ಚಾಮರಾಜನಗರದ ಹಳೇ ಕೆ.ಡಿ.ಪಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು ಎಚ್.ವಿ.ಚಂದ್ರು, ಜಿಪಂ ಸಿಇಒ ಮೋನಾರೋತ್ ಇದ್ದರು.
- ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು ಅಧಿಕಾರಿಗಳಿಗೆ ಸೂಚನೆ
- ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ನಡೆದ ಪ್ರಗತಿ ಪರಿಶೀಲನಾ ಸಭೆ
ಚಾಮರಾಜನಗರ: ಅನ್ನಭಾಗ್ಯ ಯೋಜನೆಯಡಿ ಆದಾಯ ಮಿತಿ ಹೆಚ್ಚಳವಾಗಿರುವ ಬಿ.ಪಿ.ಎಲ್ ಫಲಾನುಭವಿಗಳನ್ನು ಎ.ಪಿ.ಎಲ್ ಕಾರ್ಡ್‌ಗೆ ಪರಿವರ್ತಿಸುತ್ತಿರುವುದನ್ನು ಪರಿಶೀಲಿಸಿ ಕಡುಬಡವರಿಗೆ ತೊಂದರೆಯಾಗದಂತೆ ಕ್ರಮ ವಹಿಸಲು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಹಳೇ ಕೆ.ಡಿ.ಪಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯವು ಒಂದಾಗಿದ್ದು, ಬಿ.ಪಿ.ಎಲ್ ಕಾರ್ಡ್ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಪಡೆಯುವದಷ್ಟೇ ಮಾತ್ರವಲ್ಲ, ಆರೋಗ್ಯ ಸೇವೆ ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸಲು ಪ್ರಮುಖ ಮಾನದಂಡವಾಗಿದೆ. 5-6 ಜನರಿರುವ ಕುಟುಂಬದ ಯಾವುದೇ ಒಬ್ಬ ಸದಸ್ಯ ಬೇರೆಡೆ ಕೆಲಸ ಮಾಡಿ ಆದಾಯ ತೆರಿಗೆ ಪಾವತಿಸುತ್ತಿದ್ದರೆ ಅಂತಹ ಬಿ.ಪಿ.ಎಲ್ ಫಲಾನುಭವಿಗಳನ್ನು ಎ.ಪಿ.ಎಲ್‌ಗೆ ಪರಿವರ್ತಿಸಲು ಸರ್ಕಾರದ ನಿರ್ದೇಶನವಿದೆ. ಈಗಾಗಲೇ ಜಿಲ್ಲೆಯಲ್ಲಿಯೂ ಈ ಪ್ರಕ್ರಿಯೆ ಆರಂಭವಾಗಿದ್ದು, ಬಡವರಿಗೆ ಸಮಸ್ಯೆಯಾಗದಂತೆ ಆದಾಯ ತೆರಿಗೆ ಪಾವತಿದಾರ ಫಲಾನುಭವಿಗಳಿಂದ ಬ್ಯಾಂಕ್ ಸ್ಟೇಟ್‌ಮೆಂಟ್ ಪಡೆದು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಕೆ.ಎಸ್.ಎಫ್.ಸಿ ಗೋದಾಮಿನಿಂದ ನ್ಯಾಯಬೆಲೆ ಅಂಗಡಿಗಳಿಗೆ ವಾಹನಗಳ ಮೂಲಕ ಪಡಿತರ ಸರಬರಾಜಾಗುವ ಸಮಯದಲ್ಲಿ ತೂಕ ಮತ್ತು ಅಳತೆಯಲ್ಲಿ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕು. ತಾಲೂಕುವಾರು ಸೀಮೆಎಣ್ಣೆ ಪೂರೈಕೆ ಸಮರ್ಪಕವಾಗಿ ಆಗುತ್ತಿರುವ ಬಗ್ಗೆ ಪರಿಶೀಲಿಸಬೇಕು. ನ್ಯಾಯಬೆಲೆ ಅಂಗಡಿಗಳ ಮಾಲೀಕರ ಸಭೆ ಕರೆದು ಕುಂದುಕೊರತೆ ಆಲಿಸಬೇಕು. ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗದಂತೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಜಿಲ್ಲೆಯಾದ್ಯಂತ ಪಡಿತರ ವಿತರಣೆಯಲ್ಲಿ ಜನರಿಂದ ಯಾವುದೇ ದೂರುಗಳು ಬರದಂತೆ ಅಧಿಕಾರಿಗಳು ಎಚ್ಚರ ವಹಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಿದರು.
