ಗುಂಡ್ಲುಪೇಟೆ ತಾಲೂಕಿನಲ್ಲಿ ಮಳೆ ಇಲ್ಲದೆ ಒಣಗಿರುವ ಸೂರ್ಯಕಾಂತಿ ಬೆಳೆ 
ಚಾಮರಾಜನಗರ

ವಿಮೆ ಮಾಡಿಸಿದ ಬೆಳೆಗಳ ಸರ್ವೆ ಆರಂಭ

ಪ್ರಮುಖ ಮುಖ್ಯಾಂಶಗಳು

  • ಮಳೆಯಾಗದೆ ಸಂಕಷ್ಟದಲ್ಲಿರುವ ಸೂರ್ಯಕಾಂತಿ, ಜೋಳ ಬೆಳೆದ ರೈತರು
  • ಮಧ್ಯಂತರ ಪರಿಹಾರ ನೀಡಲು ಅಗತ್ಯವಾಗಿರುವ ಅಂಕಿ-ಅಂಶ
ಚಾಮರಾಜನಗರ; ಜಿಲ್ಲೆಯಲ್ಲಿ ಸೂರ್ಯಕಾಂತಿ ಮತ್ತು ಜೋಳ ವಿಮೆ ಮಾಡಿಸಿರುವ ರೈತರ ಜಮೀನುಗಳ ಬೆಳೆ ಸಮೀಕ್ಷೆ ಶುರುವಾಗಿದ್ದು, ಒಂದು ವಾರಗಳ ಕಾಲ ನಡೆಯಲಿದೆ.
ಮಳೆಯ ಕೊರತೆಯಿಂದಾಗಿ ಬೆಳೆ ನಷ್ಟ ಉಂಟಾಗುತ್ತಿದೆ. ಜಿಲ್ಲೆಯಲ್ಲಿ ಸೂರ್ಯಕಾಂತಿ ಮತ್ತು ಜೋಳ ಬೆಳೆದಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಅನುಕೂಲವಾಗಲಿದೆಂದು ಬೆಳೆ ವಿಮೆ ಮಾಡಿಸಲಾಗಿದ್ದು, ವಿಮೆ ಮಾಡಿಸಿರುವ ರೈತರಿಗೆ ಮಧ್ಯಂತರ ಪರಿಹಾರ ನೀಡುವ ಉದ್ದೇಶದಿಂದ ಕೃಷಿ ಇಲಾಖೆಯಿಂದ ಮಂಗಳವಾರದಿಂದ ಸಮೀಕ್ಷೆ ಆರಂಭವಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಶ್ರೀರೂಪಾ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಸಮೀಕ್ಷೆ ನಡೆಸಲು ಸೂಚನೆ ಕೊಟ್ಟಿದ್ದಾರೆ. ಮುಂದಿನ ವಾರ ನಡೆಯಲಿರುವ ಸಭೆಯಲ್ಲಿ ನಷ್ಟವಾಗಿರುವ ಸೂರ್ಯಕಾಂತಿ ಮತ್ತು ಜೋಳದ ಮಾಹಿತಿಯನ್ನು ಅಧಿಕಾರಿಗಳು ನೀಡಲಿದ್ದಾರೆ. ನಂತರ ಬೆಳೆ ನಷ್ಟಕ್ಕೆ ವಿಮೆ ಹಣ ಕೊಡಿಸುವ ಪ್ರಯತ್ನ ನಡೆಯಲಿದೆ. ಮಧ್ಯಂತರ ಪರಿಹಾರವೆಂದರೆ ಶೇ.25ರಷ್ಟು ಹಣವನ್ನು ಕೊಡುವ ಸಾಧ್ಯತೆಯೂ ಇದೆ.
ಸೂರ್ಯಕಾಂತಿ, ಜೋಳ ಬೆಳೆ ವಿವರ: ಜಿಲ್ಲೆಯಲ್ಲಿ ಒಟ್ಟು 10305 ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ ಬೆಳೆ ಹಾಕಲಾಗಿದೆ. ಚಾಮರಾಜನಗರ ತಾಲೂಕಿನಲ್ಲಿ 355 ಹೆಕ್ಟೇರ್, ಗುಂಡ್ಲುಪೇಟೆ ತಾಲೂಕಿನಲ್ಲಿ 9950 ಹೆಕ್ಟೇರ್‌ಗಳಲ್ಲಿ ಸೂರ್ಯಕಾಂತಿ ಇದ್ದು, ಮಳೆಯ ಕೊರತೆಯಿಂದ ಬೆಳೆ ಒಣಗುತ್ತಿದೆ.
