ಮಣಗಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಆಡಳಿತಾಧಿಕಾರಿ ಕರುಣಾಮಯಿ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆ ನಡೆಯಿತು. ರಾಮು, ಅಶ್ವಿನಿ, ನಾಗರಾಜಮೂರ್ತಿ, ಅನುಶ್ರೀ ಇತರರಿದ್ದರು.
- ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಕರುಣಾಮಯಿ ಸೂಚನೆ
- ವಿಶೇಷ ಸಾಮಾನ್ಯ ಸಭೆ
ಹನೂರು: ಭೈರನತ್ತ ಗ್ರಾಮದಲ್ಲಿ ಕೂಡಲೇ ಬೋರ್ ಕೊರೆಸಲು ಅಗತ್ಯ ಕ್ರಮವಹಿಸಿ, ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ನೀರಾವರಿ ಇಲಾಖೆಯ ಎಇಇ ಹಾಗೂ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಕರುಣಾಮಯಿ ತಿಳಿಸಿದರು.
ತಾಲೂಕಿನ ಮಣಗಳ್ಳಿ ಗ್ರಾ.ಪಂ. ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶೇಷ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.
ಭೈರನತ್ತ ಭಾಗದಲ್ಲಿ ಮಳೆಯ ಕೊರತೆಯಿಂದಾಗಿ ಅಂತರ್ಜಲ ಮಟ್ಟ ಕುಸಿದಿದ್ದು, ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಖಾಸಗಿ ಪಂಪ್‌ಸೆಟ್‌ನಿಂದ ನೀರು ಪೂರೈಸುತ್ತಿದ್ದರೂ ಸಾಲುತ್ತಿಲ್ಲ. ಇದರಿಂದ ಜನರು ತೊಂದರೆ ಎದುರಿಸುತ್ತಿದ್ದಾರೆ. ಇತ್ತ ಪ್ರೌಢಶಾಲೆಯಲ್ಲೂ ನೀರಿಗೆ ಸಮಸ್ಯೆಯಾಗಿದೆ. ಆದ್ದರಿಂದ ಕೂಡಲೇ ಬೋರ್ ಕೊರೆಯಿಸುವುದರ ಮೂಲಕ ನೀರಿನ ಸಮಸ್ಯೆಯನ್ನು ಬಗೆಹರಿಸುವ ಕೆಲಸ ತುರ್ತಾಗಿ ಆಗಬೇಕಿದೆ. ಈ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇ ಅನುಶ್ರೀ ಅವರಿಗೆ ಸೂಚಿಸಿದರು. ಮಣಗಳ್ಳಿ ಗ್ರಾಮದ ಪ್ರೌಢಶಾಲೆಯಲ್ಲಿ ಹಾಳಾಗಿರುವ ನೀರೆತ್ತುವ ವಿದ್ಯುತ್ ಸ್ಟಾರ್ಟರ್ ರಿಪೇರಿ ಮಾಡಿವಂತೆ ಪಿಡಿಒ ರಾಮು ಅವರಿಗೆ ತಿಳಿಸಿದರು.
ಪಿಡಿಒ ರಾಮು ಮಾತನಾಡಿ, ನರೇಗಾ ಯೋಜನೆಯು ಸ್ಥಗಿತಗೊಂಡಿದ್ದು, ಕೇಂದ್ರ ಸರ್ಕಾರದ ನೂತನ ವಿಬಿಜಿ ರಾಮ್ ಜಿ ಯೋಜನೆಯು ಜು.1 ರಿಂದ ಕಾರ್ಯರೂಪಕ್ಕೆ ಬಂದಿದೆ. ಪ್ರತಿ ಕುಟುಂಬಕ್ಕೆ 125 ದಿನ ಉದ್ಯೋಗ ಸಿಗಲಿದೆ. ಉಪ ಖಜಾನೆಯ ಮೂಲಕ ಕೂಲಿ ಹಣ ದೊರಕಲಿದೆ. ಶಾಲಾ, ಅಂಗನವಾಡಿ ಕೊಠಡಿ, ಶೌಚಗೃಹ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲು ಅವಕಾಶವಿದ್ದು, ಈ ಬಗ್ಗೆ ಅಗತ್ಯ ಕ್ರಮವಹಿಸಲಾಗುವುದು. ಇನ್ನು ಗ್ರಾ.ಪಂ. ವ್ಯಾಪ್ತಿಯ 7 ವಾರ್ಡ್‌ಗಳಲ್ಲೂ ಬಿಎಲ್‌ಒಗಳು ಮನೆ ಮನೆಗೆ ತೆರಳಿ ಎಸ್‌ಐಆರ್ ಗಣತಿ ನಮೂನೆಯನ್ನು ನೀಡಿದ್ದಾರೆ. ಇದನ್ನು ಭರ್ತಿ ಮಾಡಿ ನೀಡುವಂತೆ ಆಶಾ ಕಾರ್ಯಕರ್ತೆಯರು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ವಸಂತಕುಮಾರ್, ಪಶುಪಾಲನಾ ಇಲಾಖೆಯ ಸಿದ್ದಪ್ಪಾಜಿ, ರೇಷ್ಮೆ ಇಲಾಖೆಯ ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಗೌಸಿಯ ಬಾನು, ಗ್ರಾ.ಪಂ. ಕಾರ್ಯದರ್ಶಿ ಅಶ್ವಿನಿ, ಲೆಕ್ಕಾಧಿಕಾರಿ ನಾಗರಾಜಮೂರ್ತಿ, ಆಶಾ ಕಾರ್ಯಕರ್ತೆಯರು ಹಾಗೂ ಇನ್ನಿತರರಿದ್ದರು.