ಚಾಮರಾಜನಗರದ ಜಿಲ್ಲಾಡಳಿತ ಭವನ ಮುಂಭಾಗ ಜಿಪಂ ಸಿಇಒ ಮೋನಾರೋತ್ ಅವರಿಗೆ ಪ್ರಾಥಮಿಕ ಶಾಲೆಯ ಶಿಕ್ಷಕರ ಸಂಘದಿಂದ ಮನವಿ ಸಲ್ಲಿಸಲಾಯಿತು. ಮಹದೇವಸ್ವಾಮಿ, ಕೆ.ಎಸ್.ಮಾದಪ್ಪ, ಕೆ.ಬಿ.ಮಹದೇವಮೂರ್ತಿ,ಎಂ.ಡಿ. ಮಹದೇವಯ್ಯ, ಕುಮಾರ್, ದಾಕ್ಷಾಯಿಣಿ ಇತರರು ಹಾಜರಿದ್ದರು. 
ಚಾಮರಾಜನಗರ

ಮೊಟ್ಟೆ ಖರೀದಿ ಹೊರೆ ತಪ್ಪಿಸಲು ಶಿಕ್ಷಕರ ಮನವಿ

ಕಿರಣ್ ಮಾದರಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ಪ್ರಾಥಮಿಕ ಶಾಲೆಯ ಶಿಕ್ಷಕರ ಸಂಘದಿಂದ ಜಿಪಂ ಸಿಇಓಗೆ ಮನವಿ
  • ಏಜೆನ್ಸಿ ಅಥವಾ ಇಲಾಖೆಗೆ ವಹಿಸಲು ಕೋರಿಕೆ
ಚಾಮರಾಜನಗರ: ಅಕ್ಷರ ದಾಸೋಹ ಯೋಜನೆಯ ಮಧ್ಯಾಹ್ನದ ಬಿಸಿಯೂಟಕ್ಕೆ ಇಲಾಖೆಯಿಂದ ಆಹಾರ ಸಾಮಗ್ರಿಗಳು ಸರಬರಾಜು ಆಗುವ ರೀತಿ, ಮೊಟ್ಟೆ ವಿತರಣೆಯನ್ನೂ ಇಲಾಖೆಯಿಂದ ಅಥವಾ ಯಾವುದಾರು ಏಜೆನ್ಸಿಯಿಂದ ವಿತರಿಸಿ, ಮುಖ್ಯ ಶಿಕ್ಷಕರ ಒತ್ತಡ ಕಡಿಮೆಗೊಳಿಸುವಂತೆ ಆಗ್ರಹಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಮನವಿ ಸಲ್ಲಿಸಲಾಯಿತು.
ನಗರದ ಜಿಲ್ಲಾಡಳಿತ ಭವನ ಮುಂಭಾಗ ಜಿಲ್ಲಾ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಮಾದಪ್ಪ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಮೌನ ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳು ಹಾಗು ಮುಖ್ಯ ಶಿಕ್ಷಕರು, ಪ್ರಭಾರ ಮುಖ್ಯ ಶಿಕ್ಷಕರು ಜಿ.ಪಂ. ಸಿಇಒ ಮೋನಾರೋತ್ ಅವರು ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಮಹದೇವಸ್ವಾಮಿ ಮಾತನಾಡಿ, ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ, ಮಧ್ಯಾಹ್ನ ಬಿಸಿಯೂಟ ಯೋಜನೆಯಡಿ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಿಸಲಾಗುತ್ತಿದೆ. ಪ್ರಸ್ತುತ ದೈನಂದಿನ ಮಾರುಕಟ್ಟೆಯಲ್ಲಿ 1 ಮೊಟ್ಟೆಯ ಬೆಲೆ ಸುಮಾರು 8 ರೂ. ಇದ್ದು, ಸರ್ಕಾರ ಪ್ರತಿ ಮೊಟ್ಟೆಗೆ 5.20 ರೂ. ಮಾತ್ರ ಅನುದಾನ ನೀಡುತ್ತಿದೆ. ಇದರಿಂದ ಪ್ರತಿ ಮೊಟ್ಟೆಗೆ ಸುಮಾರು 2.80 ರೂ. ಹೆಚ್ಚುವರಿ ವೆಚ್ಚವಾಗುತ್ತಿದ್ದು, ಈ ಹೆಚ್ಚುವರಿ ಮೊತ್ತವನ್ನು ಶಾಲಾ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಭರಿಸಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.
