ಕೊಳ್ಳೇಗಾಲ ತಾಲೂಕಿನ ಮುಡಿಗುಂಡ ಗ್ರಾಮದ ನಿವಾಸಿ ಎಂ.ಎನ್ ಶಶಿಕಾಂತ್ ಅವರ ತೋಟ. 
ಚಾಮರಾಜನಗರ

ಪಂಚ ತರಂಗಿಣಿ ಕೃಷಿಯಲ್ಲಿ ಯಶಸ್ಸು

ಪ್ರಮುಖ ಮುಖ್ಯಾಂಶಗಳು

  • *ಮಾದರಿಯಾದ ಮುಡಿಗುಂಡದ ಎಂ.ಎನ್.ಶಶಿಕಾಂತ್
  • ಸಾವಯವ ಪದ್ಧತಿ ಅಳವಡಿಕೆ
ಕೊಳ್ಳೇಗಾಲ: ವಿನೂತನ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಹೆಚ್ಚಿನ ಆದಾಯ ಗಳಿಸುವುದರ ಜತೆಗೆ ಮಣ್ಣಿನ ಆರೋಗ್ಯವನ್ನೂ ಕಾಪಾಡಿಕೊಂಡಿರುವ ಇಲ್ಲೊಬ್ಬ ರೈತ ಪಂಚ ತರಂಗಿಣಿ ಮಾದರಿ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ.
ಪಟ್ಟಣದ ಮುಡಿಗುಂಡ ಗ್ರಾಮದ ಮಿಲ್ಟ್ರಿ ನಾಗರಾಜಯ್ಯ ಅವರ ಪುತ್ರ ಡಿಪ್ಲೊಮಾ ಮೆಕಾನಿಕಲ್ ಮತ್ತು ಇಂಡಸ್ಟ್ರಿಯಲ್ ಇಂಜಿನಿಯರ್ ಪದವೀಧರ ಎಂ.ಎನ್.ಶಶಿಕಾಂತ್ ಕೃಷಿಯಡೆಗೆ ಮುಖ ಮಾಡಿ ಯಶ ಕಂಡಿದ್ದಾರೆ.
ಸಾವಯವ ಪದ್ಧತಿಯನ್ನು ಅಳವಡಿಸಿಕೊಂಡು ಕಳೆದ 9 ವರ್ಷಗಳಿಂದ ಯಾವುದೇ ರಾಸಾಯನಿಕವನ್ನು ಜಮೀನಿಗೆ ಹಾಕದೆ ಜೀವಾಮೃತ, ಕೊಟ್ಟಿಗೆ ಗೊಬ್ಬರ ಸೇರಿದಂತೆ ಇತರ ಸಾವಯವ ಗೊಬ್ಬರಗಳ ನೆರವಿನಿಂದ ಬೆಳೆಗಳನ್ನು ಫೋಷಣೆ ಮಾಡಿ ಮಗುವಿನಂತೆ ಸಲಹುತ್ತಿದ್ದಾರೆ. ಇವರ ಬಳಿಯಿರುವ ಎರಡೂವರೆ ಎಕರೆ ಜಮೀನಿನ ಪೈಕಿ ಅರ್ಧ ಎಕರೆಯಲ್ಲಿ ಪಂಚ ತರಂಗಿಣಿ (ಕೃಷಿ ಪಂಚಾಮೃತ) ವಿಧಾನದಲ್ಲಿ ಪರಿಸರ ಸ್ನೇಹಿ ಕೃಷಿ ಮಾಡಿರುವುದು ನೋಡುವುದಕ್ಕೆ ಎರಡು ಕಣ್ಣು ಸಾಲದು. ತೆಂಗು, ಅಡಿಕೆ, ಜಾಯಿಕಾಯಿ, ಕೋ ಕೋ ಬೆಳೆದಿದ್ದಾರೆ.
