ಪಟ್ಟಣದ ಉಪವಿಭಾಗಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಎಸಿ ದಿನೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಉಪವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಯಿತು. 
ಚಾಮರಾಜನಗರ

ಮದ್ಯ ಅಕ್ರಮ ಮಾರಾಟ ತಡೆಯಲು ಕ್ರಮವಹಿಸಿ

ಪ್ರಮುಖ ಮುಖ್ಯಾಂಶಗಳು

  • ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಸೂಚನೆ
  • ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ
ಕೊಳ್ಳೇಗಾಲ: ಎಸ್ಸಿ-ಎಸ್ಟಿ ಜನರು ವಾಸಿಸುವ ಕಾಲನಿಗಳಲ್ಲಿ ಮದ್ಯ ಅಕ್ರಮ ಮಾರಾಟ ನಡೆಯದಂತೆ ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ ಮತ್ತು ಗ್ರಾ.ಪಂ ಪಂಚಾಯಿತಿ ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮವಹಿಸಬೇಕೆಂದು ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ಸೂಚನೆ ನೀಡಿದರು.
ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಉಪವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಸಭೆಯಲ್ಲಿದ್ದ ತಾ.ಪಂ, ಗ್ರಾ.ಪಂ ಅಧಿಕಾರಿಗಳು, ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಮದ್ಯ ಅಕ್ರಮ ತಡೆಯಲು ಕ್ರಮ ಏನು ತೆಗೆದು ಕೊಂಡಿದ್ದೀರಿ ಎಂದು ಪ್ರಶ್ನಿಸಿದರು.
ಈ ವೇಳೆ ಸ್ಥಳದಲ್ಲಿದ್ದ ಅಬಕಾರಿ ಪಿಎಸ್‌ಐ ನಾಗರಾಜು ಅವರು ತಮ್ಮ ಮೊಬೈಲ್‌ನಲ್ಲಿದ್ದ ಚಿಕ್ಕಲ್ಲೂರು ಜಾತ್ರೆಯ ಪೂರ್ವಭಾವಿ ಸಭೆಯ ಮದ್ಯ ಅಕ್ರಮ ಮಾರಾಟ ತಡೆಗಟ್ಟುವ ಸಂಬಂಧ ಮಾತನಾಡಿರುವ ಕಾರ್ಯಕ್ರಮ ವಿಡಿಯೋ ತುಣುಕನ್ನು ಸಭೆಯಲ್ಲಿ ತೋರಿಸಿದರು. ಇದಕ್ಕೆ ಸಿಡಿಮಿಡಿಗೊಂಡ ಎಸಿ ದಿನೇಶ್ ಕುಮಾರ್ ಮೀನಾ ಅವರು, ನಾವು ನಿಮಗೆ ಕೇಳಿದ್ದು ಎಸ್ಸಿ-ಎಸ್ಟಿ ಜನಾಂಗದ ಕಾಲನಿಗಳಲ್ಲಿ ಮದ್ಯ ಅಕ್ರಮ ಮಾರಾಟ ತಡೆಯಲು ನಡೆಸಿರುವ ಜಾಗೃತಿ ಕಾರ್ಯಕ್ರಮಗಳ ಮಾಹಿತಿ ನೀಡಿ ಎಂದು ನೀವು ಸುಮ್ಮನೆ ಏನೆನೋ ತೋರಿಸುತ್ತಿದ್ದೀರಾ ಎಂದು ಅಸಮಾಧಾನ ಹೊರ ಹಾಕಿದರು.
ಬಳಿಕ ಸಭೆಯಲ್ಲಿ ಉಪಸ್ಥಿತಿಯಿಂದ ವನವಾಸಿ ಕಲ್ಯಾಣ ಸಂಸ್ಥೆ ಸದಸ್ಯ ಮಹೇಶ್ ಅವರು ಜಿಲ್ಲೆಯ ವ್ಯಾಪ್ತಿಯ ಹಲವು ಹಾಡಿಗಳಲ್ಲಿ ಮದ್ಯ ಅಕ್ರಮ ಮಾರಾಟ ನಡೆಯುತ್ತಿದೆ ಎಂದು ಗಮನ ಸೆಳೆದರು. ಬಳಿಕ ಎಸಿ ದಿನೇಶ್ ಕುಮಾರ್ ಮೀನಾ ಅವರು, ಸ್ಥಳದಲ್ಲಿದ್ದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೇಶವ ಮೂರ್ತಿ ಅವರಿಗೆ ಮಹೇಶ್ ಅವರಿಂದ ವರದಿ ಪಡೆಯುವಂತೆ ಸೂಚನೆ ನೀಡಿದರಲ್ಲದೆ, ಗ್ರಾ.ಪಂ ಅಧಿಕಾರಿಗಳು ಎಲ್ಲೆಲ್ಲಿ ಮದ್ಯ ಅಕ್ರಮ ಮಾರಾಟ ನಡೆಯುತ್ತಿದೆ ಎಂಬ ಮಾಹಿತಿ ಸಂಗ್ರಹಿಸಬೇಕು. ಬಳಿಕ ವರದಿಯನ್ನು ತಾ.ಪಂ ಅಧಿಕಾರಿಗಳ ಮೂಲಕ ಅಬಕಾರಿ ಇಲಾಖೆಗೆ ನೀಡಬೇಕು. ಮುಂದಿನ ಸಭೆಯಲ್ಲಿ ಮದ್ಯ ಅಕ್ರಮ ತಡೆಗೆ ತೆಗೆದು ಕೊಂಡ ಕ್ರಮದ ಮಾಹಿತಿಯನ್ನು ಅಧಿಕಾರಿಗಳು ಸಲ್ಲಿಸಬೇಕು ಎಂದರು.
ಈ ವೇಳೆ ಉಪವಿಭಾಗ ಮಟ್ಟದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ಪ್ರಕರಣಗಳು ಮತ್ತು ಪರಿಹಾರ ಧನದ ಮಾಹಿತಿ ಯನ್ನು ಅಧಿಕಾರಿಗಳಿಂದ ಪಡೆದರು. ಸುಳ್ವಾಡಿ ವಿಷ ಪ್ರಸಾದ ಪ್ರಕರಣದಲ್ಲಿ ನೊಂದ ಸಂತ್ರಸ್ಥರಿಗೆ ನಿವೇಶನ ಹಂಚಿಕೆ ಕುರಿತು ಅಧಿಕಾರಿಗಳ ಜತೆ ಚರ್ಚಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಬಸವರಾಜು, ಹನೂರು ತಹಸೀಲ್ದಾರ್ ಕೆ.ಎನ್.ಚೈತ್ರಾ, ಗುಂಡ್ಲುಪೇಟೆ ತಹಸೀಲ್ದಾರ್ ಎಂ.ಎಸ್. ತನ್ಮಯಿ, ಕೊಳ್ಳೇಗಾಲ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೇಶವಮೂರ್ತಿ, ಗುಂಡ್ಲುಪೇಟೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ಸಿಪಿಐ ಶಿವಮಾದಯ್ಯ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ರಾಜೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.