ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ವಿಶ್ವಶಾಂತಿ ನಿಕೇತನ ಆಶ್ರಮಕ್ಕೆ ಗುರುವಾರ ಶಾಸಕ ಎ.ಆರ್.ಕೃಷ್ಣಮೂರ್ತಿ ಭೇಟಿ ನೀಡಿ ಇಲ್ಲಿನ ಶ್ರೀ ಶಾಂತಮಲ್ಲಿಕಾರ್ಜುನಸ್ವಾಮಿ ಅವರ ಜತೆ ಸಂವಾದ ನಡೆಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜ್ ಇದ್ದರು.
ಯಳಂದೂರು: ಬಿಳಿಗಿರಿರಂಗನ ಪ್ರಶಾಂತವಾದ ಬನದಲ್ಲಿ ಹಲವು ದಶಕಗಳವರೆಗೆ ಇದ್ದ ಶ್ರೀ ನಿರ್ಮಲಾನಂದರು ಈ ಬನದ ಸಂತರಾಗಿ ಪಾರಿವ್ರಾಜಕ ಸನ್ಯಾಸಿಯಾಗಿ ಮಾರ್ಗದರ್ಶಕರಾಗಿ ಕಾಲ ಕಳೆದು ಇಲ್ಲಿಂದ ಅನೇಕರಿಗೆ ವಿಶ್ವಮಾನವ ಸಿದ್ಧಾಂತವನ್ನು ಪ್ರತಿಪಾದಿಸಿದ ಸಾಧಕರು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಬಣ್ಣಿಸಿದರು.
ಬಿಳಿಗಿರಿರಂಗನ ಬೆಟ್ಟದಲ್ಲಿರುವ ವಿಶ್ವಶಾಂತಿ ನಿಕೇತನ ಆಶ್ರಮಕ್ಕೆ ಗುರುವಾರ ಸಂಜೆ ಭೇಟಿ ನೀಡಿ ಶ್ರೀ ಶಾಂತಮಲ್ಲಿಕಾರ್ಜುನಸ್ವಾಮಿ ಅವರ ಜತೆ ಸಂವಾದ ನಡೆಸಿ ಮಾತನಾಡಿದರು.
ಬೆಟ್ಟದ ಸುಂದರ ಪರಿಸರದಲ್ಲಿ ಇಂತಹ ಒಬ್ಬ ಯೋಗಿ ಒಬ್ಬ ಯೋಧನಾಗಿ, ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿ ಆ ಸಾವು-ನೋವುಗಳನ್ನು ಕಂಡು ಇದು ಬೇಡವೆಂದು ಬಿಟ್ಟು, ಇಡೀ ವಿಶ್ವದ ಹಲವು ದೇಶಗಳು, ಭಾರತದ ಹಲವು ರಾಜ್ಯಗಳನ್ನು ಸಂದರ್ಶಿಸಿ ಅಲ್ಲಿನ ಸಂತರನ್ನು ಭೇಟಿ ಮಾಡಿ ವಿನೋಬ ಭಾವೆ ನಡೆಸಿದ ಭೂದಾನ ಚಳುವಳಿಯಲ್ಲೂ ಭಾಗವಹಿಸಿ ನಂತರ 1964ರಲ್ಲಿ ಕರ್ನಾಟಕಕ್ಕೆ ಬಂದು ತಗಡೂರಿಗೆ ಬಂದು ಅಲ್ಲಿಂದ ಬಿ.