಗಾಗಿ ಕ್ಷೇತ್ರವು ತನ್ನದೆ ಆದ ಆಧ್ಯಾತ್ಮಿಕ ನೆಲೆಯನ್ನು ಒಳಗೊಂಡಿದೆ. ಗ್ರಾಮವು ಸಮೃದ್ಧಿಯಿಂದ ಕೂಡಿರಲಿ, ಉತ್ತಮ ಮಳೆ, ಬೆಳೆಯಾಗಲಿ, ಜನರ ನಡುವೆ ಉತ್ತಮ ಬಾಂಧವ್ಯ ವೃದ್ಧಿಸಲಿ ಎನ್ನುವ ಉದ್ದೇಶದಿಂದ ಪ್ರತಿ ಗ್ರಾಮಗಳು ದೇಗುಲಗಳನ್ನು ಹೊಂದಿವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಪೊನ್ನಾಚಿ ಮಹದೇವಸ್ವಾಮಿ, ರಂಗಸ್ವಾಮಿ, ರವಿಕುಮಾರ್ ಹಾಗೂ ಇನ್ನಿತರರು ಇದ್ದರು.