ಗುಂಡ್ಲುಪೇಟೆ ತಾಲೂಕಿನ ಹೊಣಕನಪುರ ಗ್ರಾಮದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರೀ ಓಂಕಾರಸಿದ್ದೇಶ್ವರಸ್ವಾಮಿ ರಥೋತ್ಸವ ನಡೆಯಿತು. 
ಚಾಮರಾಜನಗರ

ಶ್ರೀ ಓಂಕಾರಸಿದ್ದೇಶ್ವರಸ್ವಾಮಿ ರಥೋತ್ಸವ

ಗುಂಡ್ಲುಪೇಟೆ: ತಾಲೂಕಿನ ಹೊಣಕನಪುರ ಗ್ರಾಮದ ಸಮೀಪದಲ್ಲಿ ಇರುವ ಶ್ರೀ ಓಂಕಾರ ಸಿದ್ದೇಶ್ವರಸ್ವಾಮಿ ಅವರ ಜಾತ್ರಾ ಮಹೋತ್ಸವ ಸೋಮವಾರ ಸಾವಿರಾರು ಭಕ್ತರ ಹರ್ಷೋದ್ಘಾರದ ನಡುವೆ ವಿಜೃಂಭಣೆಯಿಂದ ನಡೆಯಿತು.
ನಂಜನಗೂಡು ಮತ್ತು ಗುಂಡ್ಲುಪೇಟೆ ತಾಲೂಕಿನ 33 ಗ್ರಾವಗಳ ಜನರು ಸೇರಿ ನಡೆಸುತ್ತಿರುವ ಓಂಕಾರ ಸಿದ್ದೇಶ್ವರಸ್ವಾಮಿಯ ಜಾತ್ರೆಗೆ ತಾಲೂಕಿನಿಂದ ಅಲ್ಲದೆ ನೆರೆಯ ಮೈಸೂರು ಜಿಲ್ಲೆಯಿಂದಲೂ ಹೆಚ್ಚಿನ ಭಕ್ತರು ಆಗಮಿಸಿದ್ದರಿಂದ ಜಾತ್ರೆಮಾಳ ಜನರಿಂದ ಕಿಕ್ಕಿರಿದು ತುಂಬಿತ್ತು.
ಜಾತ್ರೆಗೆ ಸುತ್ತಮುತ್ತಲ ಗ್ರಾಮಗಳಾದ ಹೊರೆಯಾಲ, ಬೆಳಚಲವಾಡಿ, ಹೊಣಕನಪುರ, ಚನ್ನವಡೆಯನಪುರ, ಯಡವನಹಳ್ಳಿ, ಹೊಸಪುರ ಗ್ರಾಮಗಳ ರಥಗಳು ಹಾಗೂ ತೇರುಗಳನ್ನು ಎಳೆದು ತಂದರೆ ನಂಜನಗೂಡು ತಾಲೂಕಿನ ಕೂಗಲೂರು, ಕೃಷ್ಣಪುರ ಗ್ರಾಮಗಳವರು ತಮ್ಮ ಊರುಗಳ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ಮಧ್ಯಾಹ್ನದ ವೇಳೆಗೆ ವಾನನಗಳನ್ನು ದೇವಾಲಯದ ಆವರಣಕ್ಕೆ ತಂದರು.
ಎಲ್ಲ ಊರುಗಳ ತೇರು ಹಾಗೂ ವಾಹನಗಳು ದೇವಾಲಯದ ಆವರಣಕ್ಕೆ ಬಂದ ನಂತರ ಓಂಕಾರ ಸಿದ್ದೇಶ್ವರಸ್ವಾಮಿ ಉತ್ಸವ ಮೂರ್ತಿಯನ್ನು ಛತ್ರಿ-ಛಾಮರ, ತಮಟೆ, ಸತ್ತಿಗೆ ಬಿರುದು ಬಾವಲಿಗಳ ಸಮೇತ ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಿಸಿದರು. ಅದರ ಹಿಂಭಾಗದಲ್ಲಿ ಬೇರೆ ಬೇರೆ ಊರುಗಳಿಂದ ಬಂದಿದ್ದ ರಥಗಳು ಮತ್ತು ವಾಹನಗಳು ಮೂರ‌್ನಾಲ್ಕು ಬಾರಿ ಪ್ರದಕ್ಷಿಣೆ ಹಾಕುವುದು ಜಾತ್ರೆಯ ವಿಶೇಷ
ಬಿಗಿ ಬಂದೋಬಸ್ತ್: ಜಾತ್ರೆಗೆ ಸಾವಿರಾರು ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಬೇಗೂರು ಠಾಣೆಯ ಪೊಲೀಸರು ಸರ್ಕಲ್ ಇನ್‌ಸ್ಪೆಪೆಕ್ಟರ್ ಮೋಹಿತ್ ಸಹದೇವ್, ಸಬ್ ಇನ್‌ಪೆಕ್ಟರ್‌ಗಳಾದ ನವೀನ್ ಹಾಗೂ ಲೋಕೇಶ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಆಯೋಜಿಸಿದ್ದರು. ವಾಹನಗಳ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ಬೈಕ್‌ಗಳು ಹಾಗೂ ಕಾರುಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು.