ಮಾರ್ಟಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಶಾಸಕ ಎಂ.ಆರ್ ಮಂಜುನಾಥ್ ಮಾತನಾಡಿದರು. ದಿನೇಶ್‌ಕುಮಾರ್ ಮೀನಾ, ಮಹೇಶ್, ಭಾಸ್ಕರ್, ರಘುಪತಿ ಇತರರಿದ್ದರು.  
ಚಾಮರಾಜನಗರ

ಗ್ರಾಮಗಳಿಗೆ ನೀರಾವರಿ ಸೌಕರ್ಯ ಕಲ್ಪಿಸಲು ಕ್ರಮ

ಪ್ರಮುಖ ಮುಖ್ಯಾಂಶಗಳು

  • 490 ಕೋಟಿ ರೂ. ವೆಚ್ಚದಲ್ಲಿ ಡಿಪಿಆರ್ ಸಿದ್ಧ
  • ಶಾಸಕ ಎಂ.ಆರ್. ಮಂಜುನಾಥ್ ಭರವಸೆ
ಹನೂರು: ರಾಮಾಪುರ ಹೋಬಳಿ ಭಾಗಕ್ಕೆ ನೀರಾವರಿ ಸೌಕರ್ಯವನ್ನು ಒದಗಿಸುವ ಉದ್ದೇಶದಿಂದ 490 ಕೋಟಿ ರೂ. ವೆಚ್ಚದಲ್ಲಿ ಡಿಪಿಆರ್ ಸಿದ್ಧವಾಗಿದ್ದು, ಅನುದಾನಕ್ಕಾಗಿ ಅಗತ್ಯ ಕ್ರಮವಹಿಸಲಾಗಿದೆ ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.
ತಾಲೂಕಿನ ಮಾರ್ಟಳ್ಳಿ ಗ್ರಾಮದ ಚರ್ಚ್ ಆವರಣದಲ್ಲಿ ಭಾನುವಾರ ನೀರಾವರಿ ಯೋಜನೆ ಅನುಷ್ಠಾನ ಸಂಬಂಧ ಆಯೋಜಿಸಿದ್ದ ಗ್ರಾಮಸ್ಥರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಎಚ್.ಡಿ ಕೋಟೆ, ಪಿರಿಯಪಟ್ಟಣ, ಚಾ.ನಗರ, ಗುಂಡ್ಲುಪೇಟೆ ಕೊಳ್ಳೇಗಾಲ ಹಾಗೂ ಇನ್ನಿತರ ವಿಧಾನಸಭಾ ಕ್ಷೇತ್ರಕ್ಕೆ ಹೋಲಿಸಿದರೆ ಹನೂರು ಕ್ಷೇತ್ರ ಅರಣ್ಯ ಪ್ರದೇಶದೊಂದಿಗೆ ಜನವಸತಿ ಪ್ರದೇಶವಿದ್ದು, ವಿಭಿನ್ನವಾಗಿದೆ. ಕ್ಷೇತ್ರದಲ್ಲಿ ನೀರಿನದ್ದೇ ಒಂದು ಸಮಸ್ಯೆಯಾಗಿದ್ದು, ಸವಾಲಾಗಿ ಪರಿಣಮಿಸಿದೆ. ಮಾರ್ಟಳ್ಳಿ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಈ ದೆಸೆಯಲ್ಲಿ ಕ್ರಮವಹಿಸಲಾಗಿದ್ದು, ಹಾಲೇರಿ ಕೆರೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ಈ ಭಾಗದ ಹಳ್ಳಗಳಿಗೆ ನೀರು ಹರಿಸಲು ಈಗಾಗಲೇ ಕ್ರಮವಹಿಸಲಾಗಿದೆ. ಜತೆಗೆ ಮಳೆಗಾಲದ ವೇಳೆ ಇಲ್ಲಿನ ನೀರು ವ್ಯರ್ಥವಾಗಿ ತಮಿಳುನಾಡಿನ ಪಾಲಾರ್‌ಗೆ ಹರಿಯುವುದನ್ನು ತಡೆಗಟ್ಟಲು ಅಲ್ಲಲ್ಲಿ ಚೆಕ್ ಡ್ಯಾಂ ನಿರ್ಮಿಸಲು ಈಗಾಗಲೇ ಯೋಜನೆ ರೂಪಿಸಲಾಗಿದೆ. ಇನ್ನು 