ಗೃಹಲಕ್ಷ್ಮೀ ಯೋಜನೆಯಡಿ ಫಲಾನುಭವಿಗಳ ಪರಿಷ್ಕರಣೆಯಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸಹಕಾರ ಪಡೆದು ಮರಣ ಹೊಂದಿರುವ ಫಲಾನುಭವಿಗಳನ್ನು ಪತ್ತೆಹಚ್ಚುವ ಕಾರ್ಯದಲ್ಲಿ ಶೇ. 93ರಷ್ಟು ಪ್ರಗತಿ ಸಾಧಿಸಲಾಗಿದೆ. ಮರಣ ಹೊಂದಿದವರ ಖಾತೆಗೆ ಗೃಹಲಕ್ಷ್ಮೀ ಹಣ ಜಮೆಯಾಗುತ್ತಿದ್ದ ಪ್ರಕರಣಗಳನ್ನು ಗುರುತಿಸಿ 28 ಲಕ್ಷಕ್ಕೂ ಅಧಿಕ ಹಣವನ್ನು ಸರ್ಕಾರಕ್ಕೆ ಪಾವತಿ ಮಾಡಲಾಗಿದೆ. ಗೃಹಜ್ಯೋತಿ ಯೋಜನೆಯ ಪರಿಷ್ಕರಣೆ ಕಾರ್ಯವು ಜಿಲ್ಲೆಯಾದ್ಯಂತ ನಡೆಯುತ್ತಿದ್ದು, ಮನೆಮನೆಗೂ ಭೇಟಿನೀಡಿ ಒಂದೇ ಹೆಸರಿನಲ್ಲಿ ಎರಡೆರಡು ಸಂಪರ್ಕ ಹೊಂದಿರುವ ಫಲಾನುಭವಿಗಳನ್ನು ಗುರುತಿಸಲಾಗುತ್ತಿದೆ. ಪರಿಷ್ಕರಣೆ ಕಾರ್ಯ ಶೇ. 50ರಷ್ಟು ಪ್ರಗತಿಯಾಗಿದೆ ಎಂದರು.
ಶಕ್ತಿ ಯೋಜನೆಯಡಿ ವಿದ್ಯಾರ್ಥಿಗಳ ಶಾಲಾ-ಕಾಲೇಜು ಹಾಗೂ ಕಚೇರಿ ಕೆಲಸಗಳ ಸಮಯಕ್ಕೆ ಅನುಗುಣವಾಗಿ ಕೆ.ಎಸ್.ಆರ್.ಟಿ.ಸಿ ಬಸ್‌ಗಳ ವ್ಯವಸ್ಥೆ ಮಾಡಬೇಕು. ಸರ್ಕಾರವು ಎಲ್ಲಾ ತಾಲೂಕುಗಳಲ್ಲಿ ತೆರೆಯಲಾಗಿರುವ ಆದರ್ಶ ವಿದ್ಯಾಲಯ ಹಾಗೂ ವಸತಿಶಾಲೆಗಳ ಶಿಕ್ಷಣದ ಗುಣಮಟ್ಟ, ಫಲಿತಾಂಶ ಸುಧಾರಣೆಯನ್ನು ಗಮನಿಸುತ್ತಿದೆ. ಆದರ್ಶ ಶಾಲೆಗಳು ಸಾಮಾನ್ಯವಾಗಿ ಪಟ್ಟಣದ ಹೊರಭಾಗದಲ್ಲಿರುವುದರಿಂದ ಶಾಲೆಗಳ ಮಕ್ಕಳಿಗೆ ತೊಂದರೆಯಾಗದಂತೆ ಅವಶ್ಯ ಬಸ್ ವ್ಯವಸ್ಥೆ ಕಲ್ಪಿಸಲು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಮುಂದಾಗಬೇಕು ಎಂದು ಹೇಳಿದರು.
