ಹನೂರು ಸಮೀಪದ ಶಾಗ್ಯ ಬಳಿಯ ಅರಣ್ಯ ಪ್ರದೇಶದ ಬಸವನಕಡ ಸ್ಥಳಕ್ಕೆ ಜಿಲ್ಲಾಧಿಕಾರಿ ಶ್ರೀರೂಪಾ ಅವರು ತೆರಳಿ ಭಕ್ತರ ಸುರಕ್ಷತೆ ಬಗ್ಗೆ ಪರಿಶೀಲಿಸಿದರು. ಮುತ್ತುರಾಜ್, ಭಾಸ್ಕರ್, ಕೆ.ಎನ್ ಚೈತ್ರಾ, ಆನಂದಮೂರ್ತಿ ಇತರಿದ್ದರು.
ಹನೂರು: ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾ ಶಿವರಾತ್ರಿ ಅಂಗವಾಗಿ ಜರುಗುವ ಜಾತ್ರೆಗೆ ಸಾಕಷ್ಟು ಭಕ್ತರು ಆಗಮಿಸುತ್ತಿದ್ದಾರೆ. ಈ ವೇಳೆ ಅವರು ಕಾವೇರಿ ನದಿಯನ್ನು ದಾಟಿ ತೆರಳಬೇಕಾಗಿದ್ದು, ಭಕ್ತರ ಸುರಕ್ಷತೆಯ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಜಿಲ್ಲಾಧಿಕಾರಿ ಶ್ರೀರೂಪಾ ಅಧಿಕಾರಿಗಳಿಗೆ ಸೂಚಿಸಿದರು.
ಫೆ.14 ರಿಂದ 18ರವರೆಗೆ ಆಯೋಜಿಸಿರುವ ಜಾತ್ರೆಯ ಹಿನ್ನೆಲೆಯಲ್ಲಿ ಶನಿವಾರ ಕಾವೇರಿ ನದಿ ತೀರಕ್ಕೆ ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲನೆ ನಡೆಸಿ ಮಾತನಾಡಿದರು. ಚಿರತೆ ದಾಳಿಯಿಂದ ಭಕ್ತರೊಬ್ಬರೂ ಮೃತಪಟ್ಟಿರುವುದರಿಂದ ಭಕ್ತರಲ್ಲಿ ಆತಂಕ ಮೂಡುವುದು ಸಹಜ. ಆದ್ದರಿಂದ ಭಕ್ತರ ಸುರಕ್ಷತೆಗಾಗಿ ಕಾಲ್ನಡಿಗೆಯಲ್ಲಿ ತೆರಳುವ ಅರಣ್ಯ ಪ್ರದೇಶದ ಮಾರ್ಗದಲ್ಲಿ ವನ್ಯಜೀವಿಗಳ ಸಂಬಂಧ ಸೂಚನಾ ಫಲಕವನ್ನು ಅಳವಡಿಸಬೇಕು. ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿ ಗಸ್ತು ಹೆಚ್ಚಿಸಬೇಕು. ಗ್ರಾಪಂ ವತಿಯಿಂದ ಕುಡಿಯುವ ನೀರಿನ ಸೌಕರ್ಯ ಒದಗಿಸಬೇಕು. ಬೆಂಕಿ ಅವಘಡ ಸಂಭವಿಸದಂತೆ ಅರಣ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಬೇಕು. ಕಾಲ್ನಡಿಗೆಯಲ್ಲಿ ತೆರಳುವ ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ಕಾಪಾಡಬೇಕು. ಅರಣ್ಯ ಪ್ರದೇಶಕ್ಕೆ ಹಾನಿಯಾಗದಂತೆ ಅಗತ್ಯ ಕ್ರಮವಹಿಸಬೇಕು ಎಂದು ಸೂಚಿಸಿದರು.
ತಹಸೀಲ್ದಾರ್ ಕೆ.ಎನ್. ಚೈತ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್, ಡಿವೈಎಸ್ಪಿ ಧರ್ಮೇಂದ್ರ, ಡಿಸಿಎಫ್ ಭಾಸ್ಕರ್, ಎಸಿಎಫ್‌ಗಳಾದ ಸೂರಜ್ ಹೊಸೂರ್, ಮರಿಸ್ವಾಮಿ, ಆರ್‌ಎಫ್‌ಒ ನಿರಂಜನ್, ಇನ್ಸ್‌ಪೆಕ್ಟರ್ ಆನಂದಮೂರ್ತಿ, ಗ್ರಾಮ ಆಡಳಿತ ಅಧಿಕಾರಿ ಶೇಷಣ್ಣ ಇದ್ದರು.
ಜಿಲ್ಲಾಡಳಿತದಿಂದ ಸಕಲ ಸಿದ್ಧತೆ: ಶಿವರಾತ್ರಿ ಜಾತ್ರೆಯ ಅಂಗವಾಗಿ ಬೆಂಗಳೂರು, ಮಾಗಡಿ, ರಾಮನಗರ, ಕನಕಪುರ, ಚನ್ನಪಟ್ಟಣ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಕೋಲಾರ ಸೇರಿ ಸುತ್ತಮುತ್ತಲ ಭಾಗದಿಂದ ಭಕ್ತರು ಪಾದಯಾತ್ರೆ ಕೈಗೊಳ್ಳುತ್ತಾರೆ. ಇವರೆಲ್ಲಾ ರಾಮನಗರ ಜಿಲ್ಲೆಯ ಬೊಮ್ಮಸಂದ್ರದ ಸಂಗಮದ ಮೂಲಕ ಶಾಗ್ಯ ಸಮೀಪದ ಅರಣ್ಯ ಪ್ರದೇಶದೊಳಗಿನ ಬಸವನಕಡ ಬಳಿ ಕಾವೇರಿ ನದಿಯನ್ನು ದಾಟಬೇಕಾಗುತ್ತದೆ. ನಂತರ ಕೌದಳ್ಳಿ, ತಾಳುಬೆಟ್ಟದ ಮಾರ್ಗವಾಗಿ ಮ.ಬೆಟ್ಟಕ್ಕೆ ತೆರಳುತ್ತಾರೆ. ಆದರೆ ಕಳೆದ 2 ವರ್ಷದ ಹಿಂದೆ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ್ದರಿಂದ ನಾಲ್ವರು ಭಕ್ತರು ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಇತ್ತೀಚೆಗೆ ತಾಳುಬೆಟ್ಟದ ಮಾರ್ಗದಲ್ಲಿ ಮಂಡ್ಯದ ಚೀರನಹಳ್ಳಿ ಗ್ರಾಮದ ಕಾಲ್ನಡಿಗೆ ಭಕ್ತ ಚಿರತೆ ದಾಳಿಗೆ ಬಲಿಯಾಗಿದ್ದರು. ಹಾಗಾಗಿ ಭಕ್ತರ ಸುರಕ್ಷತೆ ದೃಷ್ಟಿಯಿಂದ ಜಿಲ್ಲಾಡಳಿತ ಈ ಬಾರಿ ಹೆಚ್ಚಿನ ಕಾಳಜಿ ವಹಿಸಿದೆ.