291 ಹಳ್ಳಿಗಳಿಗೆ ಕಾವೇರಿ ಕುಡಿಯುವ ನೀರು ಒದಗಿಸುವ ಜೆಜೆಎಂ ಕಾಮಗಾರಿ ಶೇ.75ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಇನ್ನುಳಿದ ಕಾಮಗಾರಿ ಕೈಗೊಳ್ಳಲು ಅರಣ್ಯ ಇಲಾಖೆಯ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
490 ಕೋಟಿ ರೂ. ವೆಚ್ಚದಲ್ಲಿ ಡಿಪಿಆರ್ ಸಿದ್ಧ: ಉಡುತೊರೆ ಹಳ್ಳ ಜಲಾಶಯಕ್ಕೆ ಹಾಗೂ ರಾಮಾಪುರ ಹೋಬಳಿ ವ್ಯಾಪ್ತಿಯ ಕೆರೆಗಳಿಗೆ ಕಾವೇರಿ ನದಿಯಿಂದ ನೀರು ತುಂಬಿಸಲು ಯೋಜನೆಯೊಂದನ್ನು ರೂಪಿಸಲಾಗಿದ್ದು, 490 ಕೋಟಿ ರೂ. ವೆಚ್ಚದಲ್ಲಿ ಡಿಪಿಆರ್ ಸಿದ್ಧಪಡಿಸಲಾಗಿದೆ. ಕ್ಯಾಬಿನೆಟ್‌ನಲ್ಲಿ ಅನುಮೋದನೆಯಾಗಬೇಕಿದೆ. ಈ ಸಂಬಂಧ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ, ನೀರಾವರಿ ಸಚಿವರು ಹಾಗೂ ಸಂಸದರ ಗಮನಕ್ಕೆ ತರಲಾಗಿದ್ದು, ಅಗತ್ಯ ಕ್ರಮವಹಿಸಲಾಗಿದೆ. ಹಾಗಾಗಿ ಮಾರ್ಟಳ್ಳಿ ಭಾಗಕ್ಕೆ ನೀರಾವರಿ ಸೌಕರ್ಯವನ್ನು ಒದಗಿಸಲು ಇನ್ನಿಲ್ಲದ ಪ್ರಯತ್ನ ನಡೆಸಲಾಗಿದೆ. ಜತೆಗೆ ಇಡೀ ಕ್ಷೇತ್ರಕ್ಕೆ ನೀರಾವರಿ ಸೌಕರ್ಯಕ್ಕಾಗಿ 980 ಕೋಟಿ ರೂ. ವೆಚ್ಚದಲ್ಲಿ ಡಿಪಿಆರ್ ಸಿದ್ಧವಾಗಿದ್ದು, ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಶಾಸಕರು ತಿಳಿಸಿದರು.
ಇದಕ್ಕೂ ಮೊದಲು ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಜನರು ಯಾವುದೇ ಮಾರ್ಗದಲ್ಲಾರೂ ಸರಿಯೇ ಒಟ್ಟಿನಲ್ಲಿ ಈ ಭಾಗದ ಕೆರೆಗಳಿಗೆ ಕಾವೇರಿ ನದಿ ನೀರನ್ನು ತುಂಬಿಸಬೇಕು ಎಂದು ಒಕ್ಕೊರಲಿನಿಂದ ಒತ್ತಾಯಿಸಿ ಮನವಿ ಸಲ್ಲಿಸಿದರು.
ಉಪ ವಿಭಾಗಾಧಿಕಾರಿ ದಿನೇಶ್‌ಕುಮಾರ್ ಮೀನಾ, ಡಿಸಿಎಫ್ ಭಾಸ್ಕರ್, ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಮಹೇಶ್, ಸೂಪರಿಂಟೆಂಡೆಂಟ್ ಇಂಜಿನಿಯರ್ ರಘುಪತಿ, ಇಇ ಉಮೇಶ್, ಎಇಇ ರಾಮಕೃಷ್ಣ, ಚರ್ಚ್ ಫಾದರ್ ಡಾ.ವಿನ್ಸೆಂಟ್ ಇನ್ನಿತರರು ಇದ್ದರು.