ಇಂತಹ ಪರಿಸ್ಥಿತಿಯಿಂದ ಮಧ್ಯಾಹ್ನ, ಬಿಸಿಯೂಟ ಯೋಜನೆಯ ಸಮರ್ಪಕ ನಿರ್ವಹಣೆ ಕಷ್ಟ ಸಾಧ್ಯವಾಗುತ್ತಿದೆ. ಅಲ್ಲದೆ ಶಿಕ್ಷಕರಲ್ಲಿ ಆತಂಕ ಮತ್ತು ಅಸಮಾಧಾನಕ್ಕೆ ಕಾರಣವಾಗುತ್ತಿದೆ. ಶಾಲಾ ಶಿಕ್ಷಣದ ಜತೆಗೆ ಯೋಜನೆಯ ನಿರ್ವಹಣೆಯಲ್ಲಿಯೂ ಹೆಚ್ಚುವರಿ ಭಾರವನ್ನು ಹೊರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಶಾಲಾ ಶೈಕ್ಷಣಿಕ ಪರಿಸ್ಥಿತಿಯ ಮೇಲೂ ಪರಿಣಾಮ ಬೀರುತ್ತಿದೆ. ಆದ್ದರಿಂದ ಬಿಸಿಯೂಟ ಯೋಜನೆಗೆ ಈಗಾಗಲೇ ಆಹಾರ ಸಾಮಗ್ರಿಗಳನ್ನು ಶಾಲೆಗೆ ಸರಬರಾಜು ಮಾಡುತ್ತಿರುವ ಹಾಗೆ, ಮೊಟ್ಟೆಯನ್ನು ಶಾಲೆಗಳಿಗೆ ಸರಬರಾಜು ಮಾಡಿಕೊಡಬೇಕಾಗಿ ಅಥವಾ ಯಾವುದಾರೂ ಏಜೆನ್ಸಿಗೆ ವಹಿಸಿ, ಮುಖ್ಯ ಶಿಕ್ಷಕರ ಒತ್ತಡ ಕಡಿಮೆಗೊಳಿಸಿ, ಬೋಧಕೇತರ ಚಟುವಟಿಕೆಗಳಿಂದ ಶಿಕ್ಷಕರನ್ನು ಮುಕ್ತಗೊಳಿಸಿ, ಉತ್ತಮ ಶೈಕ್ಷಣಿಕ ಅವಕಾಶ ಕಲ್ಪಿಸಿ ಕೊಡಬೇಕು. ಅಲ್ಲಿಯವರೆಗೆ ಮೊಟ್ಟೆಯ ಮಾರುಕಟ್ಟೆ ದರದಂತೆ ಅನುದಾನ ಒದಗಿಸಿಕೊಡಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಸಿಇಓ ಮೋನಾರೋತ್ ಮಾತನಾಡಿ ಜಿಲ್ಲಾಮಟ್ಟದ ಸಮಸ್ಯೆಯನ್ನು ಇಲ್ಲಿಯೇ ಬಗೆಹರಿಸಿಕೊಳ್ಳೋಣ. ರಾಜ್ಯಮಟ್ಟದ ಸಮಸ್ಯೆಗಳ ಮೇಲಾಧಿಕಾರಿಗಳಿಗೆ ತಿಳಿಸಿ, ಕ್ರಮವಹಿಸಲಾಗುವುದು ಎಂದರು.
ಬಿಸಿಯೂಟದ ಜಿಲ್ಲಾ ಅಧಿಕಾರಿ ರೇವಣ್ಣ, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧಾ, ತಾಲೂಕು ಅಧ್ಯಕ್ಷರಾದ ಚಾ.ನಗರದ ಸಿ.ಕೆ. ರಾಮಸ್ವಾಮಿ, ಯಳಂದೂರು ಸೋಮಣ್ಣ, ಕಾರ್ಯದರ್ಶಿ ಮಲ್ಲಿಕಾರ್ಜುನ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಬಿ.ಮಹದೇವಮೂರ್ತಿ, ಹಿರಿಯ ಉಪಾಧ್ಯಕ್ಷ ಎಂ.ಡಿ. ಮಹದೇವಯ್ಯ, ಕುಮಾರ್, ದಾಕ್ಷಾಯಿಣಿ, ಪದಾಧಿಕಾರಿಗಳಾದ ಸುಶೀಲಾ, ಶ್ವೇತಾ, ಕೃಷ್ಣಮೂರ್ತಿ, ನಟರಾಜು, ಧನಂಜಯ, ಪುಟ್ಟಸ್ವಾಮಿ ಇದ್ದರು.