ಸಂವಿಧಾನದ ಆಶಯಗಳನ್ನು ಜಾರಿಗೊಳ್ಳಿಸಿಲ್ಲ ಮತ್ತು ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಪಟ್ಟಣದಲ್ಲಿ ರೈತ ಸಂಘ ಪ್ರತಿಭಟನೆ ನಡೆಸಿತು. ರೈತ ಸಂಘದ ಜಿಲ್ಲಾ ಕಾರ್ಯಧ್ಯಕ್ಷ ಶೈಲೇಂದ್ರ, ರೈತ ಸಂಘದ ತಾಲೂಕು ಅಧ್ಯಕ್ಷ ಮೋಳೆ ರಾಜಣ್ಣ, ಪ್ರಧಾನ ಕಾರ್ಯದರ್ಶಿ ಪೆರಿಯಾ ನಾಯಗಂ, ಸಿಂಗನಲ್ಲೂರು ಗ್ರಾಮ ಘಟಕ ಅಧ್ಯಕ್ಷ ಬೆಟ್ಟೆಗೌಡ, ವಸಂತ ಕುಮಾರ್, ಸುರೇಂದ್ರ, ನಾಗೇಂದ್ರ, ರವಿ ಮತ್ತಿತರಿದ್ದರು. 
ಚಾಮರಾಜನಗರ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಮಟೆ ಚಳವಳಿ

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ
  • ಮಾನವ ಸರಪಳಿ ನಿರ್ಮಿಸಿ ಆಕ್ರೋಶ
ಕೊಳ್ಳೇಗಾಲ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಪದಾಧಿಕಾರಿಗಳು ತಮಟೆ ಚಳವಳಿ ನಡೆಸಿದರು.
ಪಟ್ಟಣದ ಕೃಷಿ ಮಾರುಕಟ್ಟೆ ಆವರಣದಲ್ಲಿ ಸೋಮವಾರ ಸಮಾವೇಶಗೊಂಡ ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಮಟೆ ಸದ್ದು ಮಾಡಿಕೊಂಡು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಹೆದ್ದಾರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಅಕ್ರೋಶ ಹೊರಹಾಕಿದರು. ಈ ವೇಳೆ ಜಾಥಾದಲ್ಲಿ ರೈತ ಪೌಲ್ ಧರ್ಮರಾಜ್, ಸಿರಿಲ್ ಅವರು ಅರೆ ಬೆತ್ತಲೆಯಲ್ಲಿ ಸಾಗಿದರು. ನಂತರ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಬಸವರಾಜು ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ವೇಳೆ ರೈತ ಸಂಘದ ಜಿಲ್ಲಾ ಕಾರ್ಯಧ್ಯಕ್ಷ ಶೈಲೇಂದ್ರ ಮಾತನಾಡಿ, ಸರ್ಕಾರ ಸಂವಿಧಾನ ಆಶಯಗಳನ್ನು ಜಾರಿ ಮಾಡುವಲ್ಲಿ ವಿಫಲವಾಗಿದೆ. 7 ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರೈತರು ತಮಟೆ ಚಳವಳಿ ನಡೆಸುತ್ತಿದ್ದೇವೆ. ಅಂತರ್ಜಲ ಅಭಿವೃದ್ಧಿಗಾಗಿ ಕಾವೇರಿ ನದಿಯಿಂದ ದಂಟಳ್ಳಿ ಮಾರ್ಗವಾಗಿ ಏತ ನೀರಾವರಿ ಯೋಜನೆ ನಡೆಸಬೇಕೆಂದು ಆಗ್ರಹಿಸಿ 1 ತಿಂಗಳಿನಿಂದ ರೈತ ಸಂಘ ಅಹೋರಾತ್ರಿ ಧರಣಿ ನಡೆಸುತ್ತಿದೆ. ಹನೂರಿನ ಮಾರ್ಟಳ್ಳಿ, ಶೆಟ್ಟಳ್ಳಿ, ಕುರಟ್ಟಿ ಹೊಸೂರು, ಕೌದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಅಂತರ್ಜಲ ವ್ಯವಸಾಯಕ್ಕೆ ಹಾಗೂ ಕುಡಿಯಲು ನೀರಿಲ್ಲದೆ ರೈತರು ತಮ್ಮ ಬದುಕು ಕಟ್ಟಿ ಕೊಳ್ಳಲು ಗ್ರಾಮ ತೊರೆದಿದ್ದಾರೆ. 1300 ಅಡಿ ಕೊಳವೆ ಬಾವಿಗಳಿಂದ ಸಿಗುವ ಗಡಸು ನೀರು ಕುಡಿದು ರೋಗಗಳಿಗೆ ತುತ್ತಾಗಿ ಸಾವುಗಳು ಸಂಭವಿಸಿವೆ. ದೊಡ್ಡಿಂದುವಾಡಿ ಮತ್ತು ಸಿಂಗಾನಲ್ಲೂರು ಕೆ-ಶಿಪ್ ರಸ್ತೆಯಲ್ಲಿ ಅಪಘಾತಗಳು ಹೆಚ್ಚಾಗಿವೆ. ಆದ್ದರಿಂದ ರಸ್ತೆ ಡುಬ್ಬಗಳನ್ನು ನಿರ್ಮಿಸಬೇಕಿದೆ. ದೊಡ್ಡಿಂದುವಾಡಿ ಮತ್ತು ಸಿಂಗನಲ್ಲೂರು ಒಳಗೆ ಹಿಂದಿನಂತೆ ಬಸ್ ಸಂಚರಿಸಬೇಕು. ಚಿಕ್ಕಲ್ಲೂರು ರಸ್ತೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ರಸ್ತೆಯ ಧೂಳಿನಿಂದ ಫಸಲು ಹಾಳಾಗುತ್ತಿದೆ. ಜತೆಗೆ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹಾಗಾಗಿ ರಸ್ತೆಗೆ ನೀರು ಹಾಕುವ ಕೆಲಸ ಸಮರ್ಪಕವಾಗಿ ನಡೆಯಬೇಕು. ಅಲ್ಲದೆ, ಗ್ರಾ.ಪಂ. ಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಹಾಗೂ ಆರ್‌ಟಿಐ ಅಧಿಕಾರಿಗಳು ಗ್ರಾಮ ಸಭೆಗಳಲ್ಲಿ ಪಾಲ್ಗೊಂಡು ಜನರಿಗೆ ಜಾಗೃತಿ ಮೂಡಿಸಬೇಕು ಎಂದರು.
ಈ ವೇಳೆ ಕೆಎಸ್‌ಆರ್‌ಟಿಸಿ ನಿಗಮ ಅಧಿಕಾರಿಗಳು, ಕೆಶಿಪ್ ರಸ್ತೆ ಅಭಿವೃದ್ಧಿ ಅಧಿಕಾರಿಗಳು ರೈತರ ಆಗ್ರಹ ಆಲಿಸಿ ಕ್ರಮವಹಿಸುವಂತೆ ಭರವಸೆ ನೀಡಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಮೋಳೆ ರಾಜಣ್ಣ, ಪ್ರಧಾನ ಕಾರ್ಯದರ್ಶಿ ಪೆರಿಯಾ ನಾಯಗಂ, ಸಿಂಗಾನಲ್ಲೂರು ಗ್ರಾಮ ಘಟಕ ಅಧ್ಯಕ್ಷ ಬೆಟ್ಟೆಗೌಡ, ವಸಂತ ಕುಮಾರ್, ಸುರೇಂದ್ರ, ನಾಗೇಂದ್ರ, ರವಿ ಮತ್ತಿತರಿದ್ದರು.