ಸುಬ್ಬೇದೇವರು ಸ್ವಾಮೀಜಿ ಕೃತಿ
ಹನೂರು: ತಾಲೂಕಿನ ರಾಮಾಪುರದ ಗೋಪಿಶೆಟ್ಟಿಯೂರಿನ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದಲ್ಲಿ ಏ.28 ರಂದು ಶ್ರೀ ಸುಬ್ಬೇದೇವರು ಸ್ವಾಮೀಜಿ ಅವರ 17ನೇ ಪುಣ್ಯಸ್ಮರಣೆ ಅಂಗವಾಗಿ ಕಂತೆ ಭಿಕ್ಷಾ ಕಾಯಕ ಸಂತ ಶ್ರೀ ಸುಬ್ಬೇದೇವರು ಸ್ವಾಮೀಜಿ ಕೃತಿ ಬಿಡುಗಡೆ ಹಾಗೂ ಧಾರ್ಮಿಕ ಸಮಾರಂಭ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 6 ಗಂಟೆಗೆ ಸುಬ್ಬೇದೇವರು ಸ್ವಾಮೀಜಿ ಅವರ ಗದ್ದುಗೆಗೆ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ನಡೆಯಲಿದೆ. 8 ಗಂಟೆಗೆ ಷಟ್‌ಸ್ಥಳ ಧ್ವಜಾರೋಹಣ ನೆರವೇರಲಿದೆ. ಮಧ್ಯಾಹ್ನ 3 ಗಂಟೆಗೆ ನಡೆಯುವ ಧಾರ್ಮಿಕ ಸಮಾರಂಭದಲ್ಲಿ ಕೃತಿ ಬಿಡುಗಡೆಯಾಗಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನಕಪುರ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ವಹಿಸಲಿದ್ದಾರೆ.
ಮಲೆಮಹದೇಶ್ವರ ಬೆಟ್ಟ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ದಿವ್ಯಸಾನ್ನಿಧ್ಯ ವಹಿಸಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಸಮಾಜ ಸೇವಕ, ಉದ್ಯಮಿ ನಿಶಾಂತ್ ಕಾರ್ಯಕ್ರಮ ಉದ್ಘಾಟಿಸಲಿದ್ದು ಶ್ರೀ ಮಠದ ಸೋಮಶೇಖರ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಕಂತೆ ಭಿಕ್ಷಾ ಕಾಯಕ ಸಂತ ಸುಬ್ಬೇದೇವರು ಕೃತಿಯ ಕರ್ತೃ, ಪತ್ರಕರ್ತ ದೊಡ್ಡನಹುಂಡಿ ರಾಜಣ್ಣ ಭಾಗವಹಿಸಲಿದ್ದಾರೆ.
ಸಂಜೆ 7 ಗಂಟೆಗೆ ದೇವನೂರು ಶ್ರೀ ಮನ್ನಿರಂಜನ ಗುರುಮಲ್ಲೇಶ್ವರ ದಾಸೋಹ ಮಠದ ಅಧ್ಯಕ್ಷ ಶ್ರೀ ಮಹಾಂತ ಸ್ವಾಮೀಜಿ ಅವರ ಪಾದಪೂಜೆ ನೆರವೇರಲಿದೆ. ಬೆಳಗ್ಗೆಯಿಂದ ಸಂಜೆವರೆಗೆ ಗೋಪಿಶೆಟ್ಟಿಯೂರು ಹಾಗೂ ಗೆಜ್ಜಲನತ್ತ ಗ್ರಾಮದ ಶ್ರೀ ಬಸವದಳ ಭಜನಾ ತಂಡದಿಂದ ಭಜನೆ ಕಾರ್ಯಕ್ರಮ ನಡೆಯಲಿದೆ. ಸಂಜೆ ಮಠದ ವತಿಯಿಂದ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿದೆ ಎಂದು ಶ್ರೀ ಮಠದ ಸೋಮಶೇಖರ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.