ಹನೂರಿನ ಜಿ.ವಿ ಗೌಡ ಸರ್ಕಾರಿ ಪ್ರೌಢಶಾಲೆಯಲ್ಲಿ ಬಿಇಒ ಪ್ರತಿಭಾ ಅವರು ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಿದರು. ವೆಂಕಟೇಶ್, ಸುರೇಶ್, ಶಾಂತರಾಜು, ಮಹದೇವ ಇತರರಿದ್ದರು.
- ಬಿಇಒ ಪ್ರತಿಭಾ ಸಲಹೆ
- ನೋಟ್ ಬುಕ್ ಸಾಂಕೇತಿಕ ವಿತರಣಾ ಕಾರ್ಯಕ್ರಮ
ಹನೂರು: ವಿದ್ಯಾರ್ಥಿಗಳು ಓದಿಗೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿಯೇ ಹನೂರು ಶೈಕ್ಷಣಿಕ ವಲಯ ಪ್ರಥಮ ಸ್ಥಾನ ಪಡೆಯಬೇಕು ಎಂದು ಬಿಇಒ ಪ್ರತಿಭಾ ತಿಳಿಸಿದರು.
ಪಟ್ಟಣದ ಜಿ.ವಿ. ಗೌಡ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಬೆಂಗಳೂರು ಸಿನೋಂಸಿಸ್ ಸಂಸ್ಥೆ ವತಿಯಿಂದ ತಾಲೂಕಿನ ಎಲ್ಲ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ಸಾಂಕೇತಿಕ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಬಿಸಿಯೂಟ ಸೇರಿದಂತೆ ಅನೇಕ ಸವಲತ್ತುಗಳನ್ನು ನೀಡುತ್ತಿದೆ. ಅಲ್ಲದೇ ಸ್ವಯಂ ಸೇವಾ ಸಂಸ್ಥೆಗಳು ಸಹ ಸವಲತ್ತುಗಳನ್ನು ನೀಡುವುದರ ಮೂಲಕ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುತ್ತಿದ್ದು, ಮಕ್ಕಳ ಕಲಿಕೆಗೆ ವರದಾನವಾಗಿದೆ. ಸಿನೋಂಸಿಸ್ ಸಂಸ್ಥೆಯು ತಾಲೂಕಿನ ಎಲ್ಲ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಿಸುತ್ತಿರುವುದು ನಿಜಕ್ಕೂ ಸಂತಸದ ವಿಷಯ. ಆದ್ದರಿಂದ ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆದುಕೊಂಡು ಓದಿನ ಜತೆಗೆ ಬರವಣಿಗೆಗೆಗೂ ಹೆಚ್ಚಿನ ಒತ್ತು ನೀಡಬೇಕು. ಇನ್ನು ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹನೂರು ವಲಯ ಜಿಲ್ಲೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದೆ. ಆದ್ದರಿಂದ ಪ್ರಥಮ ಸ್ಥಾನ ಪಡೆಯಬೇಕಾದರೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಿನತ್ತ ಗಮನಹರಿಸಬೇಕು ಎಂದು ತಿಳಿಸಿದರು.
ಶಿಕ್ಷಕ ಶಾಂತರಾಜು ಮಾತನಾಡಿ, ಗುಡ್ಡಗಾಡು ಪ್ರದೇಶದಿಂದ ಕೂಡಿರುವ ಹನೂರು ವಲಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಬಡ ಕುಟುಂಬದ ಮಕ್ಕಳು ಹೆಚ್ಚಾಗಿದ್ದಾರೆ. ಸಿನೋಂಸಿಸ್ ಸಂಸ್ಥೆ ಕಳೆದ 4 ವರ್ಷದಿಂದ ತಾಲೂಕಿನ ಎಲ್ಲ್ಲ ಪ್ರೌಢಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಿಸುತ್ತಿದೆ. ಜತೆಗೆ ಈ ಬಾರಿ ಚಾ.ನಗರ ಹಾಗೂ ಯಳಂದೂರಿನ ಕೆಲ ಆಯ್ದ ಸರ್ಕಾರಿ ಶಾಲೆಯ ಮಕ್ಕಳಿಗೂ ನೋಟ್ ಬುಕ್ ನೀಡುತ್ತಿರುವುದು ಶ್ಲಾಘನೀಯ ಎಂದರು.
ಪ್ರಾಂಶುಪಾಲ ಸುರೇಶ್, ಬಿಆರ್‌ಸಿ ವೆಂಕಟೇಶ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಚಂದ್ರಶೇಖರ್, ಶಿಕ್ಷಣ ಸಂಯೋಜಕ ಅಶೋಕ್, ಮುಖ್ಯ ಶಿಕ್ಷಕ ಮಹದೇವ, ಶಿಕ್ಷಕರಾದ ಶ್ರೀನಿವಾಸನಾಯ್ಡು, ಲೋಕೇಶ್, ಪ್ರದೀಪ್, ರವಿ ಇನ್ನಿತರರಿದ್ದರು.