ಇದೀಗ ಮೆಣಸನ್ನು ಹಾಕುವ ಕಾಯಕ ಪ್ರಗತಿಯಲ್ಲಿದೆ. ಪ್ರತ್ಯೇಕ 2 ಎಕರೆಯಲ್ಲಿ ಐಡೆನ್ಸಿಟಿ ಪ್ಲ್ಯಾಟಿಂಗ್ ಮಾದರಿಯಲ್ಲಿ 5 ಸಾಲು ನಿರ್ಮಿಸಿ ಪ್ರಮುಖ ಬೆಳೆಯಾದ ತೆಂಗು, ಬಟರ್ ಫುಟ್ ಬೆಳೆದಿದ್ದಾರೆ. ಅಡಕೆ ಮತ್ತು ಕೋ ಕೋ ನರ್ಸರಿ ಕೂಡ ಇದೆ. ಕಡಿಮೆ ನೀರಿನ ಬಳಕೆ ವಿಧಾನದಲ್ಲಿ ತೋಟಕ್ಕೆ ಸ್ಪ್ರಿಂಕ್ಲರ್ ವ್ಯವಸ್ಥೆಯಡಿ ನೀರುಣಿಸುತ್ತಿದ್ದಾರೆ.
ಒಂದೇ ಸೂರಿನಲ್ಲಿ ವಿವಿಧ ಬೆಳೆಗಳು
ಒಂದೇ ಸೂರಿನಡಿ ಹಲವು ಮರ, ಹಣ್ಣಿನ ಗಿಡಗಳನ್ನು ವ್ಯವಸ್ಥೆವಾಗಿ ಬೆಳೆದಿದ್ದಾರೆ. 50 ಜಾಯಿಕಾಯಿ ಗಿಡಗಳು, 200 ಕೋ ಕೋ ಗಿಡಗಳು, 180 ಅಡಕೆ, 180 ತೆಂಗು, 100 ಮಾವು, 120 ಬಟರ್ ಫುಟ್, ಬಂಡೋಲಿ ನೆರಳೆ, ಏಲಕ್ಕಿ, ಕಿತ್ತಲೆ, ಮೂಸಂಬಿ, ಲಿಚ್ಚಿ, ರಂಬೂಟನ್, ನಲ್ಲಿಕಾಯಿ, 200 ನಿಂಬೆ, ಚೆರಿ ಸೀಬೆ, ವಾಟರ್ ಆಪಲ್, ಚಕೋತ, ವಿಯತ್ನಮ್ ತಳಿಯ ಹಲಸು, ರಾಮಫಲ, ಸೀತಾ ಫಲ, ಆಪಲ್ ಬೇರು, ಸ್ಟಾರ್ ಫ್ರೂಟ್, ಸಿಲ್ವರ್ ಮರಗಳು ಬೆಳೆಯಲಾಗಿದೆ.
ಸೋಲರ್ ಟ್ರ್ಯಾಪ್ಟ್ ಅಳವಡಿಕೆ: ರಾತ್ರಿ ವೇಳೆ ಬೆಳೆಗೆ ಮಾರಕವಾಗುವ ಕ್ರಿಮಿಕೀಟಗಳ ಕಡಿವಾಣಕ್ಕೆ ಸೋಲರ್ ಟ್ರ್ಯಾಪ್ಟ್ ಅನ್ನು ಅಳವಡಿಸಿದ್ದಾರೆ. ರಾತ್ರಿ 7 ಗಂಟೆಯಾಗುತ್ತಿದಂತೆ ಸೋಲರ್ ಟ್ರ್ಯಾಪ್ ಅಲ್ಲಿ ಬೆಳಗುವ ನೀಲಿ ಬಣ್ಣದ ದೀಪ ಶತ್ರು ಕೀಟಗಳನ್ನು ಆಕರ್ಷಿಸುತ್ತದೆ. ದೀಪ ಬೆಳಕಿಗೆ ಬಂದ ಕೀಟಗಳು ಕೆಳಗಿರುವ ನೀರಿಗೆ ಬಿದ್ದು ಸಾಯುತ್ತದೆ.
ಐದು ಜಾತಿ ತೆಂಗು-ಮಾವು: ತೋಟದಲ್ಲಿ ಚೌಘಾಟ್ ಆರೆಂಜ್ ಡ್ವಾರ್ಫ್, ಮಲೇಶಿಯಾ ಆರೆಂಜ್ ಡ್ವಾರ್ಫ್, ಎಂಒಡಿ, ಸಿಒಡಿ, ಡಿ ಇನ್ಟು ಟಿ ತಳಿಯ ತೆಂಗಿನ ಮರಗಳಿದೆ. ಮಲ್ಲಿಕಾ, ಇಮಾಮ್ ಪಸಂದ್, ದಾಶೇರಿ, ಆಲ್ ಫನ್ ಸೊ, ರಸಪುರಿ ಸೇರಿದಂತೆ 5 ತಳಿಯ ಮಾವಿನ ಮರಗಳಿದೆ. ಬೆಳೆಗಳ ನಡುವೆ ತೋಟಗಾರಿಕೆ ಯೋಜನೆಯ ಕೀರು ಜೇನು ಸಾಕಣೆ ಮಾಡುತ್ತಿದ್ದಾರೆ.
