ಶೆಟ್ಟಳ್ಳಿ ಗ್ರಾಮ ಪಂಚಾಯಿತಿಗೆ ಜಿಪಂ ಸಿಇಒ ಮೋನಾರೋತ್ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದರು. ಉಮೇಶ್, ವೈರಮಾಣಿಕ್ಯಂ ಇದ್ದರು.  
ಚಾಮರಾಜನಗರ

ಕುಡಿಯುವ ನೀರಿನ ಸಮಸ್ಯೆಗೆ ಕೂಡಲೇ ಕ್ರಮವಹಿಸಿ

ಎಂ.ರವಿ

ಅಧಿಕಾರಿಗಳಿಗೆ ಜಿಪಂ ಸಿಇಒ ಮೋನಾರೋತ್ ಸೂಚನೆ

ಹನೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ತಲೆದೋರುವ ಕುಡಿಯುವ ನೀರಿನ ಸಮಸ್ಯೆಗೆ ಕೂಡಲೇ ಅಗತ್ಯ ಕ್ರಮವಹಿಸುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಮೋನಾರೋತ್ ಸೂಚಿಸಿದರು.
ತಾಲೂಕಿನ ಶೆಟ್ಟಳ್ಳಿ ಗ್ರಾಪಂಗೆ ಸೋಮವಾರ ಭೇಟಿ ನೀಡಿದ ಅವರು ಅಧಿಕಾರಿಗಳಿಂದ ಕುಡಿವ ನೀರಿನ ಸಮಸ್ಯೆಯುಳ್ಳ ಗ್ರಾಮಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿದರು.
ತಾಲೂಕಿನಲ್ಲಿ ಈ ಬಾರಿ ಸಮರ್ಪಕ ಮಳೆಯಾಗದ ಪರಿಣಾಮ ಅಂತರ್ಜಲ ಮಟ್ಟ ಕುಸಿದಿದ್ದು, ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಹಾಗೆಯೇ ಶೆಟ್ಟಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲೂ ಈ ಸಮಸ್ಯೆ ಇದೆ. ಹಾಗಾಗಿ ಪ್ರಸ್ತುತ ಸಂದರ್ಭದಲ್ಲಿ ಜನರಿಗೆ ನೀರೊದಗಿಸುವುದು ಸವಾಲಿನ ಕೆಲಸವಾಗಿದೆ. ಆದ್ದರಿಂದ ಈ ಬಗ್ಗೆ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಬೇಕು. ಗ್ರಾಮಗಳಿಗೆ ತೆರಳಿ ವಸ್ತುಸ್ಥಿತಿಯನ್ನು ಪರಿಶೀಲಿಸಬೇಕು. ಬೋರ್ ಕೊರೆಯಿಸಬೇಕು. ಖಾಸಗಿ ಜಮೀನಿನ ಪಂಪ್‌ಸೆಟ್‌ನಿಂದ ನೀರು ಪೂರೈಸಬೇಕು. ಒಟ್ಟಿನಲ್ಲಿ ಜನರಿಗೆ ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಇದೇ ವೇಳೆ ನರೇಗಾ ಯೋಜನೆ ಅನುಷ್ಟಾನ, ಸ್ವಚ್ಛ ಭಾರತ್ ಮಿಷನ್ ಹಾಗೂ ಇನ್ನಿತರ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ದಾಖಲೆಗಳನ್ನು ಪರಿಶೀಲಿಸಿ ಅಗತ್ಯ ಸಲಹೆ ನೀಡಿದರು. ಬಳಿಕ ಕುರಟ್ಟಿ ಹೊಸೂರು ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ತೆರಳಿ ಕುಡಿಯುವ ನೀರಿನ ಸಂಬಂಧ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ತಾಪಂ ಇಒ ಉಮೇಶ್, ಪಿಡಿಒ ವೈರಮಾಣಿಕ್ಯಂ ಹಾಗೂ ಇನ್ನಿತರರು ಇದ್ದರು.