Various religious leaders from the country visited the place where the statue of Sri Mahadeshwara is located on Malemahadeshwara Hill. 
ಚಾಮರಾಜನಗರ

ಅನಾಗರಿಕತೆ, ಮೂಢನಂಬಿಕೆ ಹೋಗಲಾಡಿಸಿದವರು ಶ್ರೀ ಮಹದೇಶ್ವರರು

ಹನೂರು:

ಕತ್ತಲೆ ರಾಜ್ಯದಲ್ಲಿದ್ದ ಅಜ್ಞಾನ, ಅನಾಗರಿಕತೆ ಹಾಗೂ ಮೂಢನಂಬಿಕೆಯನ್ನು ಹೊಗಲಾಡಿಸಿದವರು ಪವಾಡ ಪುರುಷ ಶ್ರೀ ಮಹದೇಶ್ವರರು ಎಂದು ಮೈಸೂರು ಕುಂದೂರು ಮಠದ ಶ್ರೀ ಶರತ್‌ಚಂದ್ರ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ವೇದಾಗಮ ಸಂಸ್ಕೃತ ಪಾಠಶಾಲೆಯ ಸಭಾಂಗಣದಲ್ಲಿ ಸೋಮವಾರ ಮೈಸೂರು ಚಾಮರಾಜನಗರ ಜಿಲ್ಲಾ ವೀರಶೈವ ಲಿಂಗಾಯತ ಮಠಾಧಿಪತಿಗಳ ಗೋಷ್ಠಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಶ್ರೀ ಮಹದೇಶ್ವರರ ಜೀವನ ಮತ್ತು ಸಾಹಿತ್ಯ ಕುರಿತ ಮೊದಲನೇ ಗೋಷ್ಠಿಯಲ್ಲಿ ಶ್ರೀಗಳು ಮಾತನಾಡಿ, ಉತ್ತರ ದೇಶದಿಂದ ಕತ್ತಲೆ ರಾಜ್ಯಕ್ಕೆ ಆಗಮಿಸಿದ ಶ್ರೀ ಮಹದೇಶ್ವರರು ಕಾಡಿನಲ್ಲಿ ವಾಸಿಸುತ್ತಿದ್ದ ಜನರಲ್ಲಿ ಅನಾಗರಿಕತೆ, ಅಜ್ಞಾನ ಹಾಗೂ ಮೂಢನಂಬಿಕೆ ತಾಂಡವಾಡುತಿತ್ತು. ಶ್ರೀ ಮಹದೇಶ್ವರರು ಬೇಡಗಂಪಣರಿಗೆ ಲಿಂಗದೀಕ್ಷೆ ನೀಡಿ ಪೂಜೆ ಸಲ್ಲಿಸುವ ಅವಕಾಶ ನೀಡಿದರು. ಹಲವು ಪವಾಡಗಳ ಮೂಲಕ ಭಕ್ತರ ಕಷ್ಟ ಕಾರ್ಪಣ್ಯವನ್ನು ಪರಿಹರಿಸಿದರು. ಇದೀಗ ಮಾದಪ್ಪನ ಸನ್ನಿಧಿ ವಿವಿಧ ರಾಜ್ಯದ ಭಕ್ತರು ಭೇಟಿ ನೀಡುವ ಪುಣ್ಯ ಕ್ಷೇತ್ರವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಬೇಲಿ ಮಠದ ಶ್ರೀ ಶಿವರುದ್ರ ಸ್ವಾಮೀಜಿ ಮಾತನಾಡಿ, ಶ್ರೀ ಮಹದೇಶ್ವರರು ನೆಲೆಸಿರುವ ಈ ಸ್ಥಳ ಸಾಮಾನ್ಯವಾದುದಲ್ಲ. ಕಲ್ಯಾಣ ರಾಜ್ಯದ ಹಲವು ಶರಣರು ಈ ಭಾಗಕ್ಕೆ ಆಗಮಿಸಿರುವುದಕ್ಕೆ ಗ್ರಾಮಗಳಲ್ಲಿನ ಕುರುಹುಗಳು ಸಾಕ್ಷಿಯಾಗಿವೆ ಎಂದರು.

ಬಳಿಕ ಶ್ರೀ ಗುರುಮಲ್ಲೇಶ್ವರರು, ಶ್ರೀ ಕಂಬಳೀಶ್ವರರು ಮತ್ತು ಶ್ರೀ ಕೆಂಡಗಣ್ಣ ಸ್ವಾಮೀಜಿ ಅವರ ಜೀವನ ಮತ್ತು ಸಾಹಿತ್ಯ ಕುರಿತ 3ನೇ ಗೋಷ್ಠಿಯಲ್ಲಿ ಮೈಸೂರು ವಿವಿಯ ಹಿರಿಯ ಪ್ರಾಧ್ಯಾಪಕ ಡಾ.ಡಿ.ಎಸ್.ಗುರು ಉಪನ್ಯಾಸ ನೀಡಿದರು. ಬಳಿಕ ಸಮಾಜ ಸೇವೆ ಮತ್ತು ಆಧ್ಯಾತ್ಮ ಸಾಧನೆ ಹಾಗೂ ಮಠಾಧಿಪತಿಗಳ ಜೀವನ ಸಮನ್ವಯ ಕುರಿತ ಸಂವಾದ ಕಾರ್ಯಕ್ರಮ ನಡೆಯಿತು. ಈ ವೇಳೆ ವಿವಿಧ ಶ್ರೀಗಳು ಮಾಹಿತಿ ಹಂಚಿಕೊಂಡರು. ಇದೇ ವೇಳೆ ಮಾಜಿ ಶಾಸಕ ಆರ್.ನರೇಂದ್ರ ಅವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಶ್ರೀಗಳು ಶ್ರೀ ಮಹದೇಶ್ವರ ಪ್ರತಿಮೆ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಹುಬ್ಬಳ್ಳಿ ಶ್ರೀ ಮೂರು ಸಾವಿರ ಮಠದ ಶ್ರೀ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ, ನೆಲಮಂಗಲ ಶ್ರೀ ಪವಾಡ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಬಳ್ಳಾರಿಯ ಕಲ್ಯಾಣ ಸ್ವಾಮಿ ಮಠದ ಶ್ರೀ ಕಲ್ಯಾಣ ಸ್ವಾಮೀಜಿ, ಇಳಕಲ್ ಶ್ರೀ ವಿಜಯ ಮಹಾಂತೇಶ್ವರ ಮಠದ ಶ್ರೀ ಗುರು ಮಹಾಂತ ಸ್ವಾಮೀಜಿ, ಬಸವ ಕಲ್ಯಾಣ ಅಂತಾರಾಷ್ಟ್ರೀಯ ಲಿಂಗಾಯತ ಧರ್ಮಕೇಂದ್ರದ ಡಾ.ಮಾತೆ ಗಂಗಾಂಬಿಕೆ, ಅಥಣಿ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ, ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ರಾಜ್ಯದ ವಿವಿಧೆಡೆಯಿಂದ ಸುಮಾರು 200ಕ್ಕೂ ಶ್ರೀಗಳು ಇದ್ದರು.