ಹನೂರು ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಹಸೀಲ್ದಾರ್ ಕೆ.ಎನ್.ಚೈತ್ರಾ ಮಕ್ಕಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಿಸಿದರು. ಶಿವಮಲ್ಲು, ರೇಖಾ ಇತರರಿದ್ದರು.  
ಚಾಮರಾಜನಗರ

ಮಕ್ಕಳಿಗೆ ಗುಲಾಬಿ ನೀಡಿ ಆತ್ಮೀಯವಾಗಿ ಬರಮಾಡಿಕೊಂಡ ಶಿಕ್ಷಕರು

ಹನೂರು: ಶಾಲಾ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಸೋಮವಾರ ಶೈಕ್ಷಣಿಕ ವಲಯದ ಶಾಲೆಗಳಿಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಅಧಿಕಾರಿಗಳು ಹಾಗೂ ಶಿಕ್ಷಕರು ಗುಲಾಬಿ ಹಾಗೂ ಸಿಹಿ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.
ಶೈಕ್ಷಣಿಕ ವಲಯದಲ್ಲಿ ಅನುದಾನಿತ, ಅನುದಾನ ರಹಿತ, ಸರ್ಕಾರಿ ಶಾಲೆಗಳು ಸೇರಿದಂತೆ 96 ಕಿರಿಯ ಪ್ರಾಥಮಿಕ, 105 ಹಿರಿಯ ಪ್ರಾಥಮಿಕ ಹಾಗೂ 44 ಪ್ರೌಢಶಾಲೆಗಳಿದ್ದು, 2026-27ನೇ ಸಾಲಿನ ಶಾಲಾ ಆರಂಭೋತ್ಸವದ ಅಂಗವಾಗಿ ಶಾಲೆಯನ್ನು ತಳಿರು ತೋರಣದಿಂದ ಸಿಂಗರಿಸಲಾಗಿತ್ತು.
ಬೇಸಿಗೆ ರಜೆಯನ್ನು ಅನುಭವಿಸಿ ಉತ್ಸಾಹ ಹಾಗೂ ಲವಲವಿಕೆಯಿಂದ ಆಗಮಿಸಿದ ಮಕ್ಕಳಿಗೆ ಗುಲಾಬಿ ಹಾಗೂ ಸಿಹಿ ನೀಡಿ ಸ್ವಾಗತಿಸಲಾಯಿತು. ಸಹಪಾಠಿಗಳೊಂದಿಗೆ ಬೆರೆತ ಮಕ್ಕಳು ಕಲಿಕೆ ಹಾಗೂ ಆಟೋಟಗಳಲ್ಲಿ ಭಾಗಿಯಾಗಿದ್ದರು. ಪಂಚಾಯಿತಿವಾರು ನೋಡಲ್ ಅಧಿಕಾರಿಗಳು ಹಾಗೂ ಪ್ರತಿ ಶಾಲೆಗೂ ಸಿಆರ್‌ಪಿಯನ್ನು ನಿಯೋಜಿಸಲಾಗಿತ್ತು. ಶಾಲೆಗಳಿಗೆ ತೆರಳಿದ ಅಧಿಕಾರಿಗಳು ಅಗತ್ಯ ಮಾಹಿತಿ ಪಡೆದರು. ಕಾರ್ಯಕ್ರಮವನ್ನು ಆಯೋಜಿಸಿ ಮಕ್ಕಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕವನ್ನು ವಿತರಿಸಲಾಯಿತು. ಶಾಲಾ ಆರಂಭದ ಮೊದಲನೇ ದಿನ ಶೇ.60ರಷ್ಟು ಮಕ್ಕಳು ಶಾಲೆಗೆ ಹಾಜರಾಗಿದ್ದಾರೆ ಎಂದು ಬಿಆರ್‌ಸಿ ವೆಂಕಟೇಶ್ ವಿಜಯವಾಣಿಗೆ ತಿಳಿಸಿದರು.
ಮುಖ್ಯಶಿಕ್ಷಕ ಶಿವಮಲ್ಲು, ಎಸ್‌ಡಿಎಂಸಿ ಅಧ್ಯಕ್ಷ ರೇಖಾ, ಶಿಕ್ಷಕರು ಹಾಗೂ ಪಾಲಕರು ಇದ್ದರು.
ಅಕ್ಷರಾಭ್ಯಾಸದ ಮೂಲಕ ಆರಂಭ: ತಾಲೂಕಿನ ಕೆಂಪಯ್ಯನಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಇಒ ಪ್ರತಿಭಾ ಅವರು ಅಧಿಕಾರಿಗಳು, ಶಿಕ್ಷಕರು ಹಾಗೂ ಪಾಲಕರ ಸಮ್ಮುಖದಲ್ಲಿ ದಾಖಲಾದ ಮಕ್ಕಳಿಗೆ ಅಕ್ಷರಾಭ್ಯಾಸ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು. ಪಟ್ಟಣದ ಆರ್.ಎಸ್.ದೊಡ್ಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಪಂ ಇಒ ಉಮೇಶ್ ಸಮವಸ್ತ್ರ ಹಾಗೂ ಪಠ್ಯಪುಸ್ತಕವನ್ನು ವಿತರಿಸಿ ಮಕ್ಕಳಿಗೆ ಶುಭ ಕೋರಿದರು.