ಇನ್ನು ಜಿಲ್ಲೆಯಲ್ಲಿ ಜೋಳವನ್ನು ಚಾಮರಾಜನಗರ ತಾಲೂಕಿನಲ್ಲಿ 1130 ಹೆಕ್ಟೇರ್, ಗುಂಡ್ಲುಪೇಟೆ ತಾಲೂಕಿನಲ್ಲಿ 6800 ಹೆಕ್ಟೇರ್, ಯಳಂದೂರು ತಾಲೂಕಿನಲ್ಲಿ 125 ಹೆಕ್ಟೇರ್ ಪ್ರದೇಶಗಳಲ್ಲಿ ಜೋಳ ಹಾಕಲಾಗಿದೆ. ಜಿಲ್ಲೆಯಲ್ಲಿ ಗುಂಡ್ಲುಪೇಟೆ ತಾಲೂಕಿನಲ್ಲಿ ಅಧಿಕ ಪ್ರಮಾಣದಲ್ಲಿ ಸೂರ್ಯಕಾಂತಿ ಮತ್ತು ಜೋಳವನ್ನು ಬೆಳೆಯಲಾಗಿದೆ. ಮಳೆ ಮಾಹಿತಿ ಪ್ರಕಾರ, ಜು.4ವರೆಗೆ ಗುಂಡ್ಲುಪೇಟೆ ತಾಲೂಕಿನಲ್ಲಿ ಶೇ.6.2ರಷ್ಟು ಮಳೆಯಾಗಿದೆ. ಆದರೆ ಜೂನ್‌ನಲ್ಲಿ 42.4, ಮೇನಲ್ಲಿ 23.4, ಏಪ್ರಿಲ್‌ನಲ್ಲಿ 45.8ರಷ್ಟು ಮಳೆ ಕೊರತೆ ಉಂಟಾಗಿತ್ತು.
ಬೆಳೆ ವಿಮೆ ಮಾಡಿಸಿರುವ ರೈತರು: ಬೆಳೆ ವಿಮೆ ಮಾಡಿಸಿರುವ ರೈತರಿಗೆ ಬರಗಾಲದ ಪರಿಸ್ಥಿತಿಯಲ್ಲಿ ನಷ್ಟದಿಂದ ಪಾರಾಗಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಎಲ್ಲ ರೈತರೂ ಬೆಳೆ ವಿಮೆ ಮಾಡಿಸಬೇಕೆಂದು ಕೃಷಿ ಇಲಾಖೆ ಸಲಹೆ ನೀಡುತ್ತಿದೆ. ಸೂರ್ಯಕಾಂತಿ ಮತ್ತು ಜೋಳದ ಬೆಳೆಗಳ ಪ್ರಸ್ತುತ ಸ್ಥಿತಿಗತಿಯನ್ನು ಅರಿತು ಮಧ್ಯಂತರ ಪರಿಹಾರ ಕೊಡಿಸಲು ಸರ್ವೆ ಮಾಡಲಾಗುತ್ತಿದೆ. ಇದರ ಪರಿಣಾಮ 8545 ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ಇವರಲ್ಲಿ ಸೂರ್ಯಕಾಂತಿ, ಜೋಳ ಬೆಳೆಗಳ ಸಮೀಕ್ಷೆ ನಡೆದು ನಷ್ಟವನ್ನು ಲೆಕ್ಕಹಾಕಲಾಗುತ್ತದೆ.
