ಸಂದನಪಾಳ್ಯ ಸಂತ ಅಂಥೋಣಿ ಶಾಲೆಯ ವಿದ್ಯಾರ್ಥಿಗಳು ನೀರಿನ ಸೌಕರ್ಯವನ್ನು ಕಲ್ಪಿಸುವಂತೆ ಪ್ರತಿಭಟನೆ ನಡೆಸಿದರು.
ಹನೂರು : ಬಿಸಿಯೂಟಕ್ಕೂ ನೀರಿನ ಸಮಸ್ಯೆ ಎದುರಾಗಿರುವ ಹಿನ್ನಲೆಯಲ್ಲಿ ಮಂಗಳವಾರ ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂದನಪಾಳ್ಯ ಸಂತ ಅಂಥೋಣಿ ಶಾಲೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಅನುದಾನಿತ ಶಾಲೆಯಾದ ಇಲ್ಲಿ ಕಳೆದ 6 ತಿಂಗಳಿನಿಂದಲೂ ಕುಡಿಯುವ ನೀರಿನ ಸಮಸ್ಯೆ ಇದ್ದು, ಇದೀಗ ತೀವ್ರವಾದ ಹಿನ್ನಲೆ ಬಿಸಿಯೂಟ ತಯಾರಿಕೆಗೂ ನೀರಿಲ್ಲದ ಪರಿಣಾಮ ವಿದ್ಯಾರ್ಥಿಗಳು ಫಾದರ್ ಜತೆಗೂಡಿ ಪ್ರತಿಭಟನೆ ಹಾದಿಯನ್ನು ಹಿಡಿದರು.
ಶಾಲಾ ಆವರಣದಿಂದ ನೀರಿನ ಬಾಟಲಿ, ಖಾಲಿ ಬಿಂದಿಗೆಯೊಂದಿಗೆ ಫಲಕವನ್ನು ಹಿಡಿದು ಹೊರಟ ವಿದ್ಯಾರ್ಥಿಗಳು ಗ್ರಾಮಕ್ಕೆ ನೀರು ಕೊಡಿ ಎಂದು ಘೋಷಣೆ ಕೂಗುತ್ತಾ ಗ್ರಾಮದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಕುಡಿಯುವ ನೀರಿಗಾಗಿ ವಿದ್ಯಾರ್ಥಿಗಳು ಪ್ರತಿಭಟನೆ ಹಾದಿ ಹಿಡಿದಿರುವ ಪರಿಸ್ಥಿತಿ ಎದುರಾಗಿದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸಲು ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಪೋಷಕರು ಹಾಗೂ ಗ್ರಾಮಸ್ಥರು ತೀವ್ರ ಅಸಾಮಾಧಾನ ವ್ಯಕ್ತಪಡಿಸಿದರು. ಸಂಬಂಧಪಟ್ಟ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ ಕುಡಿಯುವ ನೀರಿಗೆ ಶಾಶ್ವತ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಈ ಸಂಬಂಧ ಬಿಇಒ ಪ್ರತಿಭಾ ವಿಜಯವಾಣಿಯೊಂದಿಗೆ ಮಾತನಾಡಿ, ಶಾಲೆಯಲ್ಲಿ ನೀರಿನ ಸಮಸ್ಯೆ ಇರುವುದು ಈವರೆಗೂ ನಮ್ಮ ಗಮನಕ್ಕೆ ತಂದಿಲ್ಲ. ಅಂತಹದರಲ್ಲಿ ಶಾಲಾ ಮಕ್ಕಳನ್ನು ಸಮವಸ್ತ್ರದೊಂದಿಗೆ ಪ್ರತಿಭಟನೆಯಲ್ಲಿ ತೊಡಗಿಸಿರುವುದು ಸರಿಯಲ್ಲ. ಹಾಗಾಗಿ ಈ ಬಗ್ಗೆ ಶಾಲಾ ಆಡಳಿತ ಮಂಡಳಿಗೆ ಕಾರಣ ಕೇಳಿ ನೋಟಿಸ್ ನೀಡ ಲಾಗುವುದು. ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೆ ಗ್ರಾಪಂ ಅಧಿಕಾರಿಗೊಂದಿಗೆ ಚರ್ಚಿಸಿ ಟ್ಯಾಂಕರ್ ಮೂಲಕ ನೀರಿನ ಸೌಕರ್ಯ ಕಲ್ಪಿಸಿ ಕೊಡುವುದಾಗಿ ತಿಳಿಸಿದರು.