ರಾಚಯ್ಯ ಅವರು ಬಿಳಿಗಿರಿರಂಗನಬೆಟ್ಟದಲ್ಲಿ ನೀಡಿದ ಜಮೀನಿನಲ್ಲಿ ನೆಲೆ ನಿಂತು ಇಲ್ಲಿ ಆಶ್ರಮವನ್ನು ಕಟ್ಟಿ, ಇದರಲ್ಲಿ ಆಧ್ಯಾತ್ಮವನ್ನು ಕಂಡುಕೊಂಡು, ಪ್ರಾಣಿ, ಪಕ್ಷಿಗಳ ಒಡನಾಟದೊಂದಿಗೆ ಬೆಳೆದರು. ಇಲ್ಲೇ ಅಧ್ಯಯನ ಮಾಡಿ ಅನೇಕ ಸಂಸ್ಕೃತ, ಕನ್ನಡ, ಆಂಗ್ಲ ಕೃತಿಗಳನ್ನು ರಚಿಸಿ, ತಾವಾಯಿತು, ತಮ್ಮ ಆಶ್ರಮವಾಯಿತು ಎಂಬಂತೆ ಇಲ್ಲಿಗೆ ಭೇಟಿ ನೀಡುವ ಸಂದರ್ಶಕರಿಗೆ ಸತ್ಯದ ಪರಿಚಯ ಮಾಡಿಕೊಡುವ ವಿಶ್ವಧರ್ಮದ ಸಿದ್ಧಾಂತದ ಪ್ರತಿಪಾದಕರಾಗಿ ಮಾರ್ಗದರ್ಶನ ನೀಡಿ ಕೊನೆಗೆ ತಾವೇ ಇಚ್ಛಾಮರಣಿಯಾಗಿದ್ದು ಸೋಜಿಗವಾಗಿದೆ. ಬೆಟ್ಟಕ್ಕೆ ಭೇಟಿ ನೀಡುವವರು ಈ ಆಶ್ರಮಕ್ಕೆ ಭೇಟಿ ನೀಡಬೇಕು. ಈ ಪ್ರಶಾಂತ ಪರಿಸರ ಆಕರ್ಷಣೀಯವಾಗಿದ್ದು ಮನಃಶಾಂತಿ ಲಭಿಸುತ್ತದೆ ಎಂದರು.
ಆಶ್ರಮದ ಈಗಿನ ಸ್ವಾಮಿಜಿ ಶಾಂತಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ನಿರ್ಮಲಾನಂದರ 1924ರಲ್ಲಿ ಕೇರಳದಲ್ಲಿ ಜನಿಸಿದರು. ಇವರ ಮೂಲ ಹೆಸರು ಬಾಲಕೃಷ್ಣನ್ ಆಗಿದ್ದು 1943ರಲ್ಲಿ ಯೋಧರಾಗಿ ಎರಡನೇ ಮಹಾಯುದ್ಧದ ಸಂದರ್ಭದಲ್ಲೂ ಭಾಗಿಯಾಗಿ ನಂತರ ಅಂಚೆ ಸೇವೆಯನ್ನು ಮಾಡಿದ್ದಾರೆ. ನಂತರ ಸತ್ಯಾನ್ವೇಷಣೆಯಲ್ಲಿ ತೊಡಗಿಕೊಂಡ ಇವರು ಭಾರತದ ಡಿಬುಗಢದಿಂದ ಡಾರ್ಜಲಿಂಗ್, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಇಸ್ರೇಲ್, ತುರ್ಕಿ, ಯುರೋಪ್, ಅಮೇರಿಕ, ಇಂಗ್ಲೆಂಡ್, ಫ್ರಾನ್ಸ್ ಸೇರಿದಂತೆ ಅನೇಕ ರಾಷ್ಟ್ರಗಳಿಗೆ ಭೇಟಿ ನೀಡಿ 15 ಸಾವಿರ ಮೈಲು ಪ್ರಯಾಣ ಮಾಡಿ 222 ಆಶ್ರಮಗಳನ್ನು ಭೇಟಿ ಮಾಡಿ ಸತ್ಯಾನ್ವೇಷಣೆಯಲ್ಲಿ ತೊಡಗಿದ್ದರು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜು, ಸಿಪಿಐ ಸುಬ್ರಹ್ಮಣ್ಯ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ವಿ.ಚಂದ್ರು, ಟಿಎಪಿಸಿಎಂಎಸ್ ಅಧ್ಯಕ್ಷ ಜೆ.ಯೋಗೇಶ್, ಪಿಡಿಒ ಶಶಿಕಲಾ ಮುಖಂಡರಾದ ವೆಂಕಟೇಶ್, ಮಹದೇವ್ ಪ್ರಸಾದ್, ಯರಿಯೂರು ಜಯಣ್ಣ ಸೇರಿದಂತೆ ಅನೇಕರು ಇದ್ದರು.