ಶಿವಮೂರ್ತಿ 
ಚಾಮರಾಜನಗರ

ಕಾಡಾನೆ ದಾಳಿಗೆ ತಮಿಳುನಾಡು ಕೂಲಿ ಕಾರ್ಮಿಕ ಸಾವು

ಹನೂರು: ತಾಲೂಕಿನ ಮಲೆಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ಜಲ್ಲಿಪಾಳ್ಯ ಮಾಕನಪಾಳ್ಯ ಮಾರ್ಗದಲ್ಲಿ ಬುಧವಾರ ರಾತ್ರಿ ಕಾಡಾನೆ ದಾಳಿಗೆ ತಮಿಳುನಾಡಿನ ಕೂಲಿ ಕಾರ್ಮಿಕರೊಬ್ಬ ಬಲಿಯಾಗಿದ್ದಾರೆ.
ತಮಿಳುನಾಡಿನ ಈರೋಡ್ ಜಿಲ್ಲೆಯ ಸತ್ತಿ ತಾಲೂಕಿನ ಮಾಕನಪಾಳ್ಯ ಗ್ರಾಮದ ಶಿವಮೂರ್ತಿ (35) ಮೃತಪಟ್ಟವರು. ಇವರು ಬುಧವಾರ ಬೆಳಗ್ಗೆ ತಾಲೂಕಿನ ಹೂಗ್ಯಂ ಗ್ರಾಮದ ಜಮೀನೊಂದಕ್ಕೆ ತನ್ನ ನಾಲ್ವರು ಜತೆಗಾರರೊಂದಿಗೆ ಬೈಕ್‌ನಲ್ಲಿ ಆಗಮಿಸಿ ಬಾಳೆ ಕಟಾವು ಮುಗಿಸಿ ರಾತ್ರಿ 8 ಗಂಟೆ ಸುಮಾರಿನಲ್ಲಿ ಅರಣ್ಯ ಪ್ರದೇಶದ ದಾರಿಯಲ್ಲಿ ಗ್ರಾಮಕ್ಕೆ ವಾಪಸ್ಸಾಗುತ್ತಿದ್ದರು. ಈ ವೇಳೆ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿದ ಪರಿಣಾಮ ಶಿವಮೂರ್ತಿ ಸ್ಥಳದಲ್ಲಿಯೇ ಮೃತಪಟ್ಟರೆ, ಜತೆಗಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸುದ್ದಿ ತಿಳಿದು ಗುರುವಾರ ಡಿಸಿಎಫ್ ಭಾಸ್ಕರ್ ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕಾಗಮಿಸಿ ಪರಿಶೀಲಿಸಿದರು. ಈ ವೇಳೆ ಈ ಸಂಬಂಧ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕುಟುಂಬಸ್ಥರಿಗೆ ಸೂಕ್ತ ಪರಿಹಾರ ಕೊಡಿಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು. ಬಳಿಕ ಮೃತದೇಹವನ್ನು ಹನೂರಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಾಗಾರಕ್ಕೆ ರವಾನಿಸಿ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಲಾಯಿತು.
ಕಾಡಾನೆಗಳ ಬಗ್ಗೆ ನಿಗಾ: ಘಟನೆ ನಡೆದ ಸುದ್ದಿ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿ ರಾತ್ರಿಯೇ ಸ್ಥಳಕ್ಕಾಗಮಿಸಿದರು. ಬೀಡು ಬಿಟ್ಟಿದ್ದ ಆನೆಗಳನ್ನು ಅರಣ್ಯಕ್ಕೆ ಓಡಿಸಿದ್ದಾರೆ. ಘಟನೆ ನಡೆದ ಆಸುಪಾಸಿನಲ್ಲಿ ಒಂದು ಮರಿ ಆನೆ ಸೇರಿದಂತೆ 4 ಕಾಡಾನೆಗಳ ಚಲನವಲನ ಇರುವುದು ಡ್ರೋನ್ ಕ್ಯಾಮರಾದಿಂದ ತಿಳಿದು ಬಂದಿದ್ದು, ಈ ಬಗ್ಗೆ ನಿಯಮಾನುಸಾರ ನಿಗಾ ವಹಿಸಲಾಗಿದೆ ಎಂದು ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.