ಬೆಂಬಲ ಬೆಲೆ ಅಡಿ ಖರೀದಿ ಕೇಂದ್ರ ತೆರೆಯಲು ಒತ್ತಾಯ:
ಸೂರ್ಯಕಾಂತಿ ಬೆಳೆಯನ್ನು ಕನಿಷ್ಟ ಬೆಂಬಲ ಬೆಲೆ ಅಡಿಯಲ್ಲಿ ತುರ್ತು ಖರೀದಿ ಕೇಂದ್ರ ಆರಂಭಿಸಬೇಕು ಮತ್ತು ಪ್ರತಿ ರೈತನ ಖರೀದಿ ಮಿತಿಯನ್ನು 20 ಕ್ವಿಂಟಾಲ್‌ಗೆ ಹೆಚ್ಚಿಸಬೇಕೆಂದು ಜಿಲ್ಲಾಧಿಕಾರಿ ಶ್ರೀರೂಪಾ ಅವರಿಗೆ ಶ್ರಮ ಸಂಜಾತ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ಎಸ್.ಎಂ.ನಾಗಾರ್ಜುನ್‌ಕುಮಾರ್ ಮನವಿ ಮಾಡಿದ್ದಾರೆ. ಜಿಲ್ಲೆಯಲ್ಲಿ ಸೂರ್ಯಕಾಂತಿ ಪ್ರಮುಖ ಬೆಳೆಯಾಗಿದ್ದು, ಪ್ರಸ್ತುತ ಹವಾಮಾನ ವೈಪರಿತ್ಯ ಮತ್ತು ಬೆಲೆ ಏರಿಳಿತದಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಮುಕ್ತ ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಬೆಳೆ ತೀವ್ರ ಕುಸಿತ ಕಂಡಿದೆ. ರೈತರು ತಾವು ಹೂಡಿದ ಬಂಡವಾಳವನ್ನು ಹಿಂಪಡೆಯಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ರೈತರನ್ನು ರಕ್ಷಿಸಲು ಸರ್ಕಾರದಿಂದ ಕನಿಷ್ಠ ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ತೆರೆಯಬೇಕೆಂದು ಕೋರಿದ್ದಾರೆ. ನಿಯಮಾವಳಿ ಪ್ರಕಾರ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ರೈತರಿಂದ ಕೇವಲ 20 ಕ್ವಿಂಟಾಲ್ ಸೂರ್ಯಕಾಂತಿಯನ್ನು ಮಾತ್ರ ಖರೀದಿಸಲಾಗುತ್ತದೆ. ಈ ಮಿತಿಯು ಅತ್ಯಂತ ಕಡಿಮೆಯಾಗಿದ್ದು, ದೊಡ್ಡ ಪ್ರಮಾಣದಲ್ಲಿ ಬೆಳೆ ಬೆಳೆದಿರುವ ರೈತರು ಉಳಿದ ಬೆಳೆಗಳನ್ನು ಅನಿವಾರ್ಯವಾಗಿ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ದಲ್ಲಾಳಿಗಳಿಗೆ ಮಾರಾಟ ಮಾಡಬೇಕಾಗುತ್ತದೆ. ಆದ್ದರಿಂದ ಖರೀದಿಯ ಪ್ರಮಾಣವನ್ನು ಹೆಚ್ಚಳ ಮಾಡಬೇಕೆಂದು ಕೇಳಿಕೊಂಡಿದ್ದಾರೆ.
ಸೂರ್ಯಕಾಂತಿ ಮತ್ತು ಜೋಳ ಬೆಳೆ ವಿಮೆ ಮಾಡಿಸಿರುವ ರೈತರ ಜಮೀನುಗಳಲ್ಲಿ ಒಂದು ವಾರಗಳ ಕಾಲ ಸರ್ವೆ ಆರಂಭವಾಗಿದೆ. ಜಿಲ್ಲಾಧಿಕಾರಿ ಶ್ರೀರೂಪಾ ಅವರ ಅಧ್ಯಕ್ಷತೆಯಲ್ಲಿ ಮುಂದಿನ ವಾರ ನಡೆಯಲಿರುವ ಸಭೆಯಲ್ಲಿ ವರದಿಯನ್ನು ನೀಡುತ್ತೇವೆ. ಬಳಿಕ ಮಧ್ಯಂತರ ಪರಿಹಾರ ನೀಡಲು ಕ್ರಮವಹಿಸಲಾಗುತ್ತದೆ.
ಡಾ.ಭಾನುಪ್ರಕಾಶ್, ಜಂಟಿ ಕೃಷಿ ನಿರ್ದೇಶಕ, ಚಾಮರಾಜನಗರ