ಗುಂಡ್ಲುಪೇಟೆಯಲ್ಲಿ ಶ್ರೀ ಪಟ್ಟಲದಮ್ಮನವರ ಉತ್ಸವ ಮೂರ್ತಿಯನ್ನು ವಿವಿಧ ಕಲಾತಂಡಗಳೊಂದಿಗೆ ಮೆರವಣೆಗೆ ಮಾಡಲಾಯಿತು.
ಗುಂಡ್ಲುಪೇಟೆ: ಪಟ್ಟಣದ ಅಧಿದೇವತೆ ಶ್ರೀ ಪಟ್ಟಲದಮ್ಮನವರ ಜಾತ್ರಾ ಮಹೋತ್ಸವ ನಾಯಕ ಸಮುದಾಯದ ವತಿಯಿಂದ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಈ ಹಿನ್ನೆಲೆಯಲ್ಲಿ ಪಟ್ಟಣದ ಹೊರ ವಲಯದಲ್ಲಿರುವ ಶ್ರೀ ಪಟ್ಟಲದಮ್ಮನವರ ದೇವಾಲಯವನ್ನು ತಳಿರು, ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ದೇವಾಲಯದಲ್ಲಿ ಶನಿವಾರ ಬೆಳಗ್ಗೆಯಿಂದಲೇ ಅರ್ಚಕರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ಯಶಸ್ವಿಯಾಗಿ ನೆರವೇರಿದವು. ಪಟ್ಟಣ ಮತ್ತು ತಾಲೂಕಿನ ವಿವಿಧ ಕಡೆಗಳಿಂದ ಆಗಮಿಸಿದ್ದ ಭಕ್ತರು ಶನಿವಾರ ಬೆಳಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು. ನಂತರ ಪ್ರಸಾದ ವಿತರಿಸಲಾಯಿತು.
ಶ್ರೀ ಪಟ್ಟಲದಮ್ಮನವರ ದೇವಾಲಯ ಆವರಣದಲ್ಲಿ ಅಲಂಕೃತ ವಾಹನದಲ್ಲಿ ಶ್ರೀ ಪಟ್ಟಲದಮ್ಮನವರ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು. ನಂತರ ಮಕ್ಕಳ ಪೂರ್ಣಕುಂಭ, ಜತೆಗೆ ವಿವಿಧ ಕಲಾತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ನಾಯಕ ಸಮುದಾಯದ ಮುಖಂಡರು, ಯುವಕರು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.