ಕೊಳ್ಳೇಗಾಲ ಪಟ್ಟಣದ ವಿಶ್ವಚೇತನ ಕಾಲೇಜು ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಶಿಬಿರದಲ್ಲಿ ಕಣ್ಣಿನ ತಪಾಸಣೆ ಮಾಡಲಾಯಿತು.
ಕೊಳ್ಳೇಗಾಲ: ಕಣ್ಣಿನ ಆರೋಗ್ಯದ ಕಡೆಗೆ ಒತ್ತು ನೀಡಬೇಕೆಂದು ವಿಶ್ವಚೇತನ ಸಮೂಹ ವಿದ್ಯಾಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ ಹೇಳಿದರು.
ಪಟ್ಟಣದ ವಿಶ್ವಚೇತನ ಕಾಲೇಜು ಆವರಣದಲ್ಲಿ ಎಚ್.ಕೃಷ್ಣಸ್ವಾಮಿ ಮೆಮೋರಿಯಲ್ ಚಾರಿಟಬಲ್ ಟ್ರಸ್ಟ್, ವಿಶ್ವಚೇತನ ಸಮೂಹ ವಿದ್ಯಾಸಂಸ್ಥೆಗಳು ಕೊಳ್ಳೇಗಾಲ, ರೋಟರಿ ಮಿಡ್‌ಟೌನ್ ಹಾಗೂ ಕೊಯಮತ್ತೂರು ಅರವಿಂದ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಕಣ್ಣಿನ ತಪಾಸಣಾ ಉಚಿತ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಣ್ಣು ಸೂಕ್ಷ್ಮ ಅಂಗ. ಕಣ್ಣಿನ ಆರೋಗ್ಯದ ಕಡೆಗೆ ಕಾಳಜಿವಹಿಸಬೇಕು. ಎಚ್.ಕೆ.ಟ್ರಸ್ಟ್ ಸೇರಿದಂತೆ ಇತರೆ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಸತತವಾಗಿ 48 ತಿಂಗಳಿಂದ ಪ್ರತಿ ತಿಂಗಳ ಎರಡನೇ ಭಾನುವಾರ ಕಣ್ಣಿನ ತಪಾಸಣಾ ಉಚಿತ ಶಿಬಿರವನ್ನು ನಡೆಸಲಾಗುತ್ತಿದೆ. ಈಗಾಗಲೇ 5,568 ರೋಗಿಗಳು ಶಿಬಿರದಲ್ಲಿ ಪಾಲ್ಗೊಂಡು ಅದರಲ್ಲಿ 3,359 ಜನರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಇಂತಹ ಕಾರ್ಯಕ್ರಮಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಶಿಬಿರದಲ್ಲಿ 236 ಜನರನ್ನು ತಪಾಸಣೆ ಮಾಡಿದ್ದು ಅದರಲ್ಲಿ 128 ಜನರನ್ನು ಶಸ್ತ್ರ ಚಿಕಿತ್ಸೆಗೆ ಅರವಿಂದ ಕಣ್ಣಿನ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು. ಅರವಿಂದ ಕಣ್ಣಿನ ಆಸ್ಪತ್ರೆಯ ಡಾ.ಅಜಯ್ ವೆಂಕಟ್ ಅನಂತನ್, ಡಾ.ಹರಿ ಉತ್ತಮ್ ಕುಮಾರ್, ಡಾ.ಮೇನಕಾ, ಆಸ್ಪತ್ರೆಯ ಸಂಯೋಜಕ ವಿಜಯ್ ಕುಮಾರ್, ವಿಶ್ವಚೇತನ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ರವಿತೇಜ, ಆಸ್ಪತ್ರೆಯ ಸಿಬ್ಬಂದಿ, ಸಂಸ್ಥೆಯ ಸಿಬ್ಬಂದಿ ಗಾಯತ್ರಿ, ಶಿವಣ್ಣ, ಸಿದ್ದರಾಜು ಇತರರು ಇದ್ದರು.