ಚಾಮರಾಜನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಡಾ.ನವೀನ್‌ಮೌರ್ಯ ಮಾತನಾಡಿದರು.
- ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಡಾ.ನವೀನ್‌ಮೌರ್ಯ ಆಗ್ರಹ
- ಗ್ಯಾರಂಟಿ ಯೋಜನೆಗಳಿಗೆ ಎಸ್ಸಿಎಸ್ಪಿ, ಟಿಎಸ್ಪಿ ಅನುದಾನ ಬಳಸದಂತೆ ಒತ್ತಾಯ
- ದಲಿತರಿಗೆ ಕಾಂಗ್ರೆಸ್ ಪಕ್ಷ ಅನ್ಯಾಯ ಮಾಡಿದೆ ಎಂದು ಆರೋಪ
ಚಾಮರಾಜನಗರ: ದಲಿತರ ಅನುದಾನ ದುರ್ಬಳಕೆಗೆ ಅವಕಾಶ ಮಾಡಿಕೊಡುತ್ತಿರುವ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಕಾಯ್ದೆಯ 7ಸಿ ಅನ್ನು ರದ್ದುಗೊಳಿಸಬೇಕು ಎಂದು ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಡಾ.ನವೀನ್‌ಮೌರ್ಯ ಆಗ್ರಹಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಸತತ 3 ವರ್ಷಗಳ ಕಾಲ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಎಸ್ಸಿಎಸ್ಪಿ, ಟಿಎಸ್ಪಿಯ ಸುಮಾರು 39 ಸಾವಿರ ಕೋಟಿ ರೂ, ಅನುದಾನವನ್ನು ಬಳಕೆ ಮಾಡಿಕೊಂಡಿದೆ. ಈ ಬಾರಿಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗಳಿಗೆ ಸುಮಾರು 15 ಸಾವಿರ ಕೋಟಿ ರೂ, ಅನುದಾನವನ್ನು ಬಳಕೆ ಮಾಡಿಕೊಡಿಕೊಳ್ಳಲು ಮುಂದಾಗಿರುವುದು ಖಂಡನೀಯ. ಈ ನಿಟ್ಟಿನಲ್ಲಿ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಕಾಯ್ದೆಯ 7ಸಿ ಅನ್ನು ರದ್ದುಗೊಳಿಸಿ, ದಲಿತರ ಮೀಸಲು ನಿಧಿಗೆ ಕನ್ನ ಹಾಕುವುದನ್ನು ತಪ್ಪಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸಂವಿಧಾನ, ಅಂಬೇಡ್ಕರ್ ಹಾಗೂ ದಲಿತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದರೂ, ದಲಿತರ ಮೀಸಲು ಹಣವನ್ನು ಗ್ಯಾರಂಟಿ ಮತ್ತು ಇನ್ನಿತರೆ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಳ್ಳುತ್ತಿದೆ. 2023-24 ನೇ ಸಾಲಿನಲ್ಲಿ 11 ಸಾವಿರ ಕೋಟಿ, 2024-25 ನೇ ಸಾಲಿನಲ್ಲಿ 14 ಸಾವಿರ ಕೋಟಿ ಹಾಗೂ 2025-26 ನೇ ಸಾಲಿನಲ್ಲಿ 13 ಸಾವಿರ ಕೋಟಿ ರೂ, ದಲಿತರ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡಿದೆ. 2025-26 ನೇ ಸಾಲಿನಲ್ಲೇ 18 ಸಾವಿರ ಕೋಟಿ ಅನುದಾನ ಖರ್ಚಾಗದೇ ಉಳಿದಿದ್ದು, ದಲಿತರಿಗೆ ಕಾಂಗ್ರೆಸ್ ಪಕ್ಷ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.
ಈ ಬಾರಿಯ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಎಸ್ಸಿಎಸ್ಪಿ, ಟಿಎಸ್ಪಿ ಅನುದಾನವನ್ನು ಬಳಕೆ ಮಾಡಬಾರದು. ಸಂವಿಧಾನ ರಕ್ಷಣೆ ಅಭಿಯಾನಕ್ಕೆ ಎಸ್ಸಿಎಸ್ಪಿ, ಟಿಎಸ್ಪಿ ಯೋಜನೆಯ ಅನುದಾನ ಬಳಕೆ ಮಾಡದೇ, ಖಜಾನೆಯ ಹಣವನ್ನು ಬಳಕೆ ಮಾಡಬೇಕು. ಕಳೆದ 3 ವರ್ಷ ದುರ್ಬಳಕೆ ಮಾಡಿರುವ 39 ಸಾವಿರ ಕೋಟಿ ರೂ, ಹಣವನ್ನು ವಾಪಸ್ ನೀಡಬೇಕು. ಎಸ್ಸಿ, ಎಸ್ಟಿ ನಿಗಮಗಳಿಗೆ ತಲಾ ಒಂದು ಸಾವಿರ ಕೋಟಿ ರೂ, ಅನುದಾನವನ್ನು ೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೂಡ್ನಕೂಡು ಪ್ರಕಾಶ್ ಮಾತನಾಡಿ, ಈ ಬಾರಿಯ ಬಜೆಟ್‌ನಲ್ಲಿ ಎಸ್ಸಿಎಸ್ಪಿ, ಟಿಎಸ್ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿದರೇ, ಸಿಎಂ ಸಿದ್ದರಾಮಯ್ಯ ಮತ್ತು ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸುವ ಚಳುವಳಿ ಆರಂಭಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್, ಜಿಲ್ಲಾ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಲ್ಲೂರು ಪರಮೇಶ್ವರ್, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಚಂದ್ರು, ಪ್ರಧಾನ ಕಾರ್ಯದರ್ಶಿ ನಾಗರಾಜು, ಮುಖಂಡ ಮೂಡಹಳ್ಳಿ ಮೂರ್ತಿ, ಶಿವಣ್ಣ ರಾಮಸಮುದ್ರ ಹಾಜರಿದ್ದರು.