- ಏ.24, 25 ಮತ್ತು 26 ರಂದು ವಿಶ್ವಕರ್ಮ ವಧು-ವರ ಅನ್ವೇಷಣಾ ಸಮಾವೇಶ-2026
- ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ವತಿಯಿಂದ ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ
ಚಾಮರಾಜನಗರ: ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ವತಿಯಿಂದ ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಏ.24, 25 ಮತ್ತು 26 ರಂದು ವಿಶ್ವಕರ್ಮ ವಧು-ವರ ಅನ್ವೇಷಣಾ ಸಮಾವೇಶ-2026 ಆಯೋಜಿಸಲಾಗಿದೆ ಎಂದು ವಿಶ್ವಕರ್ಮ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಆಚಾರಿ ತಿಳಿಸಿದರು.
ಮಹಾಸಭಾ ರಾಜ್ಯ ಅಧ್ಯಕ್ಷ ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರ ಅಧ್ಯಕ್ಷತೆಯಲ್ಲಿ ಸಮಾಜದ ಸ್ವಾಮೀಜಿಗಳ ದಿವ್ಯ ಸಾನಿಧ್ಯ ಹಾಗೂ ರಾಜ್ಯ ಉಪಾಧ್ಯಕ್ಷ ಬಸವರಾಜು ಕದಲೂರು ಮತ್ತು ಅಶೋಕ್ ಪುತ್ತರ್ ಹಾಗೂ ಸಮಾಜದ ಮುಖಂಡರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ರಾಜ್ಯದ ಎಲ್ಲ ಜಿಲ್ಲೆ, ತಾಲೂಕು, ಹೋಬಳಿ ಮತ್ತು ಗ್ರಾಮಾಂತರ ಪ್ರದೇಶಗಳಿಂದ ವಿಶ್ವಕರ್ಮ ಸಮುದಾಯದವರು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಭಾಗವಹಿಸಬೇಕು. ಈ ವಧು-ವರ ಸಮಾವೇಶಕ್ಕೆ ಚಾಮರಾಜನಗರ ಜಿಲ್ಲೆಯ ಸಮಾಜದ ಬಂಧುಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕೋರಿದರು. ವಿಧವೆಯರು ಮತ್ತು ವಿದುರರು, ವಿಚ್ಛೇದಿತರರಿಗೂ ಅವಕಾಶ ಕಲ್ಪಿಸಲಾಗಿದೆ ಎಂದರು.
ಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ನಾಗೇಂದ್ರ ಆಚಾರ್, ಹರದನಹಳ್ಳಿ ಹೋಬಳಿ ಅಧ್ಯಕ್ಷ ಸುಬ್ರಹ್ಮಣ್ಯಚಾರಿ, ಉಪಾಧ್ಯಕ್ಷ ಚೆನ್ನಾಚಾರ್, ಹರವೆ ಹೋಬಳಿ ಅಧ್ಯಕ್ಷ ಟಿ.ಕೆ.ವಾಸು, ಚಂದಕವಾಡಿ ಹೋಬಳಿ ಅಧ್ಯಕ್ಷ ಆರ್.ಕೆಂಪರಾಜು ಇದ್ದರು.