ಜೀವಾಮೃತ ತಯಾರಿಕೆ:3,000 ಲೀ ಸಾಮಾರ್ಥ್ಯದ ಟ್ಯಾಂಕ್‌ನಲ್ಲಿ ಗಂಜಲ, ಸಗಣಿ, ಅಕ್ಕಿ ಬಸಿದ ನೀರು, ಮಜ್ಜಿಗೆ, ಗಂಜಿ, ವೇಸ್ಟ್ ಡಿ ಕಂಪೋಸರ್, ಬೆಲ್ಲ, ಹಣ್ಣಿನ ರಸವನ್ನು ಸುರಿದು 3 ತಿಂಗಳ ಕಾಲ ಮುಚ್ಚಲಾಗುವುದರಿಂದ ವಿಭಜನೆ ಪ್ರಕ್ರಿಯೆ ನಡೆದು ದ್ರವ ರೂಪದ ಅನರೋಬಿಕ್ ಜೀವಾಮೃತ ತಯಾರಾಗುತ್ತದೆ. ಈ ನೀರಿನಲ್ಲಿ ಅಧಿಕ ಪೋಷಕಾಂಶ ಉತ್ಪಾದನೆಯಾದ ಬಳಿಕ ಅದನ್ನು ಬೆಳೆಗಳಿಗೆ ಸ್ಪ್ರಿಂಕ್ಲರ್ ಮೂಲಕ ಹರಿಸಲಾಗುತ್ತದೆ. ಪ್ರತಿ 10 ದಿನಕ್ಕೆ ಬಿಡಲಾಗುತ್ತದೆ. ಅಂತೆಯೇ ಪ್ರತ್ಯೇಕ ಟ್ಯಾಂಕ್‌ಗಳಲ್ಲಿ ಆರ್ಗಾನಿಕ್ ಬಯೋ ಕನ್ಸಟಿಯಮ್, ವರ್ಮಿ ಕಾಂಪೋಸ್ವ್, ವರ್ಮಿ ವಾಶ್ ತಯಾರಿಸಿ ಗೊಬ್ಬರವಾಗಿ ಬಳಸಲಾಗುತ್ತದೆ. ಇದರೊಂದಿಗೆ ದನದ ಗೊಬ್ಬರ, ಕುರಿಗೊಬ್ಬರ ನೀಡಲಾಗುತ್ತದೆ. ಇನ್ನು ಕಳೆಯನ್ನು ಜಮೀನಿನಲ್ಲಿ ಕೊಳೆಸಲಾಗುತ್ತದೆ. ಇದು ಮಣ್ಣಿನ ಫಲವತ್ತತೆ ಹೆಚ್ಚಿಸಲು ಸಹಕಾರಿಯಾಗಿದೆ.
ಗ್ರಾಹಕರಿಗೆ ನೇರ ಮಾರಾಟ: ತೋಟದಲ್ಲಿ ಬೆಳೆದ ಬಟರ್‌ಫ್ರೂಟ್, ಮಾವು ಇರ ಹಣ್ಣುಗಳನ್ನು ನೇರವಾಗಿ ಗ್ರಾಹಕಕರಿಗೆ ಮಾರಾಟ ಮಾಡುತ್ತಾರೆ. ಬೆಂಗಳೂರು, ಮೈಸೂರು ಸೇರಿದಂತೆ ಸ್ಥಳೀಯ ಗ್ರಾಹಕರಿಂದ ಬೇಡಿಕೆ ಹೆಚ್ಚಿದೆ. ಪ್ರತಿ ತಿಂಗಳು ಬಟರ್ ಫ್ರೂಟ್ ಮತ್ತು ಎಳನೀರು ಮಾರಾಟ ಹೆಚ್ಚಿನ ಆದಾಯ ನೀಡುತ್ತಿದೆ.