ಯುವನಿಧಿ ಯೋಜನೆಯಡಿ ವ್ಯಾಸಂಗ ಪೂರ್ಣಗೊಳಿಸಿ ನಿರುದ್ಯೋಗಿ ಯುವಕರನ್ನು ನೊಂದಣಿ ಮಾಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಜಿಲ್ಲಾವ್ಯಾಪ್ತಿಯ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಲಭ್ಯತೆ ಕುರಿತು ಕಾರ್ಮಿಕ ಇಲಾಖೆ ವರದಿ ನೀಡಿದ್ದು, ಜಿಲ್ಲೆಯ 16 ಕಂಪನಿಗಳಲ್ಲಿ 7080 ಕಾರ್ಮಿಕರ ಪೈಕಿ 5495 ಮಂದಿ ಸ್ಥಳೀಯರಿಗೆ ಉದ್ಯೋಗ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಯುವನಿಧಿ ಯೋಜನೆ ಕುರಿತು ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಕಾಲೇಜುಗಳಲ್ಲಿ ಹಮ್ಮಿಕೊಳ್ಳುವಂತೆ ತಿಳಿಸಿದರು.
ಪಂಚ ಗ್ಯಾರಂಟಿ ಯೋಜನೆಗಳು ಅನುಷ್ಟಾನಗೊಂಡು ಯಶಸ್ವಿಯಾಗಿ ಮೂರು ವರ್ಷಗಳನ್ನು ಪೂರೈಸಿರುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಪಂಚಾಯಿತಿಗಳ ಆವರಣದಲ್ಲಿ ಸಸಿ ನೆಡುವಂತೆ ರಾಜ್ಯಮಟ್ಟದ ಸಮಿತಿ ನಿರ್ದೇಶನ ನೀಡಿದೆ. ಈಗಾಗಲೇ ಕೆಲವೆಡೆ ಸಾಂಕೇತಿಕವಾಗಿ ಸಸಿ ನೆಟ್ಟು ಸಂಭ್ರಮಾಚರಣೆ ಮಾಡಲಾಗಿದೆ. ಪ್ರಸ್ತುತ ಎಸ್.ಐ.ಆರ್ ಕಾರ್ಯ ಮುಗಿದ ಬಳಿಕ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಎಲ್ಲಾ ಪಂಚಾಯಿತಿಗಳಲ್ಲಿ ಸಸಿಗಳನ್ನು ನೆಡಬೇಕಾಗಿದೆ. ಅಲ್ಲದೇ ಗ್ಯಾರಂಟಿ ಯೋಜನೆಗಳ ಯಶೋಗಾಥೆ ಕುರಿತ ಕಿರುಪುಸ್ತಕ ಹೊರತರಲು ಸಿದ್ದತೆ ಕೈಗೊಳ್ಳುವಂತೆ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್, ಆಹಾರ ಇಲಾಖೆಯ ಉಪನಿರ್ದೇಶಕಿ ಡಾ. ವಸುಂಧರಾ ಹೆಗಡೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಮಂಜುಳಾ, ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜ, ಜಿಲ್ಲಾ ಉದ್ಯೋಗಾಧಿಕಾರಿ ಮಹಮದ್ ಅಕ್ಬರ್, ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಸೋಮೇಶ್ವರ, ರವಿ, ಎಸ್.ಆರ್. ರಾಜಶೇಖರ, ಎಸ್, ಪ್ರಭುಪ್ರಸಾದ್, ಆರ್. ರಾಜೇಂದ್ರ, ಉಮಾಪತಿ, ಸದಸ್ಯರಾದ ಚಿನ್ನಸ್ವಾಮಿ, ಎಂ. ಪ್ರದೀಪ್, ಎಂ. ರಾಚಯ್ಯ, ಎಚ್.ಎನ್. ಜಯರಾಜು, ಭಾಗ್ಯ, ಎಂ. ದೇವರಾಜು, ಎಲ್ಲ ತಾಲೂಕುಗಳ ಆಹಾರ ನಿರೀಕ್